

ಬೆಂಗಳೂರು: ಇತ್ತೀಚಿನ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನೂತನ ಲೋಕಾಯುಕ್ತರನ್ನು ನೇಮಕ ಮಾಡಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂತೋಷ್ ಹೆಗ್ಡೆ, 'ಕಳೆದ ಎರಡು ತಿಂಗಳಿಂದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ರಜೆಯಲ್ಲಿದ್ದಾರೆ. ಇದರಿಂದ ಬಾಕಿ ಉಳಿದ ಪ್ರಕರಣಗಳ ತನಿಖೆ ಮತ್ತಷ್ಟು ವಿಳಂಬವಾಗುತ್ತದೆ... ಸೂಕ್ತ ಸಮಯಕ್ಕೆ ಜನತೆಗೆ ನ್ಯಾಯ ದೊರೆಯಲ್ಲ' ಎಂದಿದ್ದಾರೆ.
ತಾತ್ಕಾಲಿಕ ಲೋಕಾಯುಕ್ತರನ್ನು ಸರ್ಕಾರ ನೇಮಕ ಮಾಡಬೇಕು. ಇದರಿಂದ ಬಾಕಿ ಪ್ರಕರಣಗಳ ತನಿಖೆ ಚುರುಕುಗೊಳಿಸಬಹುದು ಎಂದು ಮಾಜಿ ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಸಹ ತನಿಖೆಯನ್ನು ತ್ವರಿತಗೊಳಿಸಬೇಕು. ಇಲ್ಲದಿದ್ದರೆ ಸಾಕ್ಷ್ಯಗಳ ನಾಶಕ್ಕೆ ಯತ್ನಿಸುವ ಸಾಧ್ಯತೆ ಇದೆ ಎಂದರು.