

ಬೆಂಗಳೂರು: ಪದ್ಮನಾಭನಗರ ವಾರ್ಡ್‍ನ ಬಿಬಿಎಂಪಿ ಸದಸ್ಯೆ ಶೋಭಾ ಹಾಗೂ ದಾಸರಹಳ್ಳಿ ಕೆ.ಎ. ಹರಿಕೃಷ್ಣ ಅವರು ಕಡೇ ಕ್ಷಣದಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ತಡೆಯಾಜ್ಞೆ ಪಡೆಯಲು ನಡೆಸಿದ ಹೋರಾಟ ವಿಫಲವಾಯಿತು.
ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ಹಾಜರಾಗದ ಕಾರಣ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ತಡೆಯಾಜ್ಞೆ ಪಡೆಯಲು ಇದ್ದ ಕೊನೆ ಅವಕಾಶ ಕೈಚೆಲ್ಲಿ ಹೋಯಿತು.
ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯಲ್ಲಿ ಶಾಸಕರು ಮತ್ತು ಸಂಸದರು ಮತ ಚಲಾಯಿಸುವ ಕುರಿತು ಅವಕಾಶ ಕಲ್ಪಿಸದಂತೆ ಕೋರಿ ಬಿಜೆಪಿಯ ಐವರು ಬಿಬಿಎಂಪಿ ಸದಸ್ಯರು ತಕರಾರು ಅರ್ಜಿ ಸಲ್ಲಿಸಿದ್ದರು.
ಈ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಚುನಾವಣೆ ನಡೆಸಲು ಅನುಮತಿ ನೀಡಿದ್ದರು. ಈ ತಕರಾರು ಅರ್ಜಿ ದಾಖಲಾಗಿದ್ದ ಬೆನ್ನಲ್ಲೇ, ಇದೇ ಅಂಶದ ಮೇರೆಗೆ ಪದ್ಮನಾಭನಗರ ವಾರ್ಡ್ ಬಿಬಿಎಂಪಿ ಸದಸ್ಯೆ ಶೋಭಾ ಹಾಗೂ ದಾಸರಹಳ್ಳಿ ಕೆ.ಎ. ಹರಿಕೃಷ್ಣ ಎಂಬುವರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬೆಳಗ್ಗೆ ವಿಭಾಗೀಯ ಪೀಠದ ಎದುರು ವಿಚಾರಣೆಗೆ ಬಂದಿತ್ತು.
ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಾಗ ಅರ್ಜಿ ದಾರರ ಪರ ವಾದಿಸಬೇಕಿದ್ದ ಹಿರಿಯ ವಕೀಲ ವಿವೇಕ್ ರೆಡ್ಡಿ ವಿಚಾರಣೆಗೆ ಹಾಜರಾಗಲಿಲ್ಲ. ಇದರಿಂದ ಅರ್ಜಿಯನ್ನು ಸ್ವಲ್ಪ ಕಾಲದ ಬಳಿಕೆ ಮತ್ತೆ ವಿಚಾರಣೆ ಕರೆಯಲು ನಿರ್ಧರಿಸ ಲಾಯಿತು. ಮಧ್ಯಾಹ್ನ ಸುಮಾರು 1 ಗಂಟೆಗೆ ಅರ್ಜಿಯನ್ನು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಆಗ ವಿವೇಕ್ ರೆಡ್ಡಿ ಅವಸರದಿಂದ ಬಂದು ಪೀಠದ ಮುಂದೆ ಹಾಜರಾದರು. ಆದರೆ, ಅಷ್ಟೊತ್ತಿಗಾಗಲೇ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಿದ್ದರು.