

ಬೆಂಗಳೂರು: ಇನ್ನು ಮುಂದೆ ಬಿಬಿಎಂಪಿ ಶಿಸ್ತುಬದ್ಧವಾಗಲಿದೆ. ಸಮಯಪ್ರಜ್ಞೆ ಹಾಗೂ ದಕ್ಷತೆ ಮೂಡಿಸುವುದರ ಜತೆಗೆ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಬಿಬಿಎಂಪಿಯ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಗೂ ವಲಯ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಬಿಬಿಎಂಪಿ ಸಿಬ್ಬಂದಿ ಮತ್ತು ಆಡಳಿತ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಮಾಹಿತಿ ನೀಡಿ ದ್ದಾರೆ. ಬಿಬಿಎಂಪಿಯಲ್ಲಿ ಸಮಿತಿಯ ಮೊದಲ ಸಭೆ ನಡೆದ ನಂತರ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳು ಎಂದರೆ ಶಿಸ್ತಿಲ್ಲದವರು ಎಂಬ ದೂರು ಕೇಳಿಬರುತ್ತಿದೆ. ಬೆಳಗ್ಗೆ 10 ಗಂಟೆಗೆ ಬರಬೇಕಾದ ಅಧಕಾರಿಗಳು ತಡವಾಗಿ ಬಂದು ಸಂಜೆ ಬೇಗನೆ ಹೋಗುತ್ತಾರೆ.
ಇದನ್ನು ನಿಯಂತ್ರಿಸಲು ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲು ನಿರ್ಧರಿಸಲಾಗಿದೆ. ಕಚೇರಿಗಳಲ್ಲಿ ಸಾಮಾನ್ಯವಾಗಿ ಅಧಿಕಾರಿಗಳು ಪುಸ್ತಕದಲ್ಲಿ ಹಾಜರು ಬರೆದು ವೇತನ ಪಡೆ ಯುತ್ತಾರೆ. ಬಯೋಮೆಟ್ರಿಕ್‍ನಲ್ಲಿ ಹಾಜರಾತಿ ಕಡಿಮೆ ಇದ್ದರೆ ವೇತನವನ್ನೂ ಕಡಿತಗೊಳಿಸುವಂತೆ ಸೂಚಿಸಲಾಗಿದೆ.
ಅಕ್ರಮಕ್ಕೆ ಕಡಿವಾಣ ಹಾಕಲು ಎಲ್ಲ ವಲಯ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಕಚೇರಿಯಲ್ಲಿ ಏನಾದರೂ ಅಕ್ರಮ ನಡೆದರೆ ಅದಕ್ಕೆ ಕಾರಣರಾದವರನ್ನು ಗುರುತಿಸಲು ನೆರವಾಗುತ್ತದೆ ಎಂದರು.
ವರ್ಗಾವಣೆ:
ಎರವಲು ಸೇವೆಯಲ್ಲಿರುವ ಅಧಿಕಾರಿಗಳು ನಿಯಮ ಪ್ರಕಾರ ಹೊಂದಿರುವ ಸೇವಾವಧಿ ಮುಗಿದಿದ್ದರೂ, ಕಚೇರಿಯಲ್ಲಿ ಮುಂದುವರಿಯುತ್ತಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ ಇಂತಹ 200 ಅಧಿಕಾರಿಗಳನ್ನು ಗುರುತಿಸಲಾಗಿದೆ. ನಿಯಮದ ಪ್ರಕಾರ ಎರವಲು ಸೇವೆ ಮೇಲೆ ಬಂದ ಅಧಿಕಾರಿಗಳು 3 ಅಥವಾ 5 ವರ್ಷ ಪೂರೈಸಿದ ಬಳಿಕ ವರ್ಗಾವಣೆಯಾಗಬೇಕು. ಆದರೆ, ಅನೇಕ ಅಧಿಕಾರಿಗಳು ಇನ್ನೂ ಕಚೇರಿಯಲ್ಲಿದ್ದಾರೆ.
ಮೇಯರ್ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಕಸ ವಿಲೇವಾರಿ ಸಮರ್ಪಕವಾಗಿ ನಡೆಯಲು ಬೆಳಗ್ಗೆ ಮಸ್ಟರಿಂಗ್ ಕೇಂದ್ರಕ್ಕೆ ಕಡ್ಡಾಯ ಭೇಟಿ ನೀಡಲು ಸೂಚಿಸಲಾಗಿದೆ. ಸಮಿತಿಯ ಸದಸ್ಯರು ಕೂಡಾ ದಿಢೀರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.