

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದಾಗ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಮೆಜೆಸ್ಟಿಕ್, ಗಾಂಧಿನಗರ, ಶಿವಾಜಿನಗರ ಸೇರಿದಂತೆ ನಗರದ ವಿವಿಧಕಡೆ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನ ಸವಾರರು ಮನೆ ತಲುಪಲು ಪರದಾಡುತ್ತಿದ್ದಾರೆ.
ಶಾಂತಿನಗರ, ಶೇಷಾದ್ರಿಪುರ, ಬಾಪೂಜಿನಗರ, ಈಜಿಪುರ, ಮಾಗಡಿರಸ್ತೆ, ಇಂದಿರಾನಗರ, ಚಾಮರಾಜಪೇಟೆ, ರಾಜಾಜಿನಗರ, ಕೆ.ಆರ್,ವೃತ್ತ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.
ರಸ್ತೆಗಳು ಹಳ್ಳಗಳಂತಾದರೆ, ತಗ್ಗು ಪ್ರದೇಶಗಳು ಕೆರೆಗಳಾಗಿದ್ದು, ರಸ್ತೆ ಯಾವುದು, ಹೊಂಡ ಯಾವುದು ಎಂದು ಗುರುತಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುತ್ತಿದ್ದಾರೆ.