ಬೆಂಗಳೂರು ಗ್ರಾಮಾಂತರ

ಪರಿಹಾರ ವಿತರಣೆಯಲ್ಲಿ ರಾಜಕೀಯ

Published On :

ಕ.ಪ್ರ.ವಾರ್ತೆ   ರಾಮನಗರ   ಡಿ.3
ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ವಿತರಣೆ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹೋರಾಟದ ಫಲ. ಇಲ್ಲ ಅದು ಸಂಸದ ಡಿ.ಕೆ.ಸುರೇಶ್ ಪ್ರಯತ್ನದ ಫಲ...
- ಹೀಗೆ ಕಾಲು ಬಾಯಿ ಜ್ವರದ ಪರಿಹಾರ ವಿತರಣೆ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಆಡಳಿತ ಜೆಡಿಎಸ್ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮಂಗಳವಾರ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ಇಳಿದು, ತಮ್ಮ ನಾಯಕರ ವೈಭವೀಕರಣದ ಹೈಡ್ರಾಮಾ ನಡೆಸಿದರು.
ಸಭೆಯಲ್ಲಿ ಸದಸ್ಯರು ಸಾಕಷ್ಟು ಸಮಯ ಕಾಲುಬಾಯಿ ಜ್ವರಕ್ಕೇ ಸೀಮಿತವಾದರು. ಸಂಸದ ಸುರೇಶ್ ಅವರು  ತ್ವರಿತವಾಗಿ ಪರಿಹಾರ ವಿತರಣೆ ಆಗುವುದಕ್ಕೆ ಕಾರಣೀಭೂತರು. ಅದನ್ನು ಸಹಿಸದೆ ಜೆಡಿಎಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಸ್ತಾಪಿಸಿದಾಗ ಚರ್ಚೆ ಕಾವೇರಿತು.
ಕಾಲುಬಾಯಿ ಜ್ವರಬಾಧೆ ವಿಷಯವಾಗಿ ಸಂಸದರ ನೇತೃತ್ವದಲ್ಲಿ ನಾವೆಲ ್ಲ(ಕಾಂಗ್ರೆಸ್ ಮುಖಂಡರು) ಇಡೀ ಜಿಲ್ಲೆಯನ್ನು ಸುತ್ತಿದ್ದೇವೆ. ಸಚಿವರು, ಅಧಿಕಾರಿಗಳ ಮನೆ ಬಾಗಿಲಿಗೆ ಎಡತಾಕಿ ಪರಿಹಾರ ಮಂಜೂರು ಮಾಡಿಸಿದ್ದೇವೆ. ವಿತರಣೆ ಬಂದಾಗ ನೀವು (ಜೆಡಿಎಸ್) ಅಡ್ಡಿಪಡಿಸುತ್ತಿದ್ದೀರಿ ಎಂದು ಇಕ್ಬಾಲ್ ಹುಸೇನ್ ಪ್ರತಿಪಾದಿಸುತ್ತಿದ್ದಂತೆಯೇ ಜೆಡಿಎಸ್ ಪಾಳಯ ಕೆರಳಿತು.
ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಮಾಜಿ ಅಧ್ಯಕ್ಷ ಮುದ್ದುರಾಜ್ ಯಾದವ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಲ್.ಚಂದ್ರ, ರಘುಕುಮಾರ್, ವಿಜಯಕುಮಾರ್ ಸಹಿತ ಜೆಡಿಎಸ್ ಕೆಲ ಸದಸ್ಯರು ಪರಿಹಾರ ವಿತರಣೆ ಪ್ರಕ್ರಿಯೆಯಲ್ಲಿನ ಹುಳುಕುಗಳನ್ನು ಪ್ರಸ್ತಾಪಿಸಿ ಇಕ್ಬಾಲ್ ಹುಸೇನ್ ವಿರುದ್ಧ ಹರಿಹಾಯ್ದು, ವಾಗ್ದಾಳಿ ನಡೆಸಿದರು.
ಕೈಯಿಂದೇನಾದ್ರೂ ಕೊಡ್ತಿದ್ದೀರಾ: ರೈತರಿಗೆ ಪರಿಹಾರವನ್ನು ನೀಡುತ್ತಿರುವುದು ಸರ್ಕಾರವೇ ಹೊರತು ಸಂಸದ, ಕಾಂಗ್ರೆಸ್ ನಾಯಕರಲ್ಲ. ಸರ್ಕಾರ ಬರೇ ಕಾಂಗ್ರೆಸ್ ನಾಯಕರದ್ದಲ್ಲ. ಸರ್ಕಾರದ ಪರಿಹಾರ ವಿತರಣೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಜೆಡಿಎಸ್ ಪಾಳಯವು ತರಾಟೆಗೆ  ತೆಗೆದುಕೊಂಡಿತು.
ಕಾಂಗ್ರೆಸ್ ನಾಯಕರು ಯಾರೂ ಅವರ ಮನೆಯ ಹಣ ಹಾಕಿ ಪರಿಹಾರ ನೀಡುತ್ತಿಲ್ಲ. ಸರ್ಕಾರಿ ಕಾರ್ಯಕ್ರಮ ನಡೆಸುವುದಕ್ಕೂ ಒಂದು ಶಿಷ್ಟಾಚಾರವಿದೆ. ಅದನ್ನು ಪಾಲಿಸಿದ್ದರೆ ನಮ್ಮದೇಕೆ ತಂಟೆ, ತಕರಾರು ಇರುತ್ತಿತ್ತು ಎಂದು ಇಕ್ಬಾಲ್ ಹುಸೇನ್ ಮತ್ತು ಕಾಂಗ್ರೆಸ್ ಸದಸ್ಯರತ್ತ ಜೆಡಿಎಸ್ ಪಡೆ ಪ್ರಶ್ನೆಗಳ ಸುರಿಮಳೆಗರೆಯಿತು.
ಹತ್ತು ನಿಮಿಷದವರೆಗೆ ಪರಸ್ಪರರು ದೋಷಾರೋಪಣೆಯಲ್ಲಿ ತೊಡಗಿದರು. ನಂತರ ಕಾಲು ಗಂಟೆ ಯಾರು ಏನು ಹೇಳುತ್ತಿದ್ದಾರೆ, ಅವರು ಇವರಿಗೇನು ಬೈಯ್ದರು, ಇವರು ಅವರಿಗೇನು ನಿಂದಿಸಿದರು ಎನ್ನುವುದು ಕೇಳದಷ್ಟು ಸಭೆ ಗೊಂದಲದ ಗೂಡಾಯಿತು. ತಹಬದಿಗೆ ತರಲು ಸಿಇಒ ಡಾ.ವೆಂಕಟೇಶ್ ಸಹಿತ ಅಧಿಕಾರಿಗಳು ಹೈರಾಣಾದರು.
ಮರುಕಳಿಸಿದ ಚಕಮಕಿ: ಸುಮಾರು ಅರ್ಧ ತಾಸಿನ ರಾಜಕೀಯ ಜಂಗೀಕುಸ್ತಿಯ ಬಳಿಕ ಸಭೆ ಪುನಾರಂಭಗೊಂಡಿತು. ಆ ವೇಳೆ ಕಾಂಗ್ರೆಸ್ ಸದಸ್ಯರು ಸಭೆ ನಡೆಸಲು ಮತ್ತು ಜಿಲ್ಲೆ ಅಭಿವೃದ್ಧಿ ವಿಷಯವಾಗಿ ಸಹಕರಿಸುತ್ತಿಲ್ಲ ಎಂದು ಅಧ್ಯಕ್ಷ ಎಚ್.ಸಿ.ರಾಜು ಸ್ವತಃ ಪ್ರಸ್ತಾಪಿಸಿದಾಗ ಇಕ್ಬಾಲ್ ಹುಸೇನ್ ಮತ್ತಿತರರು ಆಕ್ಷೇಪಿಸಿದರು.   ಮರುಕಳಿಸಿದ ಮಾತಿನ ಚಕಮಕಿ ವೇಳೆ ಇಕ್ಬಾಲ್ ಹುಸೇನ್ ತಾಳ್ಮೆ ಕಳೆದುಕೊಂಡರು. ಅಧ್ಯಕ್ಷ ಪೀಠದತ್ತ ನುಗ್ಗುವ ಯತ್ನ ಮಾಡಿದ ಅವರು ಹಲವು ಬಾರಿ ಅಧ್ಯಕ್ಷರನ್ನು ಏಕ ವಚನದಿಂದಲೇ ಮಾತನಾಡಿಸಿದರು. ಹೀಗೆ ಸಭಾ ಗೌರವ ಉಲ್ಲಂಘನೆಗೆ ಜೆಡಿಎಸ್ ಸದಸ್ಯರು ಕಿಡಿ ಕಾರಿದರು.
ಅಧಿಕಾರಿಗಳಿಗೆ ತರಾಟೆ: ರಾಮನಗರ ಜಿಲ್ಲೆಯು ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ರಿಂದ 27ನೇ ಸ್ಥಾನಕ್ಕೆ ಕುಸಿದಿರುವ ಬಗ್ಗೆ ಸಿಇಒ ಡಾ.ಎಂ.ವಿ.ವೆಂಕಟೇಶ್ ಅವರನ್ನು ಅಧ್ಯಕ್ಷ ರಾಜು ಸಹಿತ ಸದಸ್ಯರು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡರು.
ಶಿಸ್ತಿನ ಅಧಿಕಾರಿ ಎಂದು ಸ್ವತಃ ಬಣ್ಣಿಸಿಕೊಳ್ಳುವ ನೀವು ಬಂದು 8 ತಿಂಗಳಿಂದ ಇದುವರೆಗೆ ಏನು ಮಾಡಿದ್ದೀರಿ ಈ ಜಿ.ಪಂ.ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲದೆ ಪ್ರೇಕ್ಷಕರ ಪಾತ್ರದಲ್ಲೂ ನೀವೇ ಗುರುತಿಸಿಕೊಳ್ಳುತ್ತಿದ್ದೀರಿ ಎಂದು ಮುದ್ದುರಾಜ್ ಯಾದವ್ ವ್ಯಂಗ್ಯವಾಡಿದರು.
ಬೆಸ್ಕಾಂ ವಿರುದ್ಧ ಟೀಕೆ: ಕನಕಪುರ ತಾಲೂಕಿನ ಕೊಟ್ಟಗಾಳು, ದೊಡ್ಡಮುದವಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ತ್ರೀಫೆಸ್ ವಿದ್ಯುತ್ ಪೂರೈಕೆ ನಿತ್ಯ 2-3 ತಾಸು ಸಹ ಸಿಗುತ್ತಿಲ್ಲ. ಸಣ್ಣದಾಗಿ ಮಳೆ, ಗಾಳಿ ಆದ್ರೆ ಸಾಕು ಹೋದ ಕರೆಂಟ್ ಇಡೀ ದಿನ ಬರೋದೇ ಇಲ್ಲ ಎಂದು ಸದಸ್ಯ ವೆಂಕಟೇಶಯ್ಯ ಹರಿಹಾಯ್ದರು. ಚರ್ಚೆಯಲ್ಲಿ ಎಂ.ಕೆ.ಧನಂಜಯ, ರಂಗಸ್ವಾಮಿ ಪಾಲ್ಗೆಂಡರು. ಸಭೆಯಲ್ಲಿ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ ಭಾಗವಹಿಸಿದ್ದರು.


ನಡಾವಳಿ ದಾಖಲು ಸಮರ್ಪಕವಾಗಿಲ್ಲ
ಸಭಾ ನಡವಳಿಗಳನ್ನು ದಾಖಲಿಸುವಲ್ಲಿ ಸಾಕಷ್ಟು ಲೋಪದೋಷವಾಗುತ್ತಿದೆ. ಕೆಲವೊಂದು ಗಂಭೀರ ಚರ್ಚೆಗಳು ನಡಾವಳಿ ಪುಸ್ತಕದಲ್ಲಿ ದಾಖಲಾಗುತ್ತಲೇ ಇಲ್ಲ. ಇದಕ್ಕೆ ಇರುವ ಕಾರಣವಾದರೂ ಏನೆನ್ನುವುದು ನಿಗೂಢ. ಈ ಬಗ್ಗೆ ಸ್ಪಷ್ಟನೆ ಬರುವವರೆಗೂ ಸಭೆ ನಡೆಸಲು ಬಿಡನೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರ ಸಭೆಯ ಆರಂಭದಲ್ಲೇ ಸಿಡಿದೆದ್ದರು.  ಈ ವಿಷಯವಾಗಿ ಕಾಂಗ್ರೆಸ್ ಬಹುತೇಕ ಮತ್ತು ಜೆಡಿಎಸ್ನ ಕೆಲ ಸದಸ್ಯರೂ ಧ್ವನಿಗೂಡಿಸಿದರು. ನಾವು ಚರ್ಚಿಸಿದ ಸಾಕಷ್ಟು ವಿಷಯಗಳೂ ದಾಖಲಾಗುತ್ತಿಲ್ಲ. ಇಲ್ಲಿ ಅಧಿಕಾರಿಗಳು ಲಂಗು-ಲಗಾಮಿಲ್ಲದೆ ವರ್ತಿಸುತ್ತಿದ್ದಾರೆ ಎಂದು ಕೂಗಾಡಿದರು. ಮುಂದೆ ಲೋಪ ಎದುರಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಮತ್ತು ಸಿಇಒ ಭರವಸೆ ನೀಡಿದ ಬಳಿಕ ಚರ್ಚೆ ಅಂತ್ಯವಾಯಿತು.


ತಪಾಸಣೆ ನಡೆಸಿ ಕ್ರಮ ಜರುಗಿಸಿ
ಕೃಷಿ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಿ, ಪಂಪ್ಸೆಟ್ ಅಳವಡಿಸಿಕೊಂಡು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವ ದಂಧೆ ಜಿಲ್ಲಾದ್ಯಂತ ಮಿತಿ ಮೀರಿದೆ. ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜೆಡಿಎಸ್ ಸದಸ್ಯ ಎಂ.ಕೆ.ಧನಂಜಯ ಆರೋಪಿಸಿದರು.  ಈ ಬಗ್ಗೆ 2 ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಡಾ.ವೆಂಕಟೇಶ್ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.