

ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ವಿರುದ್ಧ ಸೆ. 11ರಂದು ಬಿಬಿಎಂಪಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುನಿರಾಜು ಗೌಡ ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿ ಜನಾದೇಶ ಪಡೆದಿದ್ದರೂ, ಕಾಂಗ್ರೆಸ್ ಅಕ್ರಮ ಹಾದಿಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ. ಇದಕ್ಕೆ ಜೆಡಿಎಸ್ ಕೂಡ ಕೈ ಜೋಡಿಸಿದೆ. ಇಷ್ಟೂ ದಿನ ಜೆಡಿಎಸ್ ಉತ್ತಮ ದಾರಿಯಲ್ಲಿ ಹೋಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದು ಸುಳ್ಳಾಗಿದ್ದು ಜೆಡಿಎಸ್ ನ ಬಣ್ಣ ಬಯಲಾಗಿದೆ. ಆದ್ದರಿಂದ ಇವರಿಬ್ಬರ ವಿರುದ್ದ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿಕೊಂಡು ಬೆಂಗಳೂರು ವಿಭಜನೆ ಮಾಡುತ್ತಿವೆ. ನಗರಕ್ಕೆ ಇರುವ ಖ್ಯಾತಿಯನ್ನು ನಾಶ ಮಾಡುತ್ತಿವೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.