

ಬೆಂಗಳೂರು: ಬಿಬಿಎಂಪಿಗೆ ಬಾಡಿಗೆ ಪಾವತಿಸಲಾಗದೆ, ಮಳಿಗೆಯನ್ನು ಮರಳಿ ಪಡೆಯಲಾಗದೆ, ಮುಚ್ಚಿದ ಮಳಿಗೆ ಮುಂಭಾಗವೇ ತಾತ್ಕಾಲಿಕವಾಗಿ ಮಳಿಗೆ ಹಾಕಿದ್ದ ಎಪಿಎಂಸಿ ಕ್ರಮಕ್ಕೆ ಪಾಲಿಕೆ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆ ಸಮಿತಿಯು ಕೆ.ಆರ್ ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಕೃಷಿ ಉತ್ಪನ್ನದ ಮಾರುಕಟ್ಟೆಯ ಈ ವಿಚಿತ್ರ ಸ್ಥಿತಿ ಅರಿವಿಗೆ ಬಂತು. ಎಪಿಎಂಸಿ ಕಚೇರಿಗೆ ಬೀಗ ಹಾಕಿ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಸಮಿತಿಯ ನೌಕರರು ಆ ಕಚೇರಿಯ ಮುಂದೆ ಟಾರ್ಪಲ್ ಕಟ್ಟಿಕೊಂಡು ಟೇಬಲ್ ಮತ್ತು ಕುರ್ಚಿ ಹಾಕಿಕೊಂಡು ಬಳಕೆದಾರರಿಂದ ಶುಲ್ಕ ಪಡೆಯುತ್ತಿದ್ದದ್ದು ಬೆಳಕಿಗೆ ಬಂದಿತು. ಎಪಿಎಂಸಿ ಪಾಲಿಕೆಗೆ ಡಿ.2015ರವರೆಗೆ ರು.2.10 ಕೋಟಿ ಬಾಕಿ ಪಾವತಿಸಬೇಕಿದ್ದರೂ, ಕಾನೂನು ಬಾಹಿರವಾಗಿ ಕಚೇರಿ ಚಟುವಟಿಕೆ ನಡೆಸುತ್ತಿರುವುದನ್ನು ಕಂಡು, ಸಮಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಜಯನಗರ ವಾಣಿಜ್ಯ ಸಂಕೀರ್ಣ ಪರಿಶೀಲಿಸಲಾಯಿತು. ಸಂಕೀರ್ಣದಲ್ಲಿ ಕೆ.ಪ್ರಭಾಕರ್ ರಾವ್ ಎಂಬುವರು ಮಹಾರಾಜ ಕೋಲ್ಡ್ ಸ್ಟೋರೆಂಜ್ ನಡೆಸುತ್ತಿದ್ದು, ಇದಕ್ಕೆ ಅವರು ಮಾಸಿಕ ರು.11,000 ಮಾತ್ರ ಪಾವತಿಸುತ್ತಿರುವುದು ಸಮಿತಿ ಗಮನಕ್ಕೆ ಬಂದಿತು. ಬಾಡಿಗೆದಾರರು ಬಾಡಿಗೆ ಪರಿಷ್ಕರಣೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಕರಣ ಇತ್ಯರ್ಥವಾಗದೆ ಬಾಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪಾಲಿಕೆಯ ಕಾನೂನು ಕೋಶವು ಈ ಬಗ್ಗೆ ಗಮನಹರಿಸಬೇಕು. ಬಾಕಿ ಮೊತ್ತ ಸುಮಾರು ರು.2 ಕೋಟಿಯಾಗಿದ್ದು, ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.