ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಅರ್ಕಾವತಿ ನದಿ ಪಾತ್ರ ಒತ್ತುವರಿ ತೆರವು ಯೋಜನೆಗೆ ಆದೇಶ
ಬೆಂಗಳೂರು: ಅರ್ಕಾವತಿ ನದಿ ಪಾತ್ರ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಒತ್ತುವರಿ ತೆರವು ಕ್ರಮಗಳ ಕುರಿತು ನಿಗಾವಹಿಸಲು ಪ್ರತ್ಯೇಕ ಸಮಿತಿ ರಚಿಸುವಂತೆ ಆದೇಶಿಸಿದೆ. ನದಿಪಾತ್ರಗಳ ಒತ್ತುವರಿ ಕುರಿತು ಸ್ಪಷ್ಟ ಮಾಹಿತಿ ನೀಡಲು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ, ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾ.ಎಂ.ಎನ್.ವೇಣುಗೋಪಾಲ್ ಅವರಿದ್ದ ಏಕಸದಸ್ಯ ಪೀಠ, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿ ಹೇಳಿದೆ.  ಎಂ.ಭಾಸ್ಕರ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಪೀಠ, ಡಿಸೆಂಬರ್ 11ರಂದು ಈ ಸಂಬಂಧ ಬಿಡಿಎ, ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆ ನಡೆಸಿ ಒತ್ತುವರಿ ತೆರವು ಸಂಬಂಧ ಕಾರ್ಯಯೋಜನೆ ರೂಪಿಸಬೇಕು ಎಂದು ಪೀಠ ತಿಳಿಸಿದೆ.  ಅರ್ಕಾವತಿ ನದಿ ಪಾತ್ರವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
ಆನೇಕಲ್ಲು: ಸಹಕಾರಿ ಕ್ಷೇತ್ರದಲ್ಲಿ ರೈತರ ಪರ ಅನೇಕ ಯೋಜನೆಗಳಿದ್ದು ಅವುಗಳ ಪೂರ್ಣ ಪ್ರಮಾಣದ ಜಾರಿಗೆ ಬದ್ಧರಾಗಿರುವುದಾಗಿ ಆನೇಕಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ತೆಲಗರಹಳ್ಳಿಯ ಪಿ. ಜಯರಾಮಯ್ಯ ತಿಳಿಸಿದ್ದಾರೆ. ಅವರು ನಿಕಟ ಪೂರ್ವ ಅಧ್ಯಕ್ಷ ಆರ್. ವೆಂಕಟೇಶರೆಡ್ಡಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿ ಸಂಘದ ಕಟ್ಟಡವನ್ನು ಮಳಿಗೆಗಳಾಗಿ ಪರಿವರ್ತಿಸಿ ನಿರಂತರ ಆದಾಯಕ್ಕಾಗಿ ಹಾಲಿ ಸಮಿತಿ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸಿಗುವ ಬಡ್ಡಿ ರಹಿತ ಸಾಲ, ಬೆಳೆ ಸಾಲ, ಯಶಸ್ವಿನಿ ಯೋಜನೆ ಹಾಗೂ ಪಡಿತರ ವಿತರಣೆಯಂತಹ ಯೋಜನೆಗಳ ಮರು ಚಾಲನೆಗೆ ಆದ್ಯತೆ ನೀಡಲಾಗುವುದು ಎಂದರು.  
ಪ್ರತಿಭಾ ಕಾರಂಜಿ
ಹೊಸಕೋಟೆ: ಪ್ರತಿಭಾ ಕಾರಂಜಿ  ಕಾರ್ಯಕ್ರಮವು ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿವೆ ಎಂದು ತಾ.ಪಂ.ನ ಸಹಾಯಕ ನಿರ್ದೇಶಕ ತಿಮ್ಮಯ್ಯ ಅಭಿಪ್ರಾಯಪಟ್ಟರು. ದೊಡ್ಡಹುಲ್ಲೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಮಂಜುನಾಥ್, ನಳಿನಾಕ್ಷಿ  ಮಂಜುನಾಥ್, ರಾಜಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.