

ಬಾಗಲಕೋಟೆ: ಚೈನ್ ಲಿಂಕ್ ವ್ಯವಸ್ಥೆಯಲ್ಲಿ ಹೂಡಿದ್ದ ಹಣ ವಾಪಸ್ ನೀಡುವಂತೆ ಸಾರ್ವಜನಿಕರು ಥಳಿಸಿದ್ದರಿಂದ ಮನನೊಂದು ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ನವನಗರದಲ್ಲಿ ನಡೆದಿದೆ.
ಗಂಗವ್ವ ಯಮನವ್ವ ಮಾವಿನತೋಟ (38) ಮೃತ ಮಹಿಳೆ. ಇವರು ಮನೆಗೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಪರಿಚಯಸ್ಥ ವ್ಯಕ್ತಿಯೊಬ್ಬ ಚೈನ್‍ಲಿಂಕ್ ಬಗ್ಗೆ ಆಸೆ ಹುಟ್ಟಿಸಿ ಹಣ ದುಪ್ಪಟ್ಟು ಮಾಡುವ ಬಗ್ಗೆ ಹೇಳಿಕೊಟ್ಟಿದ್ದಾನೆ. ಅದರಂತೆ ಈಕೆ ಆ ಲಿಂಕ್‍ಗೆ
ಸೇರಿಕೊಂಡಿದ್ದಾಳೆ. ಬಳಿಕ ತಾನು ಕೆಲಸ ಮಾಡುತ್ತಿದ್ದ ಮನೆಯ ಮಹಿಳೆಯರನ್ನೂ ಸೇರಿಸಿದ್ದಾಳೆ. ಒಂದು ಹಂತದಲ್ಲಿ ಹಣ ವಾಪಸ್ ಬರುತ್ತಿತ್ತು. ಈಚೆಗೆ ಚೈನ್ ಲಿಂಕ್ ಸಂಸ್ಥೆಯವರು ಮೋಸ ಮಾಡಿದ್ದು, ಹಣ ಬರುವುದು ತಪ್ಪಿದೆ.
ಇದರಿಂದ ಆಕ್ರೋಶಗೊಂಡ ನಾಗರಿಕರು, ಹಣ ವಾಪಸ್ ನೀಡುವಂತೆ ಗಂಗವ್ವಳಿಗೆ ಕಟ್ಟುಬಿದ್ದಿದ್ದಾರೆ. ``ನನಗೇನೂ ಗೊತ್ತಿಲ್ಲ, ಕಮತಗಿ ಮೂಲದ ವ್ಯಕ್ತಿಯೊಬ್ಬ ಪುಸಲಾಯಿಸಿದ್ದರಿಂದ ನಾನು ಸೇರಿಕೊಂಡು, ನಿಮ್ಮನ್ನೂ ಸೇರಿಸಿದ್ದೇನೆ. ಆತನನ್ನು ಸಂಪರ್ಕಿಸಿ ಹಣ ವಾಪಸ್ ಕೊಡುವಂತೆ ಕೇಳುತ್ತೇನೆ'' ಎಂದು ಗಂಗವ್ವ ಹೇಳಿದ್ದಾಳೆ. ಇದಕ್ಕೊಪ್ಪದ ಉಳಿದವರು, ಚೈನ್ ಲಿಂಕ್ ಮಾಡಿದವಳು ನೀನೇ, ಹಾಗಾಗಿ ನೀನೇ ದುಡ್ಡುಕೊಡು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಆಕೆ ಮನೆ ೇಮುಂದೆ ಪ್ರತಿಭಟನೆ ನಡೆಸಿ, ಥಳಿಸಿದ್ದಾರೆ.
ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಸಿದ್ದಾರೆ. ಇದರಿಂದ ಭಯಗೊಂಡ ಗಂಗವ್ವ ಮನೆಯೊಳಗೆ ಓಡಿ ಸೀಮೆಎಣ್ಣೆ ಸುರಿದುಕೊಂಡು ಹೊರಬಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.