ಗ್ರಾಮಾಂತರ ಈಗಲೂ ಸಮಾಧಾನಕರ...
ರಾಮನಗರ: ಮತದಾನದ ವೇಳೆಯಲ್ಲಾದ ಬದಲಾವಣೆ, ಅಲ್ಪಾವಧಿ ಅಧಿಕಾರವೆಂದು ಅಲ್ಪ ಮೊತ್ತದ ಆಮಿಷ ಒಡ್ಡಿದ್ದು, ಕ್ಷೇತ್ರದ ಹೊರಗಿನ ಕಾರ್ಮಿಕರು ಮತ್ತು ನೌಕರರಿಗೆ ಸಿಗದ ರಜೆ, ಬಿರುಸಾದ ಮುಂಗಾರು ಕೃಷಿ ಚಟುವಟಿಕೆ ನಡುವೆಯೂ ಉಪ ಚುನಾವಣೆಯಲ್ಲಿ ಸಮಾಧಾನಕರ ಪ್ರಮಾಣದ ಮತದಾನ ಇಲ್ಲಿ ನಡೆದಿದೆ.
ಉತ್ಸಾಹ ಕಮ್ಮಿಯಾಗಿಲ್ಲ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರಾಮನಗರ ಜಿಲ್ಲೆ ಮತದಾರರಿಗೆ ಮರು ಚುನಾವಣೆಗಳು ಹೊಸದೇನಲ್ಲ. ಇಲ್ಲಿ ಈಗಲೂ ಉತ್ಸಾಹ ಅಷ್ಟೇನೂ ಕಮ್ಮಿಯಾಗಿಲ್ಲ. ನಿರಾಸಕ್ತಿ ಎದ್ದು ಕಂಡಿರುವುದು ಪ್ರಮುಖವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಮತದಾರರಿಂದಷ್ಟೇ.
ಬದಲಾದ ಅವಧಿ: ಕಳೆದ ಚುನಾವಣೆಯಲ್ಲಿ ಮತದಾನ ಬೆಳಗ್ಗೆ 7ಕ್ಕೆ ಪ್ರಾರಂಭವಾಗಿದ್ದರೆ, ಈ ಬಾರಿ ಬೆಳಗ್ಗೆ 8ಕ್ಕೆ ಮುಂದೂಡಲ್ಪಟ್ಟಿತು. ಇದರಿಂದ ಲೋಕಸಭಾ ಕ್ಷೇತ್ರದ ಹೊರಗಿರುವ ಕಾರ್ಮಿಕರು ಮತ್ತು ನೌಕರರಿಗೆ ಅನಾನುಕೂಲ ಉಂಟಾಯಿತು. ಅವರೆಲ್ಲ ಮತದಾನದಿಂದ ವಂಚಿತರಾಗದಿದ್ದರೆ, ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿತ್ತು.
ಬೆಂಗಳೂರು ಮತ್ತು ಮೈಸೂರು ಸೇರಿದಂತೆ ವಿವಿಧೆಡೆ ಕೆಲಸ ಮಾಡುವ ಸಾಕಷ್ಟು ನೌಕರರು, ಕಾರ್ಮಿಕರು ಈ ಕ್ಷೇತ್ರ ವ್ಯಾಪ್ತಿಯಲ್ಲೇ ವಾಸವಿದ್ದಾರೆ. ಅವರೆಲ್ಲ ರೈಲು ಪ್ರಯಾಣಿಕರಾಗಿದ್ದು, ಮತದಾನ ಬೆಳಗ್ಗೆ 7ಕ್ಕೆ ಇದ್ದಿದ್ದರೆ ಖಂಡಿತ ಇಷ್ಟು ಮಂದಿ ಮತ ಚಲಾಯಿಸಿ ಹೋಗುತ್ತಿದ್ದರು.
ಕುಸಿದ ಮತ ಮೌಲ್ಯ: ಈ ಭಾಗದಲ್ಲಿ ಕಳೆದ ವಿಧಾನಸಭೆ ಚುನಾವಣೆ ನಿಜಕ್ಕೂ ಹೈ ಹೋಲ್ಟೇಜ್ ಪಂದ್ಯವೇ ಆಗಿತ್ತು. ತಲಾವಾರು ಮತದ ಮೌಲ್ಯ ಸರಾಸರಿ ರು.500 ರಿಂದ 1 ಸಾವಿರದವರೆಗೆ ಮುಟ್ಟಿತ್ತು. ಕೆಲವೆಡೆಗಳಲ್ಲಿ ತಲಾ ರು.2 ಸಾವಿರದವರೆಗೂ ಹಂಚಿದ್ದ ವಿಷಯ ಗುಟ್ಟಾಗಿ ಉಳಿದಿಲ್ಲ.
ಆದರೆ, ಈ ಬಾರಿ ಬೆಂಗಳೂರು ನಗರ ಪ್ರದೇಶ ಮತ್ತು ಸೀಮಿತ ಕಡೆ ಸರಾಸರಿ ರು.200 ಹಂಚಿದ್ದರೆ, ಬಹುತೇಕ ಕಡೆ ಪ್ರತಿ ಮತದಾರನಿಗೆ ರು.50 ರಿಂದ 100ರವರೆಗಷ್ಟೆ ಬೆಲೆ ಕಟ್ಟಲಾಗಿದೆ. ಈಚೆಗೆ ಕೈ ತುಂಬ ಕಾಸು ನೋಡಿದ್ದವರ ಪೈಕಿ ಕೆಲವರು ಈಗ ಕವಡೆ ಕಾಸು ನೀಡಿದರೆನ್ನುವ ಕಾರಣಕ್ಕೆ ಮತ ಹಾಕುವ ಗೋಜಿಗೆ ಹೋಗಿಲ್ಲ.
ಕೃಷಿ ಚಟುವಟಿಕೆ ಗಮ್ಮತ್ತು: ಸತತ ಎರಡು ವರ್ಷ ಕಾಡಿದ ಭೀಕರ ಬರದಿಂದ ಕಂಗೆಟ್ಟಿದ್ದ ರೈತರ ಮುಖದಲ್ಲಿ ಈ ವರ್ಷ ಸುರಿಯುತ್ತಿರುವ ಮಳೆ ಮಂದಹಾಸ ಮೂಡಿಸಿದೆ. ಅಂತೆಯೇ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈ ನಡುವೆಯೂ ಅವರು ಮತ ಚಲಾವಣೆ ಮಾಡಿರುವರು. ಬೆಂಗಳೂರಿಗರಿಗೇ ಮತ ಚಲಾವಣೆ ಅಲರ್ಜಿ ಎನಿಸಿರುವುದು ಸ್ಪಷ್ಟ.
2009ರ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಪ್ರಮಾಣದ ಕುಸಿತ ದೊಡ್ಡ ಮಟ್ಟದ್ದೇನಲ್ಲ. ಆ ಚುನಾವಣೆಯಲ್ಲಿ 18,75,011 ಮತದಾರರ ಪೈಕಿ 11,02,833 ಮಂದಿ ಮತ ಚಲಾಯಿಸಿದ್ದು, ಶೇಕಡವಾರು ಪ್ರಮಾಣ 58.81 ಆಗಿತ್ತು.
ಅಬ್ಬರಿಸಿ ಬೊಬ್ಬಿರಿದರು...
ಲೋಕಸಭೆ ಉಭಯ ಕ್ಷೇತ್ರಗಳ ಮರು ಚುನಾವಣೆ ನಿಜಕ್ಕೂ ರಾಜ್ಯದ ಗಮನ ಸೆಳೆದಿತ್ತು. ಬಿಜೆಪಿ-ಜೆಡಿಎಸ್ ಹುಬ್ಬೇರುವಂತೆ ಮಾಡಿತ್ತು. ಒಂದೆಡೆ ಕುಟುಂಬ ಕದನ, ಮತ್ತೊಂದೆಡೆ ಸೇಡಿನ ರಾಜಕಾರಣ ಪ್ರತಿಧ್ವನಿಸಿದೆ. ಜಾತಿ, ಧರ್ಮದ ಹೆಸರಲ್ಲೂ ಮತ ಬೇಟೆ ನಡೆದಿದೆ. ರಾಜ್ಯ ಮತ್ತು ಕೇಂದ್ರದ ಸಾಕಷ್ಟು ನಾಯಕರು ಇಲ್ಲೆಲ್ಲ ಅಡ್ಡಾಡಿದ್ದರು. ಕಡುವೈರಿಗಳು ಪರಸ್ಪರ ಅಬ್ಬರಿಸಿ, ಬೊಬ್ಬಿರಿದಿದ್ದರು. ಆರೋಪ, ಪ್ರತ್ಯಾರೋಪಗಳೊಂದಿಗೆ ಕೆಸರೆರೆಚಾಡಿಕೊಂಡರು. ಇದೀಗ ಮತ ಸಮರಕ್ಕೆ ತೆರೆ ಬಿದ್ದಿದೆ. ಈ ಬೆನ್ನಲ್ಲೇ ಸೋಲು-ಗೆಲವಿನ ಲೆಕ್ಕೆಚಾರ ಶುರುವಾಗಿದೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

