

ಬೆಂಗಳೂರು: ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯಿಂದ ಕಳೆದ ವರ್ಷ ರು.4,500 ಕೋಟಿ ಆದಾಯ ಲಭಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಾರಿಗೆ ಇಲಾಖೆಯಿಂದ ಯಲಹಂಕ ಬಳಿಯ ಸಿಂಗನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಭಾರಿ ವಾಹನಗಳ ಚಾಲನಾ ತರಬೇತಿ ಕೇಂದ್ರ ಮತ್ತು ಯಲಹಂಕದ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳು ಹೆಚ್ಚು ಲಾಭ ನೀಡುತ್ತಿದ್ದು, ಅವುಗಳನ್ನು ಹೊರತು ಪಡಿಸಿದರೆ ಸಾರಿಗೆ ಇಲಾಖೆಯೇ ಹೆಚ್ಚು ಲಾಭ ತಂದುಕೊಡುತ್ತಿದೆ ಎಂದು ಅವರು ಹೇಳಿದರು.
ಹೆಲ್ಮೆಟ್ ವಿಚಾರದಲ್ಲಿ ರಾಜಕೀಯ ಬೇಡ
ದ್ವಿಚಕ್ರವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜಕೀಯ ಬಣ್ಣ ಹಚ್ಚಲು ಮುಂದಾಗಿರುವುದು ವಿಷಾದನೀಯ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಹಿಂಬದಿಸವಾರರಿಗೆ ಹೆಲ್ಮೆಡ್ ಕಡ್ಡಾಯ ಮಾಡಿದೆ. ಅಲ್ಲದೆ, ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಆದೇಶ ನೀಡಲಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಕೆಲ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುವ ಮೂಲಕ ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ. ಈ ಬೆಳವಣಿಗೆ ಸರಿಯಲ್ಲ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, 20 ಮಂದಿ ಸದಸ್ಯರ ಸಮಿತಿ ರಚಿಸಿ ರಸ್ತೆ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯುವು ದಕ್ಕೆ ಈಗಾಗಲೇ ಚಾಲಕರಾಗಿರುವವರಿಗೂ ತರಬೇತಿ ನೀಡುವುದಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಶೇ. 85ರಷ್ಟು ರಸ್ತೆ ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದಲೇ ನಡೆಯುತ್ತವೆ ಎಂದು ತಿಳಿಸಿದ ಸಚಿವರು, ರಸ್ತೆ ಅಪಘಾತಗಳಿಂದ ಇಲಾಖೆಗೆ ಪ್ರತಿ ವರ್ಷ ರು.70 ಕೋಟಿ ನಷ್ಟವಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ 4.75 ಲಕ್ಷ ಅಪಘಾತವಾಗುತ್ತಿದ್ದು, ಅದರಲ್ಲಿ 1.47 ಲಕ್ಷ ಜನ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲೂ ಅಪಘಾತದ ಸಂಖ್ಯೆ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಹೆಲ್ಮೆಟ್ ಕಡ್ಡಾಯ ಸಹಕಾರಿಯಾಗಲಿದೆ ಎಂದರು.
10 ತರಬೇತಿ ಕೇಂದ್ರಗಳು: ಸಿಂಗ ನಾಯಕ ನಹಳ್ಳಿಯಲ್ಲಿ ಆರಂಭಿಸಲಾಗಿರುವ ಭಾರೀ ವಾಹನಗಳ ಚಾಲನಾ ಪಥ ರಾಜ್ಯದ 2ನೇ ಚಾಲನಾ ಪಥವಾಗಿದೆ. ಧಾರವಾಡದಲ್ಲಿ ಆರಂಭಿಸಲಾಗಿರುವ ಪಥ ಈಗಾಗಲೆ ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಮಲ್ಲತ್ತಹಳ್ಳಿ, ಎಲೆಕ್ಟ್ರಾನಿಕ್‍ಸಿಟಿ, ಹಾಸನ, ಕಲಬುರ್ಗಿ, ಮೈಸೂರುಗಳಲ್ಲೂ ಚಾಲನಾ ಪಥ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಆರಂಭವಾಗಿದೆ.
ಇನ್ನು ಮಂಗಳೂರು, ಗದಗ, ರಾಯಚೂರು, ಚಿಕ್ಕೋಡಿ, ಬಳ್ಳಾರಿಗಳಲ್ಲೂ ಇದೇ ರೀತಿಯ ಪಥ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸಂಸದ ವೀರಪ್ಪಮೊಯ್ಲಿ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಚಂದ್ರಮ್ಮ ಕೆಂಪೇಗೌಡ ಪಾಲಿಕೆ ಸದಸ್ಯರು. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಮಣರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‍ರೂಪ್ ಕೌರ್ ಇದ್ದರು.