

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ಆಡಳಿತದ ದೃಷ್ಟಿಯಿಂದ ಮತ್ತಷ್ಟು ಸುಧಾರಣೆ ತರಲು ಸರ್ಕಾರ ಮುಂದಡಿ ಇಡಲು ಮುಂದಾಗಿದೆ.
ಈ ಸಂಬಂಧ ರಾಜ್ಯದ ಇಬ್ಬರು ವೈದ್ಯಾಧಿಕಾರಿಗಳು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ, ಆರೋಗ್ಯ ಇಲಾಖೆಯ ಆಡಳಿತ ವ್ಯವಸ್ಥೆ ಕುರಿತಂತೆಯೇ ಸಣ್ಣದೊಂದು ಅಧ್ಯಯನ ನಡೆಸಿಕೊಂಡು ಬಂದಿದ್ದಾರೆ. ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ (ಆಹಾರ ಮತ್ತು ಸುರಕ್ಷತೆ ಕಾಯ್ದೆ) ಡಾ.ಶಿವಕುಮಾರ್ ಹಾಗೂ ಡಾ.ನಾರಾಯಣಸ್ವಾಮಿಯವರು ಅಮೆರಿಕಾಗೆ ತೆರಳಿದ್ದ ವೈದ್ಯರು. ಇವರು 10 ದಿನಗಳ ಕಾಲ ವಿವಿಧ ದೇಶದ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದಾರೆ.
ಆರೋಗ್ಯ ವ್ಯವಸ್ಥೆಯ ಆಡಳಿತ ಕುರಿತಾಗಿಯೇ ನಡೆದ ಈ ಅಧ್ಯಯನ ಕಾರ್ಯಕ್ರಮದಲ್ಲಿ 9 ದೇಶದ 24 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿವಿಧ ದೇಶಗಳ ಪ್ರತಿನಿಧಿಗಳು ಪ್ರಸ್ತಾಪಿಸುವ ಆರೋಗ್ಯ ಇಲಾಖೆ ವ್ಯವಸ್ಥೆಯ ಕುರಿತು ಮಾಹಿತಿ ಕಲೆ ಹಾಕಿರುವ ವೈದ್ಯರು, ರಾಜ್ಯ ಸರ್ಕಾರಕ್ಕೆ ಒಂದು ವಿಸ್ತøತ ವರದಿ ನೀಡಲಿದ್ದಾರೆ. ಇದರಲ್ಲಿ ರಾಜ್ಯವು ಅಳವಡಿಸಿಕೊಳ್ಳಬಹುದಾದ ಸುಧಾರಣಾ ಕ್ರಮಗಳು ಮತ್ತು ಅನುಷ್ಠಾನದ ಬಗ್ಗೆ ಶಿಫಾರಸನ್ನೂ ಮಾಡಲಿದ್ದಾರೆ. ಕಳೆದ ವಾರವಷ್ಟೆ ಬೆಂಗಳೂರಿಗೆ ವಾಪಸಾಗಿರುವ ಈ ವೈದ್ಯರು ವರದಿ ಸಿದಟಛಿಪಡಿಸುವ ಕಾರ್ಯದಲ್ಲಿ ಸಿದ್ಧರಾಗಿದ್ದಾರೆ. ಮುಂದುವರಿದ ದೇಶಗಳು ಅಳವಡಿಸಿಕೊಂಡಿರುವ ಆಡಳಿತ ಕ್ರಮಗಳು, ಸುಧಾರಣಾ ಕ್ರಮಗಳು, ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ವಿನಿಮಯವಾಗಿದೆ ಎಂದು ವೈದ್ಯರಾದ ಡಾ.ಶಿವಕುಮಾರ್ ತಿಳಿಸಿದ್ದಾರೆ.