

ಬೆಂಗಳೂರು: ಕೆಐಎಎಲ್ ಹಾಗೂ ದೆಹಲಿ ಏರ್‍ಪೋರ್ಟ್‍ಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಹಾಗೂ ಸಂದೇಶ ಕಳುಹಿಸಿ ಬಂಧಿತನಾಗಿರುವ ಆರೋಪಿ ಎಂ.ಜಿ.ಗೋಕುಲ್ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ಸಿಸಿಬಿ ಪೊಲೀಸರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ.
`ನಾಗರಿಕ ವಿಮಾನಗಳ ಭದ್ರತೆಗೆ ಧಕ್ಕೆ ತರುವ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ'ಯನ್ನು (ಎಸ್‍ಯುಎಎಸ್‍ಸಿಎ) ಆರೋಪಿ ಗೋಕುಲ್ ವಿರುದ್ಧ ದಾಖಲಿಸಲಾಗಿದೆ. ಹುಸಿ ಕರೆಗೆ ಸಂಬಂಧಿಸಿದಂತೆ ಈ ಕಾಯ್ದೆ ಹಾಕಿರುವುದು ದೇಶದಲ್ಲೇ ಮೊದಲು.
ಈ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದರೆ ಪ್ರಾಸಿಕ್ಯೂಷನ್ ಗೆ ಒಳಪಡಿಸಲು ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಈ ಹಿನ್ನೆಲೆಯಲ್ಲಿ ಕಾಯ್ದೆ ಅನ್ವಯ ಗೋಕುಲ್ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿಮಾನಗಳಲ್ಲಿ ಮಾರಕ ಆಯುಧಗಳು, ಬಾಂಬ್‍ಗಳು ಸೇರಿದಂತೆ ಯಾವುದೇ ರೀತಿಯ ಜೀವಕ್ಕೆ ಹಾನಿ ಉಂಟು ಮಾಡುವ ವಸ್ತುಗಳ ಸಾಗಣೆ, ಬಳಕೆ ಹಾಗೂ ಸ್ಪೋಟಿಸುವ ಉದ್ದೇಶಹೊಂದಿರುವುದು ಹಾಗೂ ಸಂವಹನ ಮಾಧ್ಯಮದ ಮೂಲಕ ವಿಮಾನಕ್ಕೆ ಹುಸಿ ಕರೆ ಮಾಡಿ ವಿಮಾನಗಳ ಹಾರಾಟಕ್ಕೆ ಧಕ್ಕೆ ಉಂಟು ಮಾಡುವುದು ಕಾಯ್ದೆಯಲ್ಲಿ ಬರುತ್ತದೆ.
ಆರೋಪಿ ಗೋಕುಲ್ ದೆಹಲಿ ಏರ್‍ಪೋರ್ಟ್ ಗೂ ಕರೆ ಮಾಡಿದ್ದ ಕಾರಣ ಆತನನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಗೋಕುಲ್ ಕಸ್ಟಡಿ ಸೆ. 21ಕ್ಕೆ ಅಂತ್ಯಗೊಳ್ಳಲಿದೆ.