ಬೆಂಗಳೂರು ಗ್ರಾಮಾಂತರ

ಶಾಸಕರ ಪುತ್ರಿ ಆತ್ಮಹತ್ಯೆ

Published On :

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶರೆಡ್ಡಿ ಪುತ್ರಿ ಗಗನಾರೆಡ್ಡಿ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಸತೀಶರೆಡ್ಡಿ ಅವರ ಜ್ಯೇಷ್ಠ ಪುತ್ರಿ ಗಗನಾ ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಪ್ರಕರಣದ ವಿವರ: ಗುರುವಾರ ರಾತ್ರಿ 8.30ರ ಸುಮಾರಿಗೆ ಗಗನಾ ತನ್ನ ಸಹೋದರಿ ಮೇಘನಾ ಜತೆ ಟಿವಿ ನೋಡುತ್ತ ಕುಳಿತಿದ್ದರು. ಈ ವೇಳೆ ಟಿವಿ ಚಾನಲ್ ಬದಲಾಯಿಸುವ ವಿಚಾರದಲ್ಲಿ ಸಹೋದರಿಯರು ಜಗಳವಾಡಿಕೊಂಡಿದ್ದಾರೆ. ಇಬ್ಬರ ಜಗಳ ಗಮನಿಸಿದ ಸತೀಶರೆಡ್ಡಿ ಪತ್ನಿ 'ಜಗಳ ಮಾಡುವ ಬದಲು ಹೋಗಿ ಓದಿಕೊಳ್ಳಿ' ಎಂದು ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಮಾತ್ರವಲ್ಲ, ಟಿವಿ ಆಫ್ ಮಾಡಿ ರಿಮೋಟ್ ತೆಗೆದು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಗಗನಾ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ. ಮಕ್ಕಳ ಜಗಳ ಸಾಮಾನ್ಯ ಎನ್ನುವ ಕಾರಣಕ್ಕೆ ಮನೆಯಲ್ಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಕೊಠಡಿ ಬಾಗಿಲು ತಟ್ಟಿದರೂ ತೆಗೆಯಲಿಲ್ಲ: ರಾತ್ರಿ ಎಂದಿನಂತೆ ಸತೀಶರೆಡ್ಡಿ ಅವರು ಗಗನಾಳನ್ನು ಊಟಕ್ಕೆ ಕರೆದಿದ್ದಾರೆ. ತುಂಬಾ ಹೊತ್ತು ಬಾಗಿಲು ತಟ್ಟಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಗಾಬರಿಗೊಂಡ ಸತೀಶರೆಡ್ಡಿ ಬಲವಂತವಾಗಿ ಬಾಗಿಲು ಒಡೆದಿದ್ದಾರೆ. ಈ ವೇಳೆ ಗಗನ ನೇಣು ಹಾಕಿಕೊಂಡಿದ್ದು ಗೊತ್ತಾಗಿದೆ. ನೇಣಿನಿಂದ ಕೆಳಗಿಳಿಸಿದಾಗ ಗಗನಾಳಿಗೆ ಸ್ಪಲ್ಪ ಪ್ರಜ್ಞೆ ಇತ್ತು. ತಕ್ಷಣ ಆಕೆಯನ್ನು ಸಮೀಪದ ಪ್ರಕಾಶ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 10 ಗಂಟೆಯ ಸುಮಾರಿಗೆ ಗಗನ ಮೃತಪಟ್ಟಿದ್ದಾಳೆ.
ಹೊಂಗಸಂದ್ರದಲ್ಲಿ ಶವ ಸಂಸ್ಕಾರ: ರಾತ್ರಿ 1.30ರ ಸುಮಾರಿಗೆ ಶವಪರೀಕ್ಷೆ ನಡೆಸಿ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಅವರ ಮನೆ ಸಮೀಪ ಹೊಂಗಸಂದ್ರದಲ್ಲಿ ಶವ ಸಂಸ್ಕಾರ ನೆರವೇರಿಸಲಾಗಿದೆ.
ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೂರಿನಲ್ಲಿ ಸಹೋದರಿಯರ ನಡುವೆ ಜಗಳ ಉಂಟಾಗಿ ಗಗನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವರಿಸಲಾಗಿದೆ.
ಪ್ರೇಮ ವಿಚಾರದ ಪ್ರಸ್ತಾಪ: ಗಗನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಈ ವಿಷಯ ತಿಳಿದ ತಾಯಿ ಆಕೆಯನ್ನು ಗದರಿಸಿ ಪ್ರೀತಿ-ಪ್ರೇಮ ಬೇಡ ಎಂದು ಬುದ್ದಿಮಾತು ಹೇಳಿದ್ದರು ಎನ್ನಲಾಗಿದೆ. ಇದರಿಂದ ಆದ ಬೇಸರವೂ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಇದನ್ನು ಶಾಸಕರ ಕುಟುಂಬ ಹಾಗೂ ಪೊಲೀಸರು ಅಲ್ಲಗಳೆದಿದ್ದಾರೆ. ಟಿವಿ ನೋಡುವ ವಿಚಾರದಲ್ಲಿಯೇ ಸಹೋದರಿಯರ ನಡುವೆ ಜಗಳ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ಪ್ರತಿಕ್ರಿಯೆ ಇಲ್ಲ:  ಘಟನೆ ಬಗ್ಗೆ ಶಾಸಕ ಸತೀಶರೆಡ್ಡಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾನ್ಯವಾಗಿ ರಾತ್ರಿ ಯಾವುದೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ. ಹಾಗಿದ್ದರೂ ಮಧ್ಯರಾತ್ರಿ ವೈದ್ಯರನ್ನು ಎಬ್ಬಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಬೆಳಗ್ಗಿನ ಜಾವವೇ ಶವಸಂಸ್ಕಾರ ನಡೆಸಿರುವುದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇಷ್ಟು ತರಾತುರಿ ಮಾಡುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಹಜವಾಗಿಯೇ ಸಾರ್ವಜನಿಕರ ಮನಸಲ್ಲಿ ಮೂಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.