ಬಿಜೆಪಿ ಜತೆ ಸಖ್ಯ ತಪ್ಪಲ್ಲ
ಆನೇಕಲ್: ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಇರುವವರು ಯಾವ ಸಂದರ್ಭದಲ್ಲಿ ಯಾರ ಜೊತೆ ಸಖ್ಯ ಮಾಡಬೇಕೆಂದು ವಿವೇಚನಾಯುಕ್ತ ತೀರ್ಮಾನ ಮಾಡುತ್ತಾರೆ. ವಿವೇಚನೆ ಇಲ್ಲದವರು ಮೈತ್ರಿಗೆ ಬಣ್ಣ ಕಟ್ಟುವುದರಲ್ಲಿ ಕಾಲ ಹರಣ ಮಾಡುತ್ತಾರೆ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಬನ್ನೇರುಘಟ್ಟದಲ್ಲಿ ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಕೇಂದ್ರ ಸರ್ಕಾರದ ಅನೀತಿ ಹಾಗೂ ಹಗರಣಗಳು ಲಕ್ಷಾಂತರ ಕೋಟಿ ರು. ದಾಟಿದೆ. ಈ ಸರದಿ ಇನ್ನೂ ಮುಂದುವರಿಯಲಿದ್ದು ಪ್ರಶ್ನೆ ಮಾಡುವವರ ಸಂಖ್ಯೆ ದುಪ್ಪಟ್ಟಾಗಬೇಕಿದೆ. 2ಜಿ ಹಗರಣ, ಕಾಮನ್ವೆಲ್ತ್ ಹಗರಣ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಗಡಿಯಲ್ಲಿ ಸೈನಿಕರ ಹತ್ಯೆಯಾದರೂ ಬಾಯಿ ಬಿಡದ ಪ್ರಧಾನಿ ಹಾಗೂ ಅವರ ಮೇಲೆ ನಿಯಂತ್ರಣ ಹೇರುವ ಗಾಂಧಿ ಕುಟುಂಬದ ಬಗ್ಗೆ ದೇಶವಾಸಿಗಳಿಗೆ ತಿಳಿದಿದೆ ಎಂದು ಕಿಡಿಕಾರಿದರು.
ತಪ್ಪಲ್ಲ: ರಾಜಕೀಯದ ಮುಂದಿನ ನಡೆ ನುಡಿಯ ಬಗ್ಗೆ ಈಗಲೇ ಹೇಳಲು ಕಾಲ ಪಕ್ವವಲ್ಲ ಎಂದ ಅವರು ಉಪ ಚುನಾವಣೆಯಲ್ಲಿ ಬಿಜೆಪಿಯ ಸಹಕಾರ ಪಡೆದಿರುವುದು ತಪ್ಪಲ್ಲ ಎಂಬ ಸಮರ್ಥನೆ ನೀಡಿದರು. ಅನಿತಾ ಕುಮಾರಸ್ವಾಮಿ ಮಾತನಾಡಿ ಕಾರ್ಯಕರ್ತರು ಮನೆ ಮನೆಗೆ ಹಾಗೂ ಗ್ರಾಮಗಳಿಗೆ ತೆರಳಿ ಜೆಡಿಎಸ್ ಧ್ಯೇಯ ಮತ್ತು ತತ್ವಗಳ ಬಗ್ಗೆ ತಿಳಿ ಹೇಳಬೇಕು. ಕಾರ್ಯಕರ್ತರೇ ಪಕ್ಷದ ಬಂಡವಾಳ, ಅಭಿಮಾನಿಗಳಿಗೆ ವ್ಯಕ್ತಿಯ ನಡವಳಿಗೆ ಹಾಗೂ ಸೇವಾ ಮನೋಭಾವ ಮುಖ್ಯವೇ ಹೊರತು ಪಕ್ಷವಲ್ಲ. ಶಾಸಕಿಯಾಗಿ ಪಡೆದ ಅನುಭವ, ಮಾವನವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಜನತೆ ಆಶೀರ್ವಾದ ಮಾಡಬೇಕೆಂದರು.
ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕ್ಷೇತ್ರದ ಹಲವು ಹಳ್ಳಿಗಳಿಗೆ ದಂಪತಿ ಭೇಟಿ ನೀಡಿ ಮತ ಯಾಚನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

