ಜಿಲ್ಲಾ ಸುದ್ದಿ

ಬಿಜೆಪಿ ವಿರುದ್ಧ ಬೀದಿಗಿಳಿದು ಹೋರಾಡಲಿರುವ ಕಾಂಗ್ರೆಸ್

ಬಿಜೆಪಿ ವಿರುದ್ಧ ಬೀದಿಗಿಳಿದು ಹೋರಾಡಲಿರುವ ಕಾಂಗ್ರೆಸ್
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಬಿಬಿಎಂಪಿ ಗದ್ದುಗೆ ಗುದ್ದಾಟ ರಾಜಕೀಯ ಪಕ್ಷಗಳ ಮಧ್ಯೆ ಬಹಿರಂಗ ಹೋರಾಟಕ್ಕೆ ಕಾರಣವಾಗಿದ್ದು, ರಾಜಭವನಕ್ಕೆ ಪಾದಯಾತ್ರೆ ಮಾಡಿದ್ದ ಬಿಜೆಪಿ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ರಣಹೇಡಿ ಎಂದು ನಿಂದಿಸಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಮತ್ತು ಬೆಂಗಳೂರು ನಗರದ ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ಮುಖಂಡರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಬಿಬಿಎಂಪಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರು. ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು ಮುಂಚೂಣಿ ಘಟಕದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಕಳೆದ 10 ವರ್ಷದಲ್ಲಿ ಆರ್.ಅಶೋಕ ಅವರು ಬೆಂಗಳೂರು ನಗರದಲ್ಲಿ ನಡೆಸಿದ ಅವ್ಯವಹಾರವನ್ನು ಬಯಲುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಜಯನಗರ ಸಾಮ್ರಾಟನಾ?
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಬಿಜೆಪಿ ನಾಯಕರೇ ಆರ್.ಅಶೋಕ ಅವರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಹೀಗಾಗಿ ಹತಾಸರಾಗಿರುವ ಅವರು ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅಶೋಕ ಅವರು ಪಕ್ಷೇತರ ಸದಸ್ಯರನ್ನು ಕೀಳಾಗಿ ನಡೆಸಿಕೊಂಡಿದ್ದರಿಂದಲೇ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. 100 ವಾರ್ಡ್ ಗಳಲ್ಲಿ ಬಿಜೆಪಿ ಗೆದ್ದ ತಕ್ಷಣ ಮನಸಿಗೆ ಬಂದಂತೆ ಆಡುವುದಕ್ಕೆ ಅಶೋಕ ಏನು ವಿಜಯನಗರ ಸಾಮ್ರಾಟರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಲೀಗಲ್ ನೋಟಿಸ್ ತಂತ್ರ

ಪಕ್ಷೇತರರನ್ನು ಕೀಳಾಗಿ ನಡೆಸಿಕೊಂಡ ಕಾರಣಕ್ಕಾಗಿ ಅವರು ನಮ್ಮತ್ತ ಬಂದರು. ನಾವಾಗಿಯೇ ಮೈತ್ರಿ ಪ್ರಸ್ತಾಪಕ್ಕೆ ಕೈ ಹಾಕಿರಲಿಲ್ಲ. ಆದರೆ ಈಗ ಬಿಜೆಪಿಯವರು ನಡೆಸುವ ಯಾವುದೇ ಕುತಂತ್ರಗಳಿಗೆ ನಾವು ಬಲಿಯಾಗುವುದಿಲ್ಲ. ಕಾಂಗ್ರೆಸ್‍ನ ಎಲ್ಲ ಸದಸ್ಯರು ಒಟ್ಟಾಗಿದ್ದಾರೆ. ಬಿಜೆಪಿಯ ಯಾವುದೇ ಸದಸ್ಯರನ್ನು ನಮ್ಮತ್ತ ಸೆಳೆಯುವುದಕ್ಕೆ ಪ್ರಯತ್ನ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರಿಗೆ ಅಶೋಕ ಲೀಗಲ್ ನೋಟಿಸ್ ನೀಡಿರುವುದು ಕೇವಲ ಪ್ರಚಾರ ತಂತ್ರ ಎಂದು ಆರೋಪಿಸಿದರು.

ಷರತ್ತು ವಿಧಿಸಿಲ್ಲ:
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಮ್ಯಾಜಿಕ್ ನಂಬರ್ ಇದ್ದರೆ ಜಾತ್ಯತೀತ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ನಮ್ಮ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದೆ. ಮೈತ್ರಿ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಮಗೆ ಯಾವುದೇ ಷರತ್ತನ್ನು ವಿಧಿಸಿಲ್ಲ. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಮತ್ತು ಬೆಂಗಳೂರಿನ ಅಭಿವೃದ್ಧಿ ದೃಷ್ಠಿಯಿಂದ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆ ಸಂಸ್ಕೃತಿಯ ಪಕ್ಷದಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಬಿಬಿಎಂಪಿ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ. ಆದರೆ ಸೋಮವಾರ ಬೆಳಗ್ಗೆ ಆನಂದ್‍ರಾವ್ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ನಿರ್ಧಾರ: ಬಿಬಿಎಂಪಿ ಕಾಂಗ್ರೆಸ್ ಸದಸ್ಯರನ್ನು ರೆಸಾರ್ಟ್‍ಗೆ ಸ್ಥಳಾಂತರಿಸುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಸೋಮವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಪ್ರತಿಯೊಬ್ಬ ಸದಸ್ಯರ ಜತೆಯೂ ಮುಖಂಡರು ಚರ್ಚೆ ನಡೆಸಿದ್ದು, ನಮ್ಮ ಮೇಲೆ ನಂಬಿಕೆ ಇಡಿ. ರೆಸಾರ್ಟ್‍ಗೆ ಹೋಗುವುದು ಬೇಡ ಎಂದು ಹೇಳಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.