ಜ್ವರದಿಂದ ಬಾಲಕ ಸಾವು
ಚನ್ನಪಟ್ಟಣ: ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ನಡೆದಿದ್ದು, ಇದು ಡೆಂಘೀನಿಂದ ಸಂಭವಿಸಿರುವ ಸಾವೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಪುನಿತ್(8) ಮೃತ ಬಾಲಕನಾಗಿದ್ದು ಜ್ವರದಿಂದ ಬಳಲುತ್ತಿದ್ದ ಈತನನ್ನು ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಸೋಮುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಡೆಂಘೀನಿಂದಲೇ ಸಾವು ಸಂಭವಿಸಿದೆ ಎಂದು ದೃಢಪಡದಿದ್ದು ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಾಲಕನ ಸಾವಿಗೆ ನಿಖರವಾದ ಕಾರಣ ಪತ್ತೆ ಹಚ್ಚುವುದಾಗಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ದಂಪತಿ
ಚನ್ನಪಟ್ಟಣ: ವೈಯಕ್ತಿಕ ಕಾರಣಗಳಿಂದ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಮರಳು ಹೊಲದಲ್ಲಿ ಸಂಭವಿಸಿದೆ. ಪಟ್ಟಣದ ಗರುಡಾದ್ರಿ ವೈನ್ ಮಾಲೀಕ ಶೇಖರ್ (45) ಮತ್ತು ಇವರ ಪತ್ನಿ ಪೂರ್ಣಿಮಾ (35) ಮೃತ ದುರ್ದೈವಿಗಳಾಗಿದ್ದು, ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಶಾಲೆಗೆ ಹೋಗಿದ್ದ ಇವರ ಮಗಳು ಮನೆಗೆ ಹಿಂದಿರುಗಿದಾಗ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ತಿಳಿದು ಬಂದಿದ್ದು ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಸಾಲಬಾಧೆ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ
ನೆಲಮಂಗಲ: ಸಾಲಬಾಧೆ ತಾಳಲಾರದೆ ನೊಂದ ವ್ಯಕ್ತಿಯೊಬ್ಬ ತಾನು ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೊಂಡನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತನನ್ನು ಗಂಗಾಧರ್ (62) ಎಂದು ಗುರುತಿಸಲಾಗಿದೆ. ಈತ ಮನೆ ಕಟ್ಟಲು ಕೈಸಾಲ ಮಾಡಿಕೊಂಡಿದ್ದ ಸಾಲ ಪಡೆಯಲು ಮನೆಯ ಪತ್ರಗಳನ್ನು ಅಡಮಾನ ಮಾಡಿದ್ದರು. ದಿನ ಕಳೆದಂತೆ ಸಾಲದ ಬಡ್ಡಿ ಹಣ ಹೆಚ್ಚಾಗುತ್ತಿದ್ದು ಹಣ ನೀಡಿದವರು ಬಹಳ ಹಿಂಸೆ ನೀಡಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಾದನಾಯಕನಹಳ್ಳಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

