

ಬೆಂಗಳೂರು: ನಗರದಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ಮಂಗಳೂರು ಮೂಲದ ರೆಜಿನಾಲ್ಡ್ (64) ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಸೋಮವಾರ (ಸೆ.7) ಮಧ್ಯಾಹ್ನ 2.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮೊಬೈಲ್ ಫೋನ್‍ನಿಂದ ಕರೆ ಮಾಡಿದ ಆರೋಪಿ, ಬೆಂಗಳೂರು ನಗರದಲ್ಲಿ ಬಾಂಬ್ ಇಟ್ಟು ಸ್ಪೋಟಿಸುತ್ತೇನೆ ಎಂದು ಬೆದರಿಕೆ ಹಾಕಿ ಫೋನ್ ಇಟ್ಟಿದ್ದ. ನಿರ್ದಿಷ್ಟ ಜಾಗ ಸೇರಿದಂತೆ ಯಾವುದೇ ವಿವರ ಹೇಳಿರಲಿಲ್ಲ.
ಈ ಹಿನ್ನೆಲೆಯಲ್ಲಿ ನಿಯಂತ್ರಣ ಕೊಠಡಿ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಫೋನ್ ಕರೆ ಮೊಬೈಲ್‍ನಿಂದ ಬಂದಿದ್ದರಿಂದ ವಿಳಾಸದ ಆಧಾರದ ಮೇಲೆ ಜಾಡು ಹಿಡಿದ ಪೊಲೀಸರು ಮಂಗಳೂರಿನ ಕರೆ ಎಂದು ಅರಿತು ಮಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.