ಬೊಂಬೆನಗರಿ: ಮಲತಾಯಿ ಧೋರಣೆ
ಸು.ನಾ.ನಂದಕುಮಾರ್
ಚನ್ನಪಟ್ಟಣ: ರಾಜ್ಯ ಸರ್ಕಾರ ಮತ್ತೆ ಬೊಂಬೆನಗರಿಯ ಮೇಲೆ ಮಲತಾಯಿ ಧೋರಣೆ ಮುಂದುವರೆಸಿದ್ದು, ಈ ಬಾರಿ ಕಾಲುಬಾಯಿ ಜ್ವರದಿಂದ ಸಾವಿಗೀಡಾದ ರಾಸುಗಳ ಮಾಲೀಕರಿಗೆ ಪರಿಹಾರ ವಿತರಣೆ ಮಾಡಲು ವಿಳಂಬ ಮಾಡಿದೆ.
ಜಿಲ್ಲೆಯ ಇತರ ತಾಲೂಕುಗಳಿಗಿಂತ ಚನ್ನಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸುಗಳು ಸಾವಿಗೀಡಾಗಿ ರೈತರು ಕಂಗಾಲಾಗಿದ್ದಾರಾದರೂ ಜಿಲ್ಲೆಯ ಇತರ ತಾಲೂಕುಗಳಲ್ಲಿ ಪೈಪೋಟಿಯ ಮೇಲೆ ಪರಿಹಾರ ವಿತರಣೆ ಮಾಡಿ ದುಪ್ಪಟ್ಟು ಫಲಾನುಭವಿಗಳಿರುವ ಈ ತಾಲೂಕಿಗೆ ಮಾತ್ರ ಪರಿಹಾರ ವಿತರಣೆ ಮಾಡಲು ಮೀನಾಮೇಷ ಏಣಿಸುತ್ತಿದೆ.
ಪ್ರತಿಷ್ಠೆಯ ವಿಷಯ: ಮೃತರಾಸುಗಳಿಗೆ ಸರ್ಕಾರ ಪರಿಹಾರ ಘೋಷಣೆಯ ಹಿಂದೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪಾದಯಾತ್ರೆಯ ಪ್ರಭಾವ ಸಾಕಷ್ಟಿದೆ. ಅವರು ಹೇಳಿಕೆ ನೀಡಿದ ಬಳಿಕ ಸರ್ಕಾರ ಪರಿಹಾರ ಘೋಷಣೆ ಮಾಡಿತು. ಇದಕ್ಕೂ ಮುನ್ನ ಸಂಸದ ಡಿ.ಕೆ.ಸುರೇಶ್ ಪಶುಸಂಗೋಪನಾ ಸಚಿವರನ್ನು ತಾಲೂಕಿನ ಕೆಲಗ್ರಾಮಗಳಿಗೆ ಕರೆತಂದರಾದರೂ ಅಂದು ಸಚಿವರು ಪರಿಹಾರದ ಬಗ್ಗೆ ಚಕಾರವೆತ್ತಿರಲಿಲ್ಲ.
ಕುಮಾರಸ್ವಾಮಿ ಭದ್ರ ಕೋಟೆ ಎನಿಸಿರುವ ರಾಮನಗರದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಸುರೇಶ್ ಪರಿಹಾರದ ಹಣವನ್ನು ಸರ್ಕಾರ ಮಂಜೂರು ಮಾಡಿಸಿದ್ದು ಎಂದು ಹೇಳಿ ಕೊಡಿಸಲು ಉತ್ಸಾಹ ತೋರಿದ್ದರೆ, ಇತ್ತ ಜೆಡಿಎಸ್ ಮುಖಂಡರು ಇದು ಕುಮಾರಣ್ಣನ ಹೋರಾಟದ ಫಲ ಎಂದು ಪರಿಹಾರ ಕೊಡಿಸಲು ಮುಂದಾಗಿದ್ದು ರಾಮನಗರದಲ್ಲಿ ಈ ವಿಷಯ ಎರಡೂ ಪಕ್ಷದಗಳ ಪ್ರತಿಷ್ಠೆಯ ವಿಷಯವಾಗಿದೆ.
ಪಕ್ಕದ ತಾಲೂಕುಗಳಲ್ಲಿ ಜನಪ್ರತಿನಿಧಿಗಳು ಮುಗಿ ಬಿದ್ದು ಪರಿಹಾರ ಕೊಡಿಸುತ್ತಿದ್ದಾರಾದರೂ, ಅತಿಹೆಚ್ಚು ರಾಸುಗಳು ಸಾವಿಗೀಡಾಗಿರುವ ಈ ತಾಲೂಕಿಗೆ ಇದುವರೆಗೂ ಪರಿಹಾರ ವಿತರಣೆಯಾಗದಿರುವುದು ಏಕೆ, ಸೂಕ್ತ ದಾಖಲಾತಿಗಳನ್ನು ನೀಡಿ ಪರಿಹಾರ ಮಂಜೂರು ಮಾಡಿಸಬೇಕಾದ ಜವಾಬ್ದಾರಿ ಪಶುಸಂಗೋಪನಾ ಇಲಾಖೆಯದ್ದಾಗಿದ್ದು ಪಶುಸಂಗೋಪನಾ ಇಲಾಖೆಗೆ ಕನಿಷ್ಠ ಜವಾಬ್ದಾರಿ ಇಲ್ಲವೇ ಎಂಬುದು ನೊಂದ ರೈತರ ಪ್ರಶ್ನೆಯಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ತಾಲೂಕಿಗೆ ಪರಿಹಾರ ವಿತರಣೆ ವಿಳಂಬವಾಗಲು ಅಧಿಕಾರಿಗಳ ಬೇಜವಾಬ್ದಾರಿತನ ಹೇಗೆ ಕಾರಣವೋ ಅದೇ ರೀತಿ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಪ್ರಮುಖ ಪಾತ್ರವಹಿಸಿದೆ. ಶಾಸಕ ಯೋಗೇಶ್ವರ್ ಜತೆ ಮುಸುಕಿನ ಗುದ್ದಾಟ ಆಡುತ್ತಿರುವ ಸಂಸದ ಸುರೇಶ್ ಈ ಕ್ಷೇತ್ರದ ಬಗ್ಗೆ ರಾಮನಗರದಷ್ಟು ಕಾಳಜಿ ತೋರುತ್ತಿಲ್ಲ ಎಂದೇ ಆರೋಪಿಸಲಾಗುತ್ತಿದೆ. ಇತ್ತ ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಅವರಿಗೆ ಈ ಕ್ಷೇತ್ರದ ಬಗ್ಗೆ ಮೊದಲಿದ್ದ ಮಮಕಾರ ಇದ್ದಂತೆ ಕಾಣುತ್ತಿಲ್ಲ.
ಇನ್ನು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಸಿ.ಪಿ.ಯೋಗೇಶ್ವರ್ ಈ ಬಗ್ಗೆ ಯಾವುದೇ ರೀತಿಯ ಸ್ವಂದನೆ ತೋರದಿದ್ದು ಎರಡು ತಿಂಗಳ ಹಿಂದೆ ಸುದ್ದಿ ಗೋಷ್ಠಿ ನಡೆಸಿ ಕಾಲುಬಾಯಿ ಜ್ವರದ ಬಗ್ಗೆ ಔಪಚಾರಿಕ ಮಾಹಿತಿ ಪಡೆದಿದ್ದನ್ನು ಬಿಟ್ಟರೆ ಮೃತರಾಸುಗಳ ಕುಟುಂಬದವನ್ನು ಭೇಟಿ ಮಾಡಿದ್ದೇ ಆಗಲಿ, ಪಶುಸಂಗೋಪನಾ ಸಚಿವರು ಖುದ್ದು ತಮ್ಮ ಮನೆಗೇ ಬಂದಾಗ ಸಚಿವರಿಗೆ ತಾಲೂಕಿನ ವಸ್ತುಸ್ಥಿಯನ್ನು ತಿಳಿಸುವ ಪ್ರಯತ್ನವನ್ನು ಮಾಡಿಲ್ಲ. ಮೃತ ರಾಸುಗಳಿಗೆ ಪರಿಹಾರ ವಿತರಣೆ ಕಾರ್ಯವಿಳಂಬವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು ಇದರಿಂದಾಗಿ ತಾಲೂಕಿನ ನೊಂದ ರೈತರಿಗೆ ಸಕಾಲದಲ್ಲಿ ಪರಿಹಾರ ವಿತರಣೆಯಾಗದೆ ಪರಿತಪಿಸುವಂತಾಗಿದೆ.
ಯಾಕೀ ವಿಳಂಬ
ಕಾಲುಬಾಯಿ ಜ್ವರದಿಂದಾಗಿ ಚನ್ನಪಟ್ಟಣದಲ್ಲಿ 1200 ರಾಸುಗಳು ಸಾವಿಗೀಡಾಗಿದೆ ಎಂದು ಪಟ್ಟಿ ಸಿದ್ಧಪಡಿಸಿರುವ ಜಿಲ್ಲಾಡಳಿತ ಇದುವರಗೆ ಮೃತ ರಾಸುಗಳ ಮಾಲೀಕರಿಗೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ವೋಚರ್ಗಳನ್ನು ಸಿದ್ಧಪಡಿಸುವುದು ವಿಳಂಬವಾಗಿರುವುದರಿಂದ ಪರಿಹಾರ ವಿತರಣೆ ನಿಧಾನವಾಗುತ್ತಿದೆ ಎಂಬ ಸಿದ್ಧ ಉತ್ತರ ಅಧಿಕಾರಿಗಳದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

