

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಳಂಬವಾಗುತ್ತಿರುವುದು ಮತ್ತಷ್ಟು ಸ್ಪಷ್ಟವಾಗಿದೆ. ಕೆಲ ಸಚಿವರಿಗೆ ಇದೇ ಕೊನೆ ಸಂಪುಟ ಸಭೆಯಾಗಬಹುದೆಂದು ನಿರೀಕ್ಷಿಸಲಾಗಿದ್ದ ಸೋಮವಾರದ ಸಭೆಯಲ್ಲಿ ಸಿಎಂ ಈ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.
ಸಿಎಂ ಸಿದ್ದರಾಮಯ್ಯ ಅವರ ಈ ನಡೆ ಹಲವು ಕುತೂಹಲಕ್ಕೆ ಎಡೆಮಾಡಿದೆ. ರಾಷ್ಟ್ರ ರಾಜಕಾರಣದಲ್ಲಿ ಮಗ್ನವಾಗಿರುವ ಹೈಕಮಾಂಡ್ ಜತೆ ಚರ್ಚಿಸದೇ ಸಂಪುಟ ಪುನಾರಚನೆ ಸರ್ಕಸ್ ಬಗ್ಗೆ ಅವರು ಸುಳಿವು ನೀಡಿದ್ದರು ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಈ ನಡೆ ಉದ್ದೇಶಪೂರ್ವಕವೇ? ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದಾಗ್ಯೂ ಕಾಂಗ್ರೆಸ್ ಮುಖಂಡರ ಲಾಬಿ ಸೋಮವಾರವೂ ಮುಂದುವರಿದಿತ್ತು. ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಹಲವು ಆಕಾಂಕ್ಷಿಗಳು ಭೇಟಿ ನೀಡಿ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೆ.25ರಂದು ದೆಹಲಿಗೆ ಮರಳಲಿದ್ದಾರೆ ಎಂಬ ಮಾಹಿತಿ ಅಧಿಕೃತವಾಗಿದೆ. ಅಲ್ಲಿಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುವುದು ದೃಢಪಟ್ಟಂತಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯನವರೇ ಹೈಕಮಾಂಡ್ ಜತೆ ಚರ್ಚಿಸಿ ಕೆಲ ದಿನಗಳ ಮಟ್ಟಿಗೆ ಸಂಪುಟ ವಿಸ್ತರಣೆ ಮುಂದೂಡುವ ಬಗ್ಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರ ಇರುವ ಈ ಸನ್ನಿವೇಶದಲ್ಲಿ ಸಂಪುಟ ಪುನಾರಚನೆ ಮೇಲಾಟ ನಡೆದರೆ ಟೀಕೆ ವ್ಯಕ್ತವಾಗಬಹುದು.ಜತೆಗೆ ವಿಧಾನಸಭೆ ಚುನಾವಣೆ ಎದುರಿಸುವುದಕ್ಕೆ ಮುನ್ನ ನಡೆಯುವ ಕೊನೆಯ ಸಂಪುಟ ಪುನಾರಚನೆ ಇದಾಗಬೇಕೆ? ಅಥವಾ ಇನ್ನೊಂದು ಸುತ್ತಿನ ಪರಿಷ್ಕರಣೆ ನಡೆಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ ಎಂಬ ನಿಲುವಿಗೆ ಸಿಎಂ ಬಂದಿದ್ದಾರೆ ಎನ್ನಲಾಗಿದೆ.