ಹುಬ್ಬಳ್ಳಿ: ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ (86) ಅವರು ಭಾನುವಾರ ಇಲ್ಲಿನ ಕೇಶ್ವಾಪುರದ ಇಂದಿರಾ ನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯವರಾದ ಅವರು ರಂಗಭೂಮಿಯ ಮೇಲಿನ ಆಸಕ್ತಿಯಿಂದಾಗಿ ಗ್ರಾಮಲೆಕ್ಕಾಧಿಕಾರಿ ನೌಕರಿ ತ್ಯಜಿಸಿ ನಂತರ ಸುಳ್ಳದ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಕಂಪೆನಿ, ಗುಡಗೇರಿ ಕಂಪನಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.
ಸಾಹಿತಿ ಕಂದಗಲ್ ಹಣಮಂತರಾಯ, ನಲವಡಿ ಶ್ರೀಕಂಠ ಶಾಸ್ತ್ರಿ ಅವರ ಶಿಷ್ಯರಾಗಿದ್ದ ಕುಲಕರ್ಣಿ ಏಣಗಿ ಬಾಳಪ್ಪ, ಗರುಡ ಸದಾಶಿವರಾಯ, ಗುಡಗೇರಿ ಬಸವರಾಜ ಮತ್ತಿತರ ರಂಗದಿಗ್ಗಜರ ಒಡನಾಡಿಯಾಗಿದ್ದರಿವರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ವಸಂತ ಕುಲಕರ್ಣಿ ಅವರಿಗೆ ಸಂದಿವೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ಸೋದರ ಮಾವ ಇವರು.ವಸಂತ ಕುಲಕರ್ಣಿ ಅವರಿಗೆ ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.