ಬಿಇಒ ವರ್ಗ ವಿರೋಧಿಸಿ ಸಮತಾ ಸೈನಿಕ ದಳ ಧರಣಿ
ಮಾಲೂರು: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ ರೆಡ್ಡಿ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಸ್ಥಳೀಯ ಕರ್ನಾಟಕ ಸಮತಾ ಸೈನಿಕದಳ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ ತಾಲೂಕಿನ ಸಾರ್ವಜನಿಕ ಕ್ಷೇತ್ರದಲ್ಲಿ ಕಾನೂನು ಚೌಕಟ್ಟಿನಲ್ಲಿ ಒಂದು ಹೂಸ ಬದಲಾವಣೆ ತಂದ ಭ್ರಷ್ಟಾಚಾರ ವಿರೋಧಿ ನಡಾವಳಿಕೆಯ ಬಿಇಓ ವೆಂಕಟರಾಮರೆಡ್ಡಿ ವರ್ಗಾವಣೆಯಲ್ಲಿ ಇಲ್ಲಿನ ಶಾಸಕ ಕೈವಾಡ ಇದೆ. ತಮ್ಮ ಮಾತಿಗೆ ಮನ್ನಣೆ ನೀಡಿಲ್ಲ ಎಂಬ ಉದ್ದೇಶದಿಂದ ವರ್ಗಾವಣೆ ಮಾಡುವಂತೆ ಪತ್ರ ನೀಡಿರುವ ಶಾಸಕರ ವರ್ತನೆ ಖಂಡನೀಯ. ಈ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಇಲ್ಲಿಯ ಕಾರ್ಯನಿರ್ವಹಿಸುವಂತೆ ಮಾಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ವರ್ಗಾವಣೆ ರದ್ದು ಪಡಿಸದಿದ್ದರೆ ಸಂಘಟನೆ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಮಿಲಟರಿ ರಮೇಶ್, ರಾಧಮ್ಮ, ಚೌಡಪ್ಪ, ಎಸ್. ನಾರಾಯಣಸ್ವಾಮಿ, ಎಂ. ರವಿ ಕುಮಾರ್, ಮುನಿಯಪ್ಪ, ಮೂರ್ತಿ, ಟಿ.ಕೆ. ಸುರೇಶ್, ಕಾವ್ಯಾನಂದ, ಟಿ. ಮುನಿರಾಜು, ಸುನೀಲ್ ಕುಮಾರ್ ಇದ್ದರು.
ಇಂದು ಬ್ರಹ್ಮರಥೋತ್ಸವ
ಸಾವನದುರ್ಗ: ಪಟ್ಟಣದ ಶ್ರೀ ಸಾವಂಜಿ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಮ್ಮನವರ ಬ್ರಹ್ಮರಥೋತ್ಸವವು ಫೆ.23ರಿಂದ 25ರ ವರೆಗೆ ನಡೆಯಲಿದೆ.
23ರಂದು ಬೆಳಗ್ಗೆ ಮಹಾ ರುದ್ರಾಭಿಷೇಕ, ಕ್ಷೀರಾಭಿಷೇಕ, ಮಧ್ಯಾಹ್ನ 12ರಿಂದ ಬ್ರಹ್ಮರಥೋತ್ಸವ ನಡೆಯಲಿದೆ. ನಂತರ ಎಸ್.ಆರ್. ನಂಜಮ್ಮಣ್ಣಿ ಮತ್ತು ಕುಟುಂಬದವರಿಂದ ಅರವಂಟಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ದಾಸೋಹ, ಸಂಜೆ ವೀರಗಾಸೆ ನೃತ್ಯ, ಖಡ್ಗೋತ್ಸವ, ಬೆಳ್ಳಿ ಪ್ರಭಾವಳಿ ಉತ್ಸವ, ನಂದಿ ವಾಹನೋತ್ಸವ, ಉಯ್ಯಾಲೆ ಉತ್ಸವ, ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
24ರಂದು ಬೆಳಗ್ಗೆ ರುದ್ರಾಭಿಷೇಕ, ಶೇಷವಾಹನ, ಬಿಲ್ವವೃಕ್ಷ ಉತ್ಸವ, ಚಿಕ್ಕ ಕುದುರೆ ಉತ್ಸವ, ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವಗಳು ನಡೆಯಲಿವೆ. 25ರಂದು ಚಂದ್ರಮಂಡಲ ಉತ್ಸವ, ವಿಶೇಷ ವಿದ್ಯುತ್ ದೀಪಾಲಂಕಾರ, ಕಾಶಿ ಕುಣಿತ, ವೀರಭದ್ರನ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಕುಣಿತವನ್ನು ಹಮ್ಮಿಕೊಳ್ಳಲಾಗಿದೆ.
ಹಫ್ತಾ ಒತ್ತಾಯ: ಐವರ ಬಂಧನ
ಆನೇಕಲ್ಲು: ಕರವೇ ಕಾರ್ಯಕ್ರಮಗಳಿಗೆ ವಾರ್ಷಿಕ ವಂತಿಗೆ ನೀಡಬೇಕು. ಸದ್ಯ ಮಾತುಕತೆಗೆ ಹಫ್ತಾ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದ ಕರವೇ ಮುಖಂಡರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಕರವೇ ಮಾಜಿ ತಾಲೂಕು ಅಧ್ಯಕ್ಷ ಅಂಬರೀಷ, ಸಂಪಿಗೆ ನಗರದ ಲೋಕೇಶ, ಶಾಂತಿಪುರದ ಲೋಕೇಶ, ಹೆಬ್ಬಗೋಡಿ ಬಾಬು ಮತ್ತು ಗೋಪಿ ಬಂಧಿತರು.
ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಅನಂತ ನಗರದಲ್ಲಿ ಡಾ.ಕಿರಣ್ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದು, ಮೇಲಿನ ಆರೋಪಿಗಳು ವೈದ್ಯರನ್ನು ಭೇಟಿ ಮಾಡಿ 2 ಲಕ್ಷ ಹಫ್ತಾ ನೀಡಬೇಕು. ಕರವೇ ಕಾರ್ಯಕ್ರಮಗಳಿಗೆ ವಾರ್ಷಿಕ ರೂ. 50,000 ನೀಡಬೇಕೆಂದು ಧಮಕಿ ಹಾಕಿದ್ದಾರೆ ಎಂದು ವೈದ್ಯ ಕಿರಣ್ ಹೆಚ್ಚುವರಿ ಎಸ್ಪಿ ಅವರಿಗೆ ದೂರು ನೀಡಿದ್ದರು.
ಈ ಬಗ್ಗೆ ಹೆಬ್ಬಗೋಡಿ ಠಾಣೆಗೆ ಸೂಚನೆ ನೀಡಿದ್ದ ಎಸ್ಪಿ ಜಾಲ ಬೀಸಿ ಆರೋಪಿಗಳನ್ನು ಹಣ ಪಡೆಯಲು ಸನಿಹದ ಹೋಟಲ್ಗೆ ಬರುವಂತೆ ವೈದ್ಯರಿಂದ ದೂರವಾಣಿ ಕರೆ ಮಾಡಿಸಿದರು. ಸ್ಥಳಕ್ಕೆ ಬಂದ ಆರೋಪಿಗಳನ್ನು ಪಿಎಸ್ಐ ಶಶಿಧರ್ ಮತ್ತು ಸಿಬ್ಬಂದಿ ಬಂಧಿಸಿ ದ್ದಾರೆ. ಮತ್ತೊಬ್ಬ ಆರೋಪಿ ಮಂಜುನಾಥ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಐ ಶಶಿಧರ್ ತಿಳಿಸಿದ್ದಾರೆ.
ಸುಮೋ ಡಿಕ್ಕಿ: ಮೂವರ ಸಾವು
ಆನೇಕಲ್ಲು: ಗ್ರಾನೈಟ್ ಕಾರ್ಖಾನೆಯ ಕೆಲಸ ಮುಗಿಸಿ ದಾರಿಯಲ್ಲಿ ನಡೆದು ಹೋಗಿತ್ತಿದ್ದ ಕಾರ್ಮಿಕರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೆ ಮೃತ ಪಟ್ಟ ಘಟನೆ ಹಾರಗದ್ದೆಯ ಬಳಿ ನಡೆದಿದೆ. ಮೃಪಟ್ಟವರು ಅಸ್ಸಾಂ ಮೂಲದವರು ಎಂದು ಹೇಳಲಾಗಿದ್ದು, ಮೃತರನ್ನು ಜೀತು, ದೀಪಕ್ ಮತ್ತು ಪುತುಲ್ ಎಂದು ಗುರುತಿಸಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.1ರಿಂದ ರೇಷ್ಮೆನಾಡು ವಸ್ತ್ರೋತ್ಸವ
ರಾಮನಗರ: ಕೇಂದ್ರ ಸರ್ಕಾರದ ಮಾರ್ಕೆಟಿಂಗ್ ಅಂಡ್ ಎಕ್ಸ್ಪೋ ಯೋಜನೆಯಡಿಯಲ್ಲಿ ಮಾ.1ರಿಂದ 7ರ ವರೆಗೆ 7 ದಿನಗಳ ರೇಷ್ಮೆನಾಡು ವಸ್ತ್ರೋತ್ಸವ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಮಾ.1ರಂದು ಸಂಜೆ 4.30ಕ್ಕೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅಧ್ಯಕ್ಷತೆ ವಹಿಸುವರು. ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಸಂಘಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು. ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಸ್ತ್ರಗಳು ಶೇ.20ರ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಮೇಳದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಕೈಮಗ್ಗ ನೇಕಾರರ ಸಹಕಾರ ಸಂಘಗಳು ಭಾಗವಹಿಸಿ ತಮ್ಮ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅನುಕೂಲತೆ ಮಾಡಿಕೊಡಲಾಗಿದೆ. ಈ ಸಂದರ್ಭದಲ್ಲಿ ಉಚಿತವಾಗಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಒದಗಿಸಲಾಗುವುದು. ಭಾಗವಹಿಸಲು ಇಚ್ಚಿಸುವ ನೇಕಾರ ಸಹಕಾರ ಸಂಘಗಳು ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಖಾಸಗಿ ಬಟ್ಟೆ ಅಂಗಡಿಗಳು ಹಾಗೂ ಸಂಸ್ಥೆಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ಜಿ.ಪಂ. ಭವನದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ- 080-27272288 ಸಂಪರ್ಕಿಸಲು ಕೋರಿದೆ.
ಶಾರ್ಪ್ ಕಾಪಿಯರ್ ಯಂತ್ರ ಖರೀದಿಗೆ ಅರ್ಜಿ
ರಾಮನಗರ: ರಾಮನಗರದ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಸಿ.ಜೆ.ಎಂ ನ್ಯಾಯಾಲಯಕ್ಕೆ ಶಾರ್ಪ್ ಕಾಪಿಯರ್ ಯಂತ್ರವನ್ನು ಖರೀದಿಸಲು ನೋಂದಾಯಿತ ಸಂಸ್ಥೆಗಳು ಅಥವಾ ವ್ಯಕ್ತಿಗಳಿಂದ ದರಪಟ್ಟಿ ಆಹ್ವಾನಿಸಲಾಗಿದೆ. ದರಪಟ್ಟಿಗಳನ್ನು ಸೀಲ್ಡ್ ಕೋಟೆಯಲ್ಲಿ 2013ರ ಮಾರ್ಚ್ 2ರ ಸಂಜೆ 5ರೊಳಗೆ ಸಲ್ಲಿಸಬೇಕು. ದರಪಟ್ಟಿಗಳನ್ನು ಮಾ.4ರ ಸಂಜೆ 5ಕ್ಕೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಾರ್ಯಾಲಯದಿಂದ ಪಡೆಯಬಹುದು.
ನಾಳೆ ವಿದ್ಯುತ್ ವ್ಯತ್ಯಯ
ರಾಮನಗರ: ಫೆ.24ರಂದು ಚನ್ನಪಟ್ಟಣದಲ್ಲಿ ನ್ಯಾಯಾಲಯದ ಕಟ್ಟಡದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಗರ ವ್ಯಾಪ್ತಿಯ ರಾಘವೇಂದ್ರ ಬಡಾವಣೆ, ಆರ್.ಕೆ. ಬಡಾವಣೆ, ಮಂಜುನಾಥ ಬಡಾವಣೆ, ಚರ್ಚ್ ರಸ್ತೆ, ಕುವೆಂಪುನಗರ, ಮಂಗಳವಾರಪೇಟೆ, ಚಿಕ್ಕಮಳೂರು, ಮಾರುತಿ ಬಡಾವಣೆ ಹಾಗೂ ಕೋಟೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಬೆಸ್ಕಾಂನ ಚನ್ನಪಟ್ಟಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕನಕಪುರ: 27 ವಾರ್ಡ್ ಪಟ್ಟಿ
ಕನಕಪುರ: ಕನಕಪುರ ಟೌನ್ ಜಾತ್ಯಾತೀತ ಜನತಾದಳ ಕಾರ್ಯಕರ್ತರ ಸಭೆ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಪಟ್ಟಣದ 27 ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿಯನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಯಿತು. ಈ ಬಾರಿಯೂ ಹಾಲಿ ಜೆಡಿಎಸ್ ಸದಸ್ಯರಾದ ಬಿ. ನಾಗರಾಜು,ಪುಟ್ಟರಾಜು, ಕೆ.ಆರ್. ಕೃಷ್ಣಮೂರ್ತಿ, ಪಾರ್ವತಮ್ಮ, ಬಾಬು ಷರೀಫ್, ಹಾಜಿ ಸೈಯದ್ ಮುಜೀಬುಲ್ಲಾ, ಜಯರಾಮು ಸೇರಿದಂತೆ ಬಹುತೇಕ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್ ಮಾತನಾಡಿ, ಪಟ್ಟಣದಲ್ಲಿ ಜೆಡಿಎಸ್ ಬೇರುಗಳು ಆಳವಾಗಿದ್ದು, ಜನ ಬೆಂಬಲ ಸಾಕಷ್ಟಿದೆ. ಅಭ್ಯರ್ಥಿಗಳೊಂದಿಗೆ ಕಾರ್ಯಕರ್ತರು ಒಮ್ಮತದಿಂದ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಮತ್ತೆ ಆಡಳಿತಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ತುಂಗಣಿ ಪುಟ್ಟಸ್ವಾಮಿ, ತಾ. ಜೆಡಿಎಸ್ ಅಧ್ಯಕ್ಷ ಸಿದ್ದಮರಿಗೌಡ, ಹಿಂ.ವ. ರಾಜ್ಯ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ವೃಷಭಯ್ಯ,ಬಿ.ಎಸ್. ಗೌಡ, ಸ್ಟುಡಿಯೋ ಚಂದ್ರು ಪಾಲ್ಗೊಂಡಿದ್ದರು.
ದೇವನಹಳ್ಳಿ ಪುರಸಭೆಗೆ 32 ನಾಮಪತ್ರ
ದೇವನಹಳ್ಳಿ: ಇಲ್ಲಿನ ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ 23 ವಾರ್ಡ್ಗಳಲ್ಲಿ 19 ವಾರ್ಡ್ಗಳಿಂದ 32 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಲ್ಕು ವಾರ್ಡ್ಗಳಲ್ಲಿ (2,9,11,12) ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮ ಪತ್ರ ಸಲ್ಲಿಸಿದವರಲ್ಲಿ 15 ಮಂದಿ ಕಾಂಗ್ರೆಸ್, 4 ಬಿಜೆಪಿ ಹಾಗೂ 13 ಮಂದಿ ಪಕ್ಷೇತರರು ಇದ್ದು, ಅದರಲ್ಲಿ ಕೆಲವರು ಬಿ ಫಾರಂ ಬಂದ ನಂತರ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗುತ್ತಾರೆ.
ವಾರ್ಡ್ 1-ಜಿ.ಮಾರಪ್ಪ, ಎಂ.ನಾರಾಯಣಸ್ವಾಮಿ. ವಾರ್ಡ್ 3- ಎಂ.ಚಂದ್ರಶೇಖರ್, ಜಿ.ಪ್ರಕಾಶ್ (ಕಾಂ), ಪಿ.ಶಿವಕುಮಾರ್. ವಾರ್ಡ್4 ಎಂ.ನಾರಾಯಣಸ್ವಾಮಿ (ಕಾಂ). ವಾರ್ಡ್ 5 ರತ್ನಮ್ಮ (ಕಾಂ). ವಾರ್ಡ್ 6- ಎನ್.ರಘು (ಕಾಂ). ವಾರ್ಡ್ 7- ಶಾರದಮ್ಮ (ಕಾಂ). ವಾರ್ಡ್ 8- ಎನ್.ನಾರಾಯಣಸ್ವಾಮಿ(ಕಾಂ). ವಾರ್ಡ್10- ಭಾಗ್ಯಮ್ಮ. ವಾರ್ಡ್ ನಂ.-ಪಿ.ಮುನಿರಾಜು (ಬಿಜೆಪಿ), ಜಿ.ವೆಂಕಟೇಶ್ (ಕಾಂ). ವಾರ್ಡ್ 14- ವೈ.ಸಿ.ಸತೀಶ್ಕುಮಾರ್. ವಾರ್ಡ್ 15- ಹಂಸ, ಪದ್ಮಾವತಿ (ಕಾಂ). ವಾರ್ಡ್ 16- ಡಿ.ವಿ.ಕೃಷ್ಣಮೂರ್ತಿ, ಎಂ.ಮೂರ್ತಿ (ಕಾಂ). ವಾರ್ಡ್ 17- ಶಾಂತಮೂರ್ತಿ, ರಾಜಣ್ಣ, ಜಿ.ಎನ್.ವೇಣುಗೋಪಾಲ್ (ಕಾಂ). ವಾರ್ಡ್ 18- ಮಂಜುನಾಥ್ ್ಕಾಂ). ವಾರ್ಡ್ 19- ಜ್ಯೋತಿ (ಬಿಜೆಪಿ), ಅನಂತಕುಮಾರಿ(ಕಾಂ). ವಾರ್ಡ್20- ಎಂ.ಉಷಾ, ಪದ್ಮಾವತಮ್ಮ. ವಾರ್ಡ್ 21- ಲಕ್ಷ್ಮಿ(ಬಿಜೆಪಿ), ಕಸ್ತೂರಿ (ಕಾಂ), ಗಾಯಿತ್ರಿ. ವಾರ್ಡ್ 22- ಡಿ.ಎಂ.ವೇಣುಗೋಪಾಲ್ (ಕಾಂ), ನರಸಿಂಹಮೂರ್ತಿ, ವಾರ್ಡ್ ನಂ.23-ಎಂ.ಗಣೇಶ್ (ಬಿಜೆಪಿ).
ಗೊಂದಲ: ಅಭ್ಯರ್ಥಿಗಳ ಪರದಾಟ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ವಾರ್ಡುವಾರು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿದೆ. ವಾರ್ಡುಗಳ ಚಕ್ಕುಬಂದಿಗೆ ಪೂರಕವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಬೇಕಾಬಿಟ್ಟಿಯಾಗಿ ಪಟ್ಟಿ ಪರಿಷ್ಕರಿಸಿದ್ದು, ಹೊಸ ಪಟ್ಟಿ ಪ್ರಕಾರ ಚುನಾವಣೆ ನಡೆಸುವುದು ಅವೈಜ್ಞಾನಿಕವಾಗುತ್ತದೆ ಎಂದು ಅನೇಕರು ಆರೋಪಿಸಿದ್ದಾರೆ.
ತಹಶೀಲ್ದಾರ್ ಮತ್ತು ಆಯುಕ್ತರಿಗೆ ಈ ಕುರಿತು ದೂರು ನೀಡಿದ ಸಿಪಿಐಎಂ ಮುಖಂಡ ಬಿ.ಜಿ.ಹೇಮಂತರಾಜು, ಜೆಡಿಎಸ್ ಮುಖಂಡ ಕೆಂಪರಾಜು ಮತ್ತಿತರರು ಹಲವು ವಾರ್ಡುಗಳ ಮತದಾರರ ಪಟ್ಟಿಯಲ್ಲಿ ಗೊಂದಲವಿದೆ. ನಿನ್ನೆ ಈ ವಾರ್ಡಿನಲ್ಲಿದ್ದ ಮತದಾರರು ಇಂದು ಬೇರೆ ವಾರ್ಡಿನ ಪಟ್ಟಿಗೆ ಸೇರಿದ್ದಾರೆ ಎಂದು ಆರೋಪಿಸಿದರು. ಇನ್ನು 19ನೇ ವಾರ್ಡ್ನ ಮತದಾರರನ್ನು 12ಕ್ಕೆ, 17ರ ಮತದಾರರನ್ನು 14ಕ್ಕೆ, ಹೀಗೆ ಹಲವು ವಾರ್ಡುಗಳಲ್ಲಿ ಮತದಾರರ ಪಟ್ಟಿ ಗೊಂದಲ ನಿರ್ಮಾಣವಾಗಿದೆ.
ಹಲವಾರು ಅಭ್ಯರ್ಥಿ ಆಕಾಂಕ್ಷಿಗಳ ಹೆಸರುಗಳೇ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಉದಾಹರಣೆಗಳೂ ಇವೆ. ಗಂಡ ಒಂದು ವಾರ್ಡು, ಹೆಂಡತಿ ಒಂದು ವಾರ್ಡಿನ ಮತದಾರರಾಗಿರುವಂತಾಗಿದೆ. ಈ ಪಟ್ಟಿ ಪ್ರಕಾರ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅಧಿಕಾರಿಗಳು ಕೂಡಲೇ ಈ ಹಿಂದಿನ ಪಟ್ಟಿಯನ್ನು ಅಖೈರುಗೊಳಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಯಭೇರಿ: ಅನಿತಾ ವಿಶ್ವಾಸ
ಚನ್ನಪಟ್ಟಣ: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪ್ರಚಂಡ ಜಯಭೇರಿ ಬಾರಿಸಲಿದೆ ಎಂದು ಕ್ಷೇತ್ರದ ಸಂಭವನೀಯ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ನಗರಸಭಾ ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 25ಕ್ಕೂ ಹೆಚ್ಚುಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ತಿಳಿಸಿದರು. ಪಟ್ಟಣದ ಎಲ್ಲಾ ವಾರ್ಡ್ಗಳಿಗೆ ಅಂತಿಮ ಉಮೇದು ವಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಹುತೇಕ ವಾರ್ಡ್ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಅಭಿವೃದ್ಧಿಗೆ ಆದ್ಯತೆ: ಬೊಂಬೆನಗರಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಪಟ್ಟಣದ ಪ್ರತಿಯೊಂದು ವಾರ್ಡ್ನಲ್ಲಿ ತಿರುಗಾಡಿದಾಗಲು ಜನರು ಅನುಭವಿಸುತ್ತಿರುವ ಸಮಸ್ಯೆಗಳು ಎದ್ದುಕಾಣುತ್ತಿದೆ.
ಈಚುನಾವಣೆ ಪಟ್ಟಣದ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂದರು. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ನಗರಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದು ಶ್ರಮಿಸುತ್ತಿದ್ದು, ನಮ್ಮ ಪಕ್ಷದ ಎಲ್ಲಾ ಮುಖಂಡರ ಸಂಘಟಿತ ಶ್ರಮ, ಗೆಲುವಿಗೆ ಮಾನದಂಡವಾಗಲಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಎಸ್. ಲಿಂಗೇಶ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ರೇಖಾ ಉಮಾಶಂಕರ್ ಉಪಸ್ಥಿತರಿದ್ದರು.
ಕನಕಪುರ ತಾಲೂಕಲ್ಲಿ ಮಾದರಿ ಶುದ್ಧ ಕುಡಿಯುವ ನೀರು ಯೋಜನೆ: ಡಿಕೆಶಿ
ಕನಕಪುರ: ತಾಲೂಕಿನಲ್ಲಿ ಅಳವಡಿಸುತ್ತಿರುವ ಶುದ್ಧ ಕುಡಿಯುವ ನೀರು ಘಟಕಗಳ ಯೋಜನೆಯನ್ನು ಮಾದರಿಯನ್ನಾಗಿಸಿಕೊಂಡು ಕೇಂದ್ರ ಸರ್ಕಾರ ದೇಶದಾದ್ಯಂತ ಶುದ್ಧನೀರು ಘಟಕಗಳನ್ನು ಸ್ಥಾಪಿಸುವ ಚಿಂತನೆಯಲ್ಲಿದೆ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ 8 ಘಟಕಗಳು ಕಾರ್ಯಾರಂಭಗೊಂಡಿದ್ದು, ಇನ್ನೂ 30 ಘಟಕಗಳು ಸ್ಥಾಪನೆಗೊಳ್ಳಲಿವೆ. ತಾಲೂಕಿನ ಪ್ರತಿ 10 ಸಾವಿರ ನಾಗರಿಕರಿಗೆ ಒಂದು ಘಟಕ ನೀಡುವ ಮೂಲಕ 2ಗೆ 20 ಲೀಟರ್ ಪರಿಶುದ್ಧ ನೀರು ಒದಗಿಸುವ ಮಹಾತ್ವಾಕಾಂಕ್ಷೆ ಕೈಗೂಡುತ್ತಿರುವುದು ಸಂತಸ ತಂದಿದೆ. ಪ್ರತಿಯೊಂದು ಘಟಕಕ್ಕೂ ಸುಮಾರು 13 ಲಕ್ಷ ವೆಚ್ಚವನ್ನು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ ಎಂದು ಶಿವಕುಮಾರ್ ನುಡಿದರು.
ತಾಪಂ ಉಪಾಧ್ಯಕ್ಷ ಬಿ.ಎಸ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ನಳಿನಾ ರವಿಶಂಕರ್, ಗ್ರಾಪಂ ಅಧ್ಯಕ್ಷೆ ಚಿಕ್ಕತಾಯಮ್ಮ, ಲಕ್ಷ್ಮೀ ಸಿದ್ದರಾಮು, ಜಯಶೀಲಾ, ನಾರಾಯಣಸ್ವಾಮಿ,ಪುಟ್ಟವೀರಯ್ಯ, ವೆಂಕಟಪ್ಪ, ವೀರಯ್ಯ ಪಾಲ್ಗೊಂಡಿದ್ದರು.
ಪರಿಹಾರ ನೀಡದೇ ಮನೆ ಖಾಲಿ ಮಾಡಲ್ಲ: ಎಚ್ಚರಿಕೆ
ಚಿಕ್ಕಬಳ್ಳಾಪುರ: ನೋಟಿಸ್ ವಿತರಣೆಯಾಗಿರುವುದರಿಂದ ನಿವಾಸಿಗಳೊಂದಿಗೆ ಸೇರಿರುವ ದಲಿತ ಸಂಘಟನೆಗಳು ಯಾವುದೇ ಕಾರಣಕ್ಕೂ ಪರಿಹಾರ ನೀಡದೇ ಮನೆಗಳನ್ನು ಖಾಲಿ ಮಾಡಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಶುಕ್ರವಾರ ಅಂಬೇಡ್ಕರ್ ಕಾಲೋನಿಯ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭ ಮತ ಚಲಾಯಿಸದಿರುವುದು ಮತ್ತು ವಾರ್ಡಿನಲ್ಲಿ ಅಭ್ಯರ್ಥಿಗಳು ಸ್ಪರ್ಧಿಸದೇ ಚುನಾವಣೆ ಬಹಿಷ್ಕರಿಸುವುದು, ಈಗಾಗಲೇ ಸಲ್ಲಿಸಿರುವ ನಾಮಪತ್ರ ಹಿಂಪಡೆಯುವುದು ಮುಂತಾದ ನಿರ್ಧಾರಕ್ಕೆ ತೀರ್ಮಾನಿಸಲಾಗಿದೆ. ಕೂಡಲೇ ಜಿಲ್ಲಾಡಳಿತ ಸಭೆ ಕರೆದು ನಿವಾಸಿಗಳ ಪರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಆರ್. ರವಿಶಂಕರ್ ನಾಯ್ಕ್ ನೇಮಕ
ಪಾವಗಡ: ಕರ್ನಾಟಕ ಜನತಾ ಪಕ್ಷದ ತಾ. ಅಧ್ಯಕ್ಷರಾಗಿ ಉಪ್ಪರಹಳ್ಳಿ ರವಿಶಂಕರ್ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ರಂಗನಾಯ್ಕ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾ. ಅಧ್ಯಕ್ಷ ರವಿಶಂಕರ್ನಾಯ್ಕ್, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಾಲೂಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.
96 ನಾಮಪತ್ರ ಸಲ್ಲಿಕೆ
ತಿಪಟೂರು: ತಿಪಟೂರು ನಗರಸಭಾ ಚುನಾವಣೆಗೆ ಇಂದಿನವರೆಗೆ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಕೆಜೆಪಿ 27, ಕಾಂಗ್ರೆಸ್ 21, ಬಿಜೆಪಿ 20, ಜೆಡಿಎಸ್ 9, ಬಿಎಸ್ಆರ್ 1, ಜೆಡಿಯು 1 ಮತ್ತು 17 ಪಕ್ಷೇತರರಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ವಿಜಯಕುಮಾರ್ ತಿಳಿಸಿದ್ದಾರೆ.
ನಾಳೆ ವಿಶೇಷ ಪೂಜೆ
ತುಮಕೂರು: ಇಲ್ಲಿಗೆ ಸಮೀಪದ ಕುಚ್ಚಂಗಿಯ 1008 ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದಲ್ಲಿ ಫೆ.24 ರಂದು ಬೆಳಗ್ಗೆ 11 ಗಂಟೆಗೆ 44ನೇ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮಹಾಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು 10 ಗಂಟೆಗೆ ಕುಚ್ಚಂಗಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ.
ವಿವಿ ಪ್ರಮಾಣ ಪತ್ರ
ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್ ಬಿಸಿಎ ವಿದ್ಯಾರ್ಥಿಗಳು ತುಮಕೂರಿನಲ್ಲಿಯೇ ಪ್ರಥಮ ಬಾರಿಗೆ ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿವಿ ಸರ್ಟಿಫಿಕೇಟ್ ಪಡೆದಿದ್ದಾರೆ. ಸ್ಟ್ಯಾನ್ಫೋರ್ಡ್ ವಿವಿ ನಡೆಸಿದ ಆನ್ಲೈನ್ ಕೋರ್ಸಿನಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥ ಮಧುಪ್ರಿಯ ಮಾರ್ಗದರ್ಶನದಲ್ಲಿ 4 ಜನ ವಿದ್ಯಾರ್ಥಿಗಳಾದ ಸುಹಾಸ್ ಎಸ್, ಅಜಯ್ ಗೌತಮ್, ಕೀರ್ತನ ಹಾಗೂ ವಿನಯ್ ಉತ್ತೀರ್ಣರಾಗಿ ವಿವಿಯಿಂದ ಮೊದಲ ಬಾರಿಗೆ ಸರ್ಟಿಫಿಕೇಟ್ ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ, ಗೌರವ ಕಾರ್ಯದರ್ಶಿ ಎನ್.ಬಿ. ಪ್ರದೀಪ್, ಪ್ರಾಚಾರ್ಯ ಬಿ.ಟಿ. ಗುರುರಾಜ್ ಮತ್ತು ಬಿಸಿಎ ವಿಭಾಗದ ಮುಖ್ಯಸ್ಥ ಮಧುಪ್ರಿಯ ಅವರು ವಿದ್ಯಾರ್ಥಿ ಅಭಿನಂದಿಸಿದ್ದಾರೆ.
ನಾಳೆ ಪೂರ್ವಭಾವಿ ಸಭೆ
ಜಿಲ್ಲಾ ಜಾತ್ಯತೀತ ಮಾನವ ವೇದಿಕೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಶೋಷಿತ ವರ್ಗದವರ ಸಮ್ಮೇಳನ ಮಾಡಲು ಉದ್ದೇಶಿಸಿದ್ದು, ಫೆ.24 ರಂದು ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

