

ಬೆಂಗಳೂರು: ತೆರಿಗೆ ವಂಚನೆ ಸಂಬಂಧಿಸಿದಂತೆ ವಾಸೂ ಬಿಲ್ಡರ್ಸ್ ಪ್ರೈವೇಟ್ ಲಿ. ಎಂಡಿ ಸಾಗರ್ ಬಿ. ಮುತ್ತಪ್ಪ ಎಂಬುವರನ್ನು ಕೇಂದ್ರ ಅಬಕಾರಿ ಗುಪ್ತದಳ ನಿರ್ದೇಶನಾಲಯ ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಗುತ್ತಿಗೆ ಸೇವೆ ಒದಗಿಸುವುದು ಕೆಲಸದಲ್ಲಿ ತೊಡಗಿರುವ ವಾಸೂ ಬಿಲ್ಡರ್ಸ್ ಗ್ರಾಹಕರಿಂದ ಒಟ್ಟು ರು.3.24 ಕೋಟಿ ಸೇವೆ ತೆರಿಗೆಯನ್ನು ಸಂಗ್ರಹಿಸಿದ್ದು ಅದನ್ನು ಸರ್ಕಾರದ ಖಾತೆಗೆ ಪಾವತಿಸಿಲ್ಲ. ಸೇವಾ ತೆರಿಗೆ ವಂಚನೆ ಸಂಬಂಧ ಮಾಹಿತಿ ಸಂಗ್ರಹಿಸಿದ ಗುಪ್ತದಳ ಅಧಿಕಾರಿಗಳು ರಿಚ್‍ಮಂಡ್ ಟೌನ್ ವೆಲ್ಲಿಂಗ್‍ಟನ್ ಸ್ಟ್ರೀಟ್ ನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಮೇಲೆ ವಾಣಿಜ್ಯ ಸಂಕೀರ್ಣಗಳು, ವಸತಿಗೃಹ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ವಾಸೂ ಬಿಲ್ಡರ್ಸ್ ತೆರಿಗೆ ಅಡಿ ಸೇವೆಗಳನ್ನು ನೀಡುತ್ತಿದೆ.
ಈ ಮೂಲಕ 2010-11 ರಿಂದ 2015-16ನೇ ಸಾಲಿನಲ್ಲಿ ಸಂಗ್ರಹಿಸಿದ್ದ ಒಟ್ಟು ರು.3.24 ಕೋಟಿ ತೆರಿಗೆಯನ್ನು ಸರ್ಕಾರದ ಖಾತೆಗೆ ಪಾವತಿಸಿಲ್ಲ. ಹೀಗಾಗಿ ಸಂಸ್ಥೆಯಿಂದ ಬಡ್ಡಿ ಸೇರಿ ಒಟ್ಟು ರು.5ಕೋಟಿ ಹಣವನ್ನು ವಸೂಲಿ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕ ಕಾಯ್ದೆ: 1994ರ ಪ್ರಕಾರ ಯಾರೇ ಆಗಲಿ ರು.50 ಲಕ್ಷಕ್ಕಿಂಗ ಅಧಿಕ ಸೇವೆ ತೆರಿಗೆ ಹಣ ಸಂಗ್ರಹಿಸಿ ಅದನ್ನು ಆರು ತಿಂಗಳ ಒಳಗಾಗಿ ಸರ್ಕಾರದ ಖಾತೆಗೆ ಜಮಾ ಮಾಡಲು ವಿಫಲರಾದರೆ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಸಾಗರ್ ಬಿ. ಮುತ್ತಪ್ಪರನ್ನು ಬಂಧಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅ.15ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಲಾಗಿದೆ.