ನಮಗೆ ರಾಮರಾಜ್ಯ ಬೇಕು
ದೇವನಹಳ್ಳಿ: ಹಳ್ಳಿಗಳಲ್ಲಿ ರಾಮರಾಜ್ಯದ ಕನಸನ್ನು ಕಂಡಿದ್ದವರು ಮಹಾತ್ಮ ಗಾಂಧೀಜಿರವರು. ಆದರೆ ಈಗ ರಾಮರಾಜ್ಯಕ್ಕೆ ಬದಲಾಗಿ ಪಟ್ಟಣ ರಾಜ್ಯವಾಗಿದೆ ಎಂದು ಹೊಸಕೋಟೆ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಸೂ.ರಂ.ರಾಮಯ್ಯರವರು ತಿಳಿಸಿದರು.
ಅವರು ದೇವನಹಳ್ಳಿ ತಾಲೂಕು ಜಿಲ್ಲಾ ಕೇಂದ್ರ ಹೋರಾಟ ಸಮಿತಿಯವರು ಬುಧವಾರ ಇಲ್ಲಿನ ಗುರುಭವನದಲ್ಲಿ ಶಾಸಕರಾದ ಪಿಳ್ಳಮುನಿಶಾಮಪ್ಪರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದ ರು.
ದೇವನಹಳ್ಳಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು, ನಂದಿಬೆಟ್ಟಕ್ಕೆ ಹೋಗುವ ಎಲ್ಲ ಪ್ರವಾಸಿಗಳು ದೇವನಹಳ್ಳಿ ಮೂಲಕವೇ ಪ್ರಯಾಣಿಸಬೇಕಿದೆ. ಆದ್ದರಿಂದ ಯಾವುದೇ ಸಂಧರ್ಭದಲ್ಲಿ ಸಮಸ್ಯೆಗಳು ಉಧ್ಭವವಾಗಬಹುದು. ಇದನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ದೇವನಹಳ್ಳಿಯಲ್ಲೇ ಇರಬೇಕಾಗುತ್ತದೆ. ಇದಲ್ಲದೆ ಅಧಿಕಾರಿಗಳು ಬೆಂಗಳೂರಿನಲ್ಲಿ ಇರುವುದಕ್ಕಿಂತ ಗ್ರಾಮಾಂತರ ಪ್ರದೇಶದ ಕೇಂದ್ರದಲ್ಲಿದ್ದರೆ ನಾಲ್ಕು ತಾಲೂಕುಗಳ ಯಾವುದೇ ಹಳ್ಳಿಗೆ ನಿಗದಿತ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಆದ್ದರಿಂದ ದೇವನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ತಿಳಿಸಿದರು.
ಅನೇಕ ಬಾರಿ ಮನವಿ: ಇದೇ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ದೇವನಹಳ್ಳಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಜಿಲ್ಲಾ ಹೋರಾಟ ಸಮಿತಿಯವರ ಹೋರಾಟಕ್ಕೆ ತಮ್ಮ ಸಂರ್ಪೂಣ ಬೆಂಬಲ ಇರುವುದಾಗಿ ತಿಳಿಸಿದರು.
1987 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಭಜಿತ ಸಂಧರ್ಭದಲ್ಲಿ ರಾಮನಗರ ಜಿಲ್ಲೆ ಪ್ರತ್ಯೇಕವಾದಾಗಲೇ ಸರ್ಕಾರ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕಾಗಿತ್ತು ಎಂದು ಜೆಡಿಯು ಮುಖಂಡರಾದ ಶ್ರೀನಿವಾಸ್ ತಿಳಿಸಿ ಈಗಲಾದರೂ ತಾಲೂಕಿನ ಪ್ರಜಾ ಪ್ರತಿನಿಧಿಗಳು ಹಾಗೂ ಎಲ್ಲ ಪಕ್ಷಗಳ ಮುಖಂಡರು ಸೇರಿ ಜಿಲ್ಲಾ ಕೇಂದ್ರಕ್ಕಾಗಿ ಒಟ್ಟಿಗೆ ಹೋರಾಡಬೇಕಾಗಿದೆ ಎಂದರು.
ಸಮಸ್ಯೆಗೆ ಸ್ಪಂದನೆ: ಅಧ್ಯಕ್ಷತೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ವಹಿಸಿ ತಾವು ಶಾಸಕನಾದಾಗಿನಿಂದ ಇದುವರೆಗೂ ಪಕ್ಷಭೇದವಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಪಾರಿವಾಳಗುಟ್ಟದಲ್ಲಿ ಉಳಿದಿರುವ ಪ್ರದೇಶವನ್ನು ಸರ್ಕಾರ ಯಾರಿಗೂ ಮಂಜೂರು ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರಲ್ಲದೆ ತಾಲೂಕಿನ ಯಾವುದೇ ಪ್ರಮುಖ ಕಾರ್ಯಗಳು ಕೇವಲ ಶಾಸಕರೊಬ್ಬರಿಂದ ಸಾಧ್ಯವಿಲ್ಲ. ದೇವನಹಳ್ಳಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣ, ವಕೀಲರ ಸಂಘದ ಅಧ್ಯಕ್ಷರಾದ ಆರ್.ಮಾರೇಗೌಡ,ಜಿಲ್ಲಾ ಹೋರಾಟ ಸಮಿತಿಯ ಮುಖಂಡರಾದ ಎಸ್.ಲಕ್ಷ್ಮೀನಾರಾಯಣ್, ಕಾಂಗ್ರೆಸ್ ಮುಖಂಡರಾದ ಸಿ.ಜಗನ್ನಾಥ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ, ವಿಜಯಪುರದ ಕೇಶವ ಭಟ್ಟಾಚಾರ್, ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಮುನಿರಾಜು ಮಾಜಿ ಅಧ್ಯಕ್ಷರಾದ ಬಿ.ಎಂ.ಭೈರೇಗೌಡ, ವಿಜಯಪುರ ಮತ್ತು ದೇವನಹಳ್ಳಿಯ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದ ಬಿ.ಕೆ.ಶಿವಪ್ಪರವರು ಸ್ವಾಗತ ಕೋರಿದರಲ್ಲದೆ ಮುಂದಿನ ಬುಧವಾರ ಜಿಲ್ಲಾ ಕೇಂದ್ರ ಹೋರಾಟದ ಬಗ್ಗೆ ನಿರ್ಣಯ ಕೈಗೊಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

