

ಬೆಂಗಳೂರು: ಯಾವುದೇ ವ್ಯವಹಾರ ಮಾಡಲು ನಂಬಿಕೆ ಮುಖ್ಯ ಅನ್ನುತ್ತಾರೆ. ಆದರೆ ಎಲ್ಲರನ್ನೂ ನಂಬುವವರಿದ್ದರೆ ಹೇಗೆಲ್ಲಾ ವಂಚಿಸಲು ಸಾಧ್ಯವಿದೆ ಎಂಬುದಕ್ಕೆ ಇಲ್ಲೊಂದು
ತಾಜಾ ಉದಾಹರಣೆಯಿದೆ.
ನೀವು ಯಾವುದೇ ಅಂಗಡಿ, ಹೋಟೆಲ್ ಗೆ ಹೋಗಿ, ಅಲ್ಲಿ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಗ್ರಾಹಕರು ಗರಿಗರಿ ನೋಟು ಕೊಟ್ಟಾಗ, ಬಾಕಿ ವಾಪಸ್ ಕೊಡಲು ಗಲ್ಲಾಪೆಟ್ಟಿಗೆಯಲ್ಲಿ ಚಿಲ್ಲರೆ ಕಾಸು ಇರಲೇಬೇಕು. ಇದಕ್ಕಾಗಿ ಮಾಲೀಕರು ಬಸ್ ಕಂಡಕ್ಟರ್, ದೇವಾಲಯದ ಅರ್ಚಕ ಮೊದಲಾದವರಿಂದ ಚಿಲ್ಲರೆ ನಾಣ್ಯ ಪಡೆದು, ಅವರಿಗೆ ಗಟ್ಟಿ ನೋಟು ಕೊಡುವುದು ವಾಡಿಕೆ. ಆದರೆ ಮಠವೊಂದರ ಮ್ಯಾನೇಜರ್ ಕೂಡ ಹೋಟೆಲ್ ಉದ್ಯಮಿಗಳಿಗೆ ಚಿಲ್ಲರೆ ಕೊಡುತ್ತಾನೆಂದರೆ ನೀವು ನಂಬಲೇಬೇಕು. ಹಾಗೇ ಚಿಲ್ಲರೆ ನಾಣ್ಯ ಕೊಡುವುದಾಗಿ ಹೇಳುವ ಆ ಮ್ಯಾನೇಜರ್ ಆರೇಳು ಲಕ್ಷ ಪಂಗನಾಮ ಹಾಕುತ್ತಾನೆ ಎಂಬುದನ್ನು ನೀವು ಖಂಡಿತಾ ನಂಬಲೇಬೇಕು!! ನೀವು ನಂಬಿದರೂ ಬಿಟ್ಟರೂ ಇಂಥ ವಂಚನೆ ನಡೆದಿದೆ.
`ನೀವು ಗರಿ ಗರಿ ನೋಟು ಕೊಡಿ. ನಾನು ಝಣ ಝಣ ಚಿಲ್ಲರೆ ನಾಣ್ಯ ಕೊಡ್ತೇನೆ' ಎಂದು ಹೋಟೆಲ್ ಉದ್ಯಮಿಗಳು ಮತ್ತು ವ್ಯಾಪಾರಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಇದೀಗ ಶಂಕರಪುರ ಪೊಲೀಸರ ಅತಿಥಿಯಾಗಿದ್ದಾನೆ. ಭದ್ರಾವತಿಯ ಹೊಸಮನೆ ನಿವಾಸಿ ಪ್ರವೀಣ್ ಭಟ್ ಅಲಿಯಾಸ್ ರಾಘವೇಂದ್ರ ಭಟ್ (28) ಬಂಧಿತ. ಈತ ನಾನಾ ಹೋಟೆಲ್ ಮಾಲೀಕರಿಂದ ರು.6.70 ಲಕ್ಷ ಪಡೆದು ಚಿಲ್ಲರೆ ನೀಡದೆ ವಂಚಿಸಿದ್ದ. ಈ ಹಣದಲ್ಲಿ ಆರೋಪಿ ಖರೀದಿಸಿದ್ದ ರು.3.50 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಿಂಬಾಗಿಲಿಂದ ಪರಾರಿ!: ಶಂಕರಪುರ, ಮಲ್ಲೇಶ್ವರ ಜಯನಗರ ಹಾಗೂ ನಗರದ ಇತರೆಡೆಯ ಹೋಟೆಲ್ಗಳಿಗೆ ತೆರಳಿ ತಾನು ಉತ್ತರಾದಿಮಠದ ಮ್ಯಾನೇಜರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ ಪ್ರವೀಣ್ ಭಟ್, ಹೋಟೆಲ್ ವ್ಯವಹಾರಕ್ಕೆ ಚಿಲ್ಲರೆ ನಾಣ್ಯ ಅಗತ್ಯವಿದ್ದಲ್ಲಿ ತಾನು ನೀಡುತ್ತೇನೆ. ಇದಕ್ಕೆ ಕಮಿಷನ್ ಕೊಡಬೇಕಿಲ್ಲ ಎಂದು ಬಣ್ಣದ
ಮಾತುಗಳನ್ನಾಡಿ ನಂಬಿಕೆ ಹುಟ್ಟಿಸುತ್ತಿದ್ದ. ಬಳಿಕ ಅವರನ್ನು ಉತ್ತರಾಧಿಮಠ ಮತ್ತು ರಾಘವೇಂದ್ರಸ್ವಾಮಿ ಮಠಕ್ಕೆ ಕರೆಸಿಕೊಂಡು ಹಣ ಪಡೆದು ಚಿಲ್ಲರೆ ನಾಣ್ಯ ತರುವುದಾಗಿ ಒಳಗೆ ಹೋದವನು ಮಠದ ಹಿಂಬಾಗಿಲಿಂದ ಪರಾರಿಯಾಗುತ್ತಿದ್ದ. ಈತನ ವಂಚನೆ ಜಾಲಕ್ಕೆ ಬಿದ್ದವರು ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಸಿಟಿವಿ ಸುಳಿವು: ಆರೋಪಿ ಬಂಧನಕ್ಕೆ ತೀವ್ರ ಶೋಧ ನಡೆಸುವಾಗ ಉತ್ತರಾಧಿಮಠದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಠದ ಆವರಣದಲ್ಲಿ ಆರೋಪಿಯ ಚಲನವಲನದ ಸುಳಿವು ಸಿಕ್ಕಿತ್ತು. ಇದರೊಂದಿಗೆ ಆರೋಪಿ, ಇತ್ತೀಚೆಗೆ ಕೆಲ ಅಮಾಯಕರಿಗೆ ರಾಘವೇಂದ್ರ ಸ್ವಾಮಿ ಮಠದ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಮಠದ ಬಳಿ ಕರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೈಲಿನಿಂದ ಬಂದಿದ್ದ: ಮನೆಗಳವು ಪ್ರಕರಣವೊಂದರ ಆರೋಪ ಸಾಬೀತಾಗಿ ಜೈಲು ಸೇರಿದ್ದ ಆರೋಪಿ ಪ್ರವೀಣ್ ಭಟ್, ನವೆಂಬರ್ ಮಾಸಾಂತ್ಯದಲ್ಲಿ ಜಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಉತ್ತರಾಧಿಮಠದ ಮ್ಯಾನೇಜರ್ ಸೋಗಿನಲ್ಲಿ ಚಿಲ್ಲರೆ ನೀಡುವುದಾಗಿ ನಗರದ ವಿವಿಧ ಹೋಟೆಲ್ ಉದ್ದಿಮೆದಾರರಿಂದ ಲಕ್ಷಾಂತರ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಆರೋಪಿಯ ಬಣ್ಣ ಬಯಲು ಮಾಡಿದರು.