

ಬೆಂಗಳೂರು: ಗೌರಿ, ಗಣೇಶ ಹಾಗೂ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ಗೌರಿ ಗಣೇಶ ಹಾಗೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಮತ್ತು 11 ದಿನಗಳೊಳಗೆ ಹಬ್ಬ ಮುಗಿಸಿಕೊಳ್ಳುವಂತೆ ಮನವಿ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಗಣೇಶ ಮಂಡಳಿ ಸಮಿತಿ ಹೆಸರಿನ ಬ್ಯಾನರ್ ಹಾಗೂ ಸಮಿತಿಯ ಪದಾಧಿಕಾರಿಗಳ ನಂಬರ್ ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದರು. ಅಲ್ಲದೆ 24 ಗಂಟೆಗಳ ಕಾಲ ಸ್ವಯಂ ಸೇವಕರನ್ನು ನಿಯೋಜಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸದರು.
ಇನ್ನು ಬಕ್ರೀದ್ ಹಬ್ಬ ಸಂಬಂಧ ನಾಗರಿಕ ಸಮಿತಿ ಸಭೆ ಸೇರಿದಂತೆ ಎಲ್ಲಾ ಕೋಮಿನ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದ್ದು, ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವಂತೆ ಸೂಚಿಸಲಾಗಿದೆ ಎಂದರು.
ಗಣೇಶ ಉತ್ಸವದ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದ್ದು, ಇದಕ್ಕಾಗಿ 24 ಕೆಎಸ್‌ಆರ್‌ಪಿ ತುಕಡಿ ಹಾಗೂ 40 ಸಿಎಆರ್ ತುಕಡಿ ಸೇರಿದಂತೆ ನಗರದಲ್ಲಿ ಒಟ್ಟು 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.