ರಸ್ತೆಗೆ ಕಾಯಕಲ್ಪ ಭಾಗ್ಯ ಯಾವಾಗ?
ಬೆಂಗಳೂರಿನ ಅಂಚಿನಲ್ಲೇ ಇರುವ ಬಿಡದಿ ಭಾಗದಲ್ಲಿ ಹತ್ತಾರು ವಸತಿ ಬಡಾವಣೆ, ನೂರಾರು ಕೈಗಾರಿಕೆಗಳು ತಲೆ ಎತ್ತಿವೆ. ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ಬಿಡದಿ ಸುತ್ತಮುತ್ತಲ ಭಾಗಕ್ಕೆ ಅಭಿವೃದ್ಧಿಯನ್ನೇ ಕಾಣದ ರಸ್ತೆಗಳೇ ಶಾಪವಾಗಿ ಪರಿಣಮಿಸಿವೆ.
ಹೋಬಳಿ ಕೇಂದ್ರವಾದ ಬಿಡದಿಯ ಬಹುತೇಕ ಬಡಾವಣೆಗಳಲ್ಲಿ ಸಂಚಾರವೇ ದೊಡ್ಡ ಗೋಳಿನ ಸಂಗತಿ. ಬಿಡದಿ-ಬೈರಮಂಗಲ, ಬಿಡದಿ-ಹಾರೋಹಳ್ಳಿ ಸೇರಿದಂತೆ ಸಂಪರ್ಕ ರಸ್ತೆಗಳ ಸ್ಥಿತಿಯೂ ಉತ್ತಮವಾಗಿಲ್ಲ. ಬಹುಪಾಲು ರಸ್ತೆಗಳು ಮಂಡಿಯುದ್ದ ಗುಂಡಿಗಳಿಂದ ಆವರಿಸಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಇತರೆ ಕಾಲದಲ್ಲಿ ಧೂಳಿನ ನೇವೇದ್ಯ ತಪ್ಪಿದ್ದಲ್ಲ. ಈ ರಸ್ತೆಗಳು ನಮ್ಮ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಭಿವೃದ್ಧಿ ವಿಷಯದಲ್ಲಿ ಬೊಗಳೆ ಬಿಡುವ ಜನ ನಾಯಕರು ನಾಗರಿಕರಿಗೆ ಮೂಲ ಸೌಕರ್ಯವಾದ ರಸ್ತೆ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದಿರುವುದು ನಾಚಿಗೇಡಿನ ಸಂಗತಿ. ಬಿಡದಿ ರಸ್ತೆಗಳಿಗೆ ಕಾಯಕಲ್ಪದ ಭಾಗ್ಯ ಯಾವಾಗ ಎನ್ನುವುದನ್ನು ಕಾದು ನೋಡಬೇಕಿದೆ.
ಟಿ ವಿಶ್ವನಾಥ್, ಬಿಡದಿ.
ನಮಗೂ ಒಳ್ಳೆಯ ರಸ್ತೆ ಬೇಕು
ರಾಮನಗರವು ಜಿಲ್ಲಾ ಕೇಂದ್ರವಾಗಿ ಏಳು ವರ್ಷ ಕಳೆದಿದೆ. ನಾಗರಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕಳೆದ ಐದಾರು ವರ್ಷದಿಂದ ಈ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳೇ ಅನುಷ್ಠಾನಗೊಳಿಸುತ್ತಿಲ್ಲ.
ಜಿಲ್ಲೆಯಲ್ಲಿ ಅಭಿವೃದ್ಧಿಯ ಹಿನ್ನಡೆಗೆ ರಾಮನಗರ ಬಸ್ ನಿಲ್ದಾಣದಿಂದ ರಾಯರದೊಡ್ಡಿ, ಅರೇಹಳ್ಳಿ ಮತ್ತು ಬಿಳಗುಂಬ ಮಾರ್ಗದ ರಸ್ತೆಗಳ ಅವ್ಯವಸ್ಥೆಯೇ ಸಾಕ್ಷಿ ಗುಡ್ಡೆಯಾಗಿದೆ. ಬೆಂಗಳೂರಿನಂತಹ ನಗರಗಳ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಹಳ್ಳ, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಹಳ್ಳಿಗಾಡಿನ ಜನರು ನಗರಕ್ಕೆ ಬಂದು ವಾಪಸಾಗುವುದು ತಾಪತ್ರಯದ ಕೆಲಸವಾಗಿದೆ. ದ್ವಿಕಚ್ರ ವಾಹನ ಸವಾರರ ಪಾಡಂತೂ ಹೇಳ ತೀರದಾಗಿದೆ. ಸಂಸದರು ಮತ್ತು ಶಾಸಕರು ತಮ್ಮ ಪಾಲಿನ ಕ್ಷೇತ್ರಾಭಿವೃದ್ಧಿ ನಿಧಿ ಜತೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಈ ರಸ್ತೆಯ ಅಭಿವೃದ್ಧಿಗೆ ಇನ್ನಾದರೂ ಮುಂದಾಗಬೇಕು. ನಮಗೂ ಒಳ್ಳೆಯ ರಸ್ತೆ ಸೌಲಭ್ಯ ಬೇಕು.
ಟಿ ಬಿಳಗುಂಬ ಗ್ರಾಮಸ್ಥರು
ಜನರನ್ನು ಗೌರವದಿಂದ ಕಾಣಿ
ಪ್ರಜಾಪ್ರಭುತ್ವ ವ್ಯವಸ್ಥೆಯು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇದೆ ಎನ್ನುವುದು ಬರೇ ಬಾಯಿ ಮಾತಿಗಷ್ಟೇ ಸೀಮಿತ. ರಾಮನಗರ ಜಿಲ್ಲೆಯಲ್ಲಿ ಬಹುತೇಕ ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ಜನರನ್ನು ನಿಲ್ಲಿಸಿಯೇ ಸಮಸ್ಯೆ ಆಲಿಸುವ ಕೆಟ್ಟ ಚಾಳಿ ಮುಂದುವರೆಸಿದ್ದಾರೆ.
ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳು ತಮ್ಮೆದುರು ಕುರ್ಚಿಗಳನ್ನೇ ಇರಿಸಿರುವುದಿಲ್ಲ. ಮುಖ ನೋಡಿ ಮಣೆ ಹಾಕಲಾಗುತ್ತದೆ. ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ಬಂದರಷ್ಟೇ ಕುರ್ಚಿ ಹಾಕಿಸುತ್ತಾರೆ. ಶ್ರೀಸಾಮಾನ್ಯರನ್ನು ನಿಲ್ಲಿಸಿಯೇ ಕಾಟಾಚಾರಕ್ಕೆ ಸಮಸ್ಯೆ ಆಲಿಸುತ್ತಾರೆ.
ಈ ಜಿಲ್ಲೆಯಲ್ಲಿ ಕಚೇರಿಗಳಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರು, ಮರಳು ಲೂಟಿಕೋರರು, ಅಕ್ರಮ ಚಟುವಟಿಕೆ ನಡೆಸುವವರಿಗೆ ಸಿಗುವ ಮನ್ನಣೆ ರೈತರು ಮತ್ತು ನಾಗರಿಕರಿಗೆ ಸಿಗುತ್ತಿಲ್ಲ. ಅಧಿಕಾರಿಗಳು ಜನರನ್ನು ಗೌರವದಿಂದ ಕಾಣುವ ಸೌಜನ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ.
ಟಿ ಕೆ.ನಾರಾಯಣಮೂರ್ತಿ, ರಾಮನಗರ
ಗಬ್ಬೆದ್ದು ನಾರುವ ನಿಲ್ದಾಣ
ಮಾಗಡಿ ಪಟ್ಟಣದ ಖಾಸಗಿ ಬಸಸ್ನಿಲ್ದಾಣದ ಪಕ್ಕದಲ್ಲೇ ಶೌಚಾಲಯಮೊಂದನ್ನು ನಿರ್ಮಿಸಲಾಗಿದೆ. ಆದರೆ, ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಶೌಚಾಲಯದ ಕಡೆ ತೆರಳುವ ಬದಲು ಕಾಂಪೌಂಡ್ ಕಡೆಗೆ ತಿರುಗಿ ಬಹಿರ್ದೆಸೆ ಮಾಡುತ್ತಿದ್ದಾರೆ.
ಮಲ, ಮೂತ್ರ ವಿಸರ್ಜನೆಯಿಂದ ನಿಲ್ದಾಣ ಹಾಗೂ ಪಾದಚಾರಿ ರಸ್ತೆ ಬದಿಯು ಗಬ್ಬೆದ್ದು ನಾರುತ್ತಿದೆ. ಈ ಪರಿಣಾಮ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣದಲ್ಲಿ ಚಾಲಕರು ಬಸ್ಸುಗಳನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿಲ್ಲಿಸಿರುತ್ತಾರೆ. ಇದು ಬಹಿರ್ದೆಸೆಗೆ ಹೋಗುವವರಿಗೆ ಮರೆ ಮಾಡಿಕೊಟ್ಟು, ಅನುಕೂಲ ಕಲ್ಪಿಸುತ್ತಿದೆ. ಸಂಬಂಧಿಸಿದವರು ಇನ್ನಾದರೂ ನಿಲ್ದಾಣ ಆವರಣ ಮತ್ತು ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಕಡಿವಾಣ ಹಾಕಬೇಕಿದೆ. ನಿಲ್ದಾಣ ಪಕ್ಕದಲ್ಲಿರುವ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೂ ಹಣ ಕೊಟ್ಟು ಹೋಗುವ ವ್ಯವಸ್ಥೆಯನ್ನು ರದ್ದುಪಡಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಅದರಿಂದಾದರೂ ನಿಲ್ದಾಣದಲ್ಲಿ ನೆಮ್ಮದಿ ವಾತಾವರಣ ಕಾಣಬಹುದು.
ಟಿ ರಂಗಸ್ವಾಮಿ, ಮಾನಗಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

