

ಬೆಂಗಳೂರು: ಅವರು ಚಾಲಾಕಿ ಕಳ್ಳರು. ಕಳ್ಳತನ ಮಾಡದೇ ದುಡ್ಡು ಹೊಡೆಯುತ್ತಿದ್ದ ಚತುರ ಚೋರರು. ಎಟಿಎಂ ಕಾರ್ಡ್‍ಗಳ ರಹಸ್ಯ ಮಾಹಿತಿಯನ್ನು(ಡೇಟಾ) ಕದ್ದು, ಅದನ್ನು ನಕಲಿ ಮಾಡಿ, ಕಾರ್ಡ್‍ಗಳಿಗೆ ಕ್ಲೋನ್ ಮಾಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನಯವಾಗಿ ವರ್ಗಾಯಿಸಿಕೊಳ್ಳುತ್ತಿದ್ದ ಜಾಲವನ್ನು ಉಪ್ಪಾರಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ.
ನಗರದ ಜೈ ಕುಮಾರ್ ಅಲಿಯಾಸ್ ಶ್ಯಾಮವೇಲು (42), ಇರ್ಫಾನ್ ಅಹಮದ್ (32), ವಸೀಂ ಶರೀಪ್ (26), ತಜಮುಲ್ ಅಹಮದ್ (37), ರಾಘವೇಂದ್ರ ಅಲಿಯಾಸ್ ರಘು (33) ಎಂಬುವರನ್ನು ಬಂಧಿಸಲಾಗಿದೆ. ಇವರಿಂದ ರು.5.82 ಲಕ್ಷ ನಗದು ಹಾಗೂ ರು.25 ಲಕ್ಷ ಮೌಲ್ಯದ 5 ಎಲೆಕ್ಟ್ರಾನಿಕ್ ಕ್ಯಾಪ್ಚರ್ ಯಂತ್ರ, 2 ಲ್ಯಾಪ್‍ಟಾಪ್, 15 ಡೆಬಿಟ್ ಮತ್ತು ವೀಸಾ ಕಾರ್ಡ್ ಹಾಗೂ 3 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೇಗೆ ಮಾಡ್ತಾರೆ?: ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಹಿತಿ ಪೂರೈಸುವ ಏಜೆಂಟರಿದ್ದಾರೆ. ಮಾಲ್ ಗಳು, ವಾಣಿಜ್ಯ ಕೇಂದ್ರಗಳಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡುವ ಗ್ರಾಹಕರ ಡೆಬಿಟ್ ಕಾರ್ಡ್ ಹಾಗೂ ಪಿನ್ ಸಂಖ್ಯೆಯನ್ನು ಕದಿಯಲಾಗುತ್ತದೆ. ಸ್ವೈಪಿಂಗ್ ಮಷಿನ್ ಗಳಲ್ಲಿ ಸ್ಕ್ಯಾನರ್ ಅಳವಡಿಸಿ, ಕಾರ್ಡ್‍ನ ಮಾಹಿತಿಯನ್ನು ಕದಿಯಲಾಗುತ್ತದೆ. ಈ ಮಾಹಿತಿಯನ್ನು ಕಳ್ಳರಿಗೆ ರವಾನಿಸುತ್ತಿದ್ದರು. ಅವರು ಸ್ಕಿಮ್ಮಿಂಗ್ ಎಂಎಸ್‍ಆರ್ ಯಂತ್ರದ ಮೂಲಕ ಮಾಹಿತಿ ಕ್ಲೋನ್ ಮಾಡಿ ಅಸಲಿ ಕಾರ್ಡ್‍ನಂತೆ ನಕಲಿ ಕಾರ್ಡ್‍ಗಳನ್ನು ಸಿದಟಛಿಪಡಿಸುತ್ತಿದ್ದರು.
ಖಾತೆಗೆ ಹಣ ರವಾನೆ: ಯಾರದೋ ಹೆಸರಿನ ಕಾರ್ಡ್ ಮತ್ಯಾರೋ ಉಜ್ಜಿ ಹಣ ಡ್ರಾ ಮಾಡಿದರೆ ಅಥವಾ ಖರೀದಿ ಮಾಡಿದರೆ ಅನುಮಾನ ಬಂದು ಸಿಕ್ಕಿ ಬೀಳುವುದರಿಂದ ತಪ್ಪಿಸಿ ಕೊಳ್ಳಲು ಮತ್ತೊಂದು ಐಡಿಯಾ ಮಾಡಿದ್ದರು. ಗಾಂಧಿನಗರ ದಲ್ಲಿರುವ `ಸಿಟಿ ಸೆಂಟರ್'ನಲ್ಲಿ ಆರೋಪಿ ವಸೀಂ ಶರೀಪ್ `ರೋಲಾಂಡ್ ಮ್ಯೂಸಿಕ್' ಹೆಸರಿನ ಮಳಿಗೆ ನಡೆಸುತ್ತಿದ್ದಾನೆ. ತನ್ನ ಮಳಿಗೆಯಲ್ಲಿ ಗ್ರಾಹಕರು ವಸ್ತುಗಳು ಖರೀದಿ ಮಾಡಿದಾಗ ಕಾರ್ಡ್ ಮೂಲಕ ಹಣ ಪಾವತಿ ಮಾಡುವವರಿಗೆ ಸ್ವೈಪಿಂಗ್ ಯಂತ್ರ ಬೇಕು ಎಂದು ನಗರದ ಎಸ್‍ಬಿಎಂ, ಎಸ್‍ಬಿಐ, ಆ್ಯಕ್ಸೀಸ್, ಲಕ್ಷ್ಮೀವಿಲಾಸ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳಲ್ಲಿ ಖಾತೆ ತೆರೆದು ಸ್ವೈಪಿಂಗ್ ಯಂತ್ರಗಳನ್ನು ಖರೀದಿಸಿದ್ದರು. ಸ್ವೈಪಿಂಗ್ ಯಂತ್ರಗಳಲ್ಲಿ ಗ್ರಾಹಕರ ನೆಪದಲ್ಲಿ ತಾವೇ ತಯಾರಿಸಿದ ನಕಲಿ ಕಾಡ್ರ್ ಗಳನ್ನು ಉಜ್ಜುತ್ತಿದ್ದರು. ಈ ಮೂಲಕ ಹಣ ನೇರವಾಗಿ ಅವರ ಖಾತೆಗೆ ರವಾನೆಯಾಗುತ್ತಿತ್ತು.
ತಮಗೆ ಬಂದ ಹಣದ ಪೈಕಿ ಸ್ವಲ್ಪ ಭಾಗವನ್ನು ಡೆಬಿಟ್ ಕಾರ್ಡ್ ಮಾಹಿತಿ ಪೂರೈಸುತ್ತಿದ್ದ ಏಜೆಂಟರ ಖಾತೆಗೆ ಹಣ ಹಾಕುತ್ತಿದ್ದರು. ಇಲ್ಲಿಂದ ಅವರ ಖಾತೆಗೆ ಹಣ ಬಂದರೆ ಅವರು ಮತ್ತಷ್ಟು ಮಾಹಿತಿಯನ್ನು ಈ ಜಾಲಕ್ಕೆ ಪೂರೈಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದರು. ಹಳೇ ಅಪರಾಧಿ ಪ್ರಮುಖ ಆರೋಪಿ ಜೈಕುಮಾರ್ ವಿರುದ್ಧ ಈಗಾಗಲೇ ಸಿಸಿಬಿ, ಕಾಟನ್‍ಪೇಟೆ, ಸಂಪಿಗೆಹಳ್ಳಿ, ಜಯನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತನಾಗಿ ಜೈಲಿಗೆ ಹೋಗಿದ್ದ. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊಸದಾಗಿ ತಂಡ ಕಟ್ಟಿಕೊಂಡು ದಂಧೆ ಮುಂದುವರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.