

ಬೆಂಗಳೂರು: ಮಹಾನಗರದ ಮೇಲೆ ಅಕಾಲಿಕ ಕಾರ್ಮೋಡ ಕವಿದಿದೆ. ಇದುವರೆಗೂ ಬರೆ ಹಾಕಿದಂತೆ ನೆತ್ತಿ ಸುಡುತ್ತಿದ್ದ ಬಿಸಿಲು ಹೇಳದೇ ಕೇಳದೇ ಮಾಯವಾಗಿದ್ದು, ಸೂರ್ಯನಿಗೂ ರಜೆ ಸಿಕ್ಕಂತಾಗಿದೆ.
ದಟ್ಟಾವಾಗಿ ಕವಿದಿರುವ ಕಾರ್ಮೋಡಗಳು ನಿನ್ನೆ ದಿನ ಬಿಸಿಲ ಕಿರಣ ನುಸುಳಲು ಕೂಡ ಬಿಟ್ಟಿಲ್ಲ. ಹೀಗಿರುವಾಗ ನಗರದ ಜನರಿಗೆ ಅಸಲಿ ಚಳಿಗಾಲದ ಅನುಭವವಾಗುತ್ತಿದೆ. ಬೆಳಗಿನ ಜಾವ ರಾತ್ರಿ ಹೊತ್ತಲ್ಲಷ್ಟೇ ಸ್ವೆಟರ್, ಜರ್ಕಿನ್ ಹಾಕುತ್ತಿದ್ದ ಸಾರ್ವಜನಿಕರು ಕಳೆದೆರಡು ದಿನಗಳಿಂದ ತೊಟ್ಟ ಸ್ವೆಟರ್ ಬೆಚ್ಚನೆಯ ಉಡುಪನ್ನು ತೆಗೆಯುವ ಗೋಜಿಗೆ ಹೋಗಿಲ್ಲ.
ಬೆಂಗಳೂರಿನ ಕೆಂಗೇರಿ ಸೇರಿದಂತೆ ಹಲವು ಬಡಾವಣೆಯಲ್ಲಿ ಬುಧವಾರ ಹೆಚ್ಚು ಮಳೆ ಬಿದ್ದಿದೆ. ಕೆಂಗೇರಿಯಲ್ಲಿ ಹೆಚ್ಚು (16.6.ಮಿ.ಮಿ) ಮಳೆ ಸುರಿದಿದೆ. ರಾಜರಾಜೇಶ್ವರಿ ನಗರ (15.5), ಪಟ್ಟಾಭಿರಾಮನಗರ(10) ಸೀಗೇಹಳ್ಳಿ (10) ಮಾರುತಿ ಮಂದಿರ(9.5) ಬೆಂಗಳೂರು ಗ್ರಾಮಾಂತರ ಭಾಗದ ವಗಟೆಯಲ್ಲಿ ಹಾಗೂ ಹೊಸಕೋಟೆಯಲ್ಲಿ (35) ಮಳೆಯಾಗಿದೆ. ನಗರದಲ್ಲಿ ಜೋರು ಮಳೆಯಾಗಿದ್ದರೂ, ಕೆಳ ಸೇತುವೆ, ತಗ್ಗು ಪ್ರದೇಶಗಳು ಸೇರಿದಂತೆ ಯಾವುದೇ ಕಡೆಗಳಲ್ಲೂ ಮಳೆ ನೀರು ನಿಲ್ಲಲಿಲ್ಲ ಅಲ್ಲದೇ ಗಾಳಿ ಪ್ರಮಾಣ ಅತ್ಯಂತ ಕಡಿಮೆ ಇದ್ದರಿಂದ ಮರ ಬಿದ್ದ ಘಟನೆಗಳೂ ವರದಿಯಾಗಿಲ್ಲ