ಬೆಂಗಳೂರು: ಜಾತಿ ಸಮ್ಮೇಳನಗಳಿಂದ ಇನ್ನಷ್ಟು ಜಾತೀಯತೆಗೆ ದಾರಿ ಎಂದು ಅನೇಕರು ಹೇಳುತ್ತಾರೆ. ಅಂತಹವರ ಮಾತನ್ನು ನಂಬಬೇಡಿ. ಇವನ್ಯಾರವ ಇವನ್ಯಾರವ ಇವ ನಮ್ಮ ಇವ ನಮ್ಮವ ಎಂಬ ಮಾತನ್ನು ಹೇಳಿಕೊಂಡೇ ಬಂದಿದ್ದೇವೆ. ಆದರೆ, ಜಾತಿ ಮಾತ್ರ ಗಟ್ಟಿಯಾಗಿಯೇ ಇದೆ. ಇಂದು ಮೀಸಲಾತಿ ವಿರುದ್ಧವಾಗಿ ಅನೇಕರು ಮಾತನಾಡುತ್ತಿದ್ದಾರೆ. ಮೀಸಲಾತಿ ಪುನರ್ ಪರಿಶೀಲನೆ ಮಾಡಬೇಕೆಂದು ಹೇಳುತ್ತಿದ್ದಾರೆ. ಇಂತಹವರ ಬಗ್ಗೆ ಶೋಷಿತ ವರ್ಗದವರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವಕರ್ಮ ಸಮಾಜ ಭಾನುವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಸಮಾಜಕ್ಕೆ ರಾಜಕೀಯವಾಗಿ ಶಕ್ತಿ ಬಂದಿಲ್ಲವೋ ಆ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯ ಸರ್ಕಾರ ಮತ್ತು ಪಕ್ಷದ ಜವಾಬ್ದಾರಿ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ. ಅಧಿಕಾರ ಸಮಾನವಾಗಿ ಹಂಚಿಕೆ ಆಗಬೇಕು. ಆಗ ಮಾತ್ರ ಸಮಾನತೆ ಇರುವ ಸಮಾಜ ನಿರ್ಮಾಣ ಸಾಧ್ಯ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ರಾಜಕೀಯ ಪ್ರಾತಿನಿಧ್ಯ ಬೇಡಿಕೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಅವಕಾಶ ವಂಚಿತ ಸಮಾಜಕ್ಕೆ ರಾಜಕೀಯ ಶಕ್ತಿ ಬ್ರಹ್ಮಾಸ್ತ್ರ ಇದ್ದಂತೆ. ನಿಮ್ಮ ಬೇಡಿಕೆಗೆ ದನಿಗೂಡಿಸುತ್ತೇನೆ. ಶ್ವಕರ್ಮ ಜನಾಂಗದವರು ಶಾಸಕರಾಗಬೇಕು, ಮೇಲ್ಮನೆ ಸದಸ್ಯರಾಗಬೇಕು, ಲೋಕಸಭೆಗೆ ಹೋಗಬೇಕೆಂಬ ಕನಸನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಸರ್ಕಾರದಿಂದಲೇ ವಿಶ್ವಕರ್ಮ ಜಯಂತಿ
ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾಡಬೇಕೆಂಬ ಸಮಾಜದ ಒಂದು ದಶಕದ ಬೇಡಿಕೆಗೆ ಸಮ್ಮತಿ ಸೂಚಿಸಿದ ಸಿದ್ದರಾಮಯ್ಯ, ಮುಂದಿನ ವ6ರ್ಷದಿಂದ ರಾಜ್ಯ ಸರ್ಕಾರವೇ ವಿಶ್ವಕರ್ಮ ಜಯಂತಿಯನ್ನು ಆಚರಿಸಲಿದೆ. ಆದರೆ, ಅಂದು ರಜೆ ಘೋಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಆರಂಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಕೆ.ಪಿ. ನಂಜುಂಡಿ, ವಿಶ್ವಕರ್ಮ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಸರ್ಕಾರದಿಂದ ಅದು ಏನನ್ನು ಅಪೇಕ್ಷಿಸುತ್ತಿದೆ ಎಂಬುದನ್ನು ವಿವರವಾಗಿ ಪ್ರಸ್ತಾಪಿಸಿದರು. ರಾಜಕೀಯ ಪ್ರಾತಿನಿಧ್ಯ ಬೇಡಿಕೆ ಜೊತೆಗೆ ವಿಶ್ವಕರ್ಮ ಅಭಿವೃದ್ಧಿ ಮಂಡಳಿಗೆ 100 ಕೋಟಿ ಅನುದಾನ ನೀಡುವಂತೆಯೂ ಬೇಡಿಕೆ ಮಂಡಿಸಿದರು. ನಂತರ ತಮ್ಮ ಮಾತಿನಲ್ಲಿ ಬೇಡಿಕೆ ಕುರಿತು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ,ವಿಶ್ವಕರ್ಮ ಸಮಾಜದವರು ಜಯಂತಿ ನೆಪದಲ್ಲಿ ಘಟನೆಯಾಗುತಿರುವುದು ಸ್ವಾಗತಾರ್ಹ.ಮಂಡಳಿಯ ಈ ವರ್ಷದ ಚಟುವಟಿಕೆ ನೋಡಿ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಕಳೆದ 15 ವರ್ಷಗಳಿಂದ ಸಮಾಜ ಸಂಘಟನೆಯಲ್ಲಿ ತೊಡಗಿರುವ ಕೆ.ಪಿ.ನಂಜುಂಡಿಯವರ ಪ್ರಯತ್ನಗಳನ್ನು ಶ್ಲಾಫಿಸಿದರು. ಬೆಂಗಳೂರಿನ ಪ್ರಮುಖ ಸ್ಥಳವೊಂದಕ್ಕೆ ವಿಶ್ವಕರ್ಮ ಹೆಸರಿಡಬೇಕೆಂಬ ಪ್ರಸ್ತಾಪವನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳುಹಿಸಲಾಗುವುದು. ಬೇಲೂರಿನಲ್ಲಿ ಡಂಕಣಾಚಾರಿ ಮತ್ತು ಜಕಣಾಚಾರಿಯವರ ಪುತ್ಥಳಿ ಸ್ಥಾಪನೆ ಬಗ್ಗೆಯೂ ಕೇಂದ್ರ ಪ್ರಾಚ್ಯವಸ್ತು ಇಲಾಖೆಯೊಂದಿಗೆ ಚರ್ಚಿಸಲಾಗುತ್ತೆಂದು ಭರವಸೆ ನೀಡಿದರು.