ಬೆಂಗಳೂರು ಗ್ರಾಮಾಂತರ

ಜೂಜು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ 9 ಬಂಧನ

Published On :

ರಾಮನಗರ: ನಗರದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಣ್ಣ ಸೇರಿದಂತೆ 9 ಕಾಂಗ್ರೆಸ್ ಮುಖಂಡರನ್ನು ದಸ್ತಗಿರಿ ಮಾಡಿ, ಪಣಕ್ಕಿಟ್ಟಿದ್ದ ರು.1 ಲಕ್ಷಕ್ಕೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಐಜೂರಿನಲ್ಲಿರುವ ಸಂಜೀವಯ್ಯ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದವರ ಮೇಲೆ ವಿಶೇಷ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಕಟ್ಟಡದ ಮಾಲೀಕನ ಮಗ ಪಾಂಡು, ಹನುಮಂತಯ್ಯ, ಪುಟ್ಟರಾಮ, ಭಾಗೀರಥ, ಕೃಷ್ಣೇಗೌಡ, ವಿಜಯ್‌ಕುಮಾರ್ ಹಾಗೂ ಮತ್ತಿಬ್ಬರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ರು.1 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.  ಚನ್ನಪಟ್ಟಣ ಪುರ ಠಾಣೆಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಜಯ್‌ಕುಮಾರ್ ಇನ್ನಿತರೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನಿಂದ ಬಿಎಂಟಿಸಿ ದರ ಕಡಿಮೆ: ಸಚಿವ
ಬೆಂಗಳೂರು:
ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ ಶನಿವಾರದಿಂದ ಒಂದು ರುಪಾಯಿ ಕಡಿಮೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಕೆಂಗೇರಿ ಉಪನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಡೀಸೆಲ್ ದರ ಏರಿಕೆ ಪರಿಣಾಮವಾಗಿ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಅನಿವಾರ್ಯವಿತ್ತು. ಆದರೆ, ದರ ಹೆಚ್ಚಳದಿಂದ ಜನರಿಗೆ ಹೆಚ್ಚಿನ ಹೊರೆಯಾಗಬಾರದೆಂದು ಈಗ 1 ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಅಂದರೆ, ಒಂದು ಸ್ಟೇಜ್‌ಗೆ 5 ಬದಲಾಗಿ 6 ಪಡೆಯಲಾಗುತ್ತಿತ್ತು. ಆದರೆ, ನಗರದ ಪ್ರಯಾಣಿಕರಲ್ಲಿ ಶೇ.20ರಷ್ಟು ಒಂದೇ ಸ್ಟೇಜ್‌ನಲ್ಲಿ ಹತ್ತಿ ಇಳಿಯುತ್ತಾರೆ. ಆದ್ದರಿಂದ ಅಲ್ಪ ದೂರದ ಪ್ರಯಾಣಿಸುವವರಿಂದು ಹೆಚ್ಚಿನ ದರ ಪಡೆಯಬಾರದೆಂದು ಒಂದು ರುಪಾಯಿ ಕಡಿಮೆ ಮಾಡಲಾಗಿದೆ ಎಂದು ರಾಮಲಿಂಗರೆಡ್ಡಿ ವಿವರಿಸಿದರು. ಈ ವರ್ಷ 1000ಹೊಸ ಬಸ್ಸುಗಳ ಖರೀದಿಗೆ ನಿರ್ಧರಿಸಲಾಗಿದ್ದು, 500 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು. ಹಾಗೆಯೇ 5 ಹೊಸ ಬಸ್ ನಿಲ್ದಾಣಗಳು ಮತ್ತು 15 ಡಿಪೋಗಳನ್ನು ತೆರೆಯಲಾಗುವುದು ಎಂದು ರಾಮಲಿಂಗರೆಡ್ಡಿ ಹೇಳಿದರು.  

'ಒಕ್ಕೂಟಕ್ಕೆ ನಷ್ಟವಾದರೂ ಹಾಲು  ಉತ್ಪಾದಕರ ಹಿತಕ್ಕೆ ಧಕ್ಕೆ ಇಲ್ಲ'
ಚನ್ನಪಟ್ಟಣ:
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹ ವಾಗುತ್ತಿರುವುದರಿಂದ ನಮ್ಮ ಒಕ್ಕೂಟಕ್ಕೆ ಪ್ರತಿ ದಿನ ಸುಮಾರು 20 ಲಕ್ಷ ನಷ್ಟವಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು. ತಾಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಒಕ್ಕೂಟಕ್ಕೆ ನಷ್ಟವಾಗುತ್ತಿದ್ದರೂ ರೈತರಿಗೆ ತೊಂದರೆಯಾಗ ಬಾರದೆಂಬ ಕಾರಣಕ್ಕೆ ರಜಾ ದಿನಾ ಘೋಷಿಸದೆ ಪ್ರತಿದಿನ ಹಾಲು ಸಂಗ್ರಹಣೆ ಮಾಡುತ್ತಿರುವುದಾಗಿ ತಿಳಿಸಿದರು. ಹಾಲಿನ ಪುಡಿ ಘಟಕಕ್ಕೆ ಕ್ರಮ: ನಮ್ಮ ಒಕ್ಕೂಟದಿಂದ ಹಾಲಿನ ಪುಡಿ ಘಟಕವನ್ನು ಆರಂಭಿಸಲು ಚಿಂತನೆ ನಡೆಸಿದ್ದು ಸರ್ಕಾರದ ಅನುಮತಿ ಕೋರಲಾಗಿದೆ. ಹೊರ ರಾಜ್ಯಗಳಿಗೆ ಕಳುಹಿಸಿ ಹಾಲಿನ ಪುಡಿ ಮಾಡಿಸುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಇಲ್ಲೇ ನೂತನ ಘಟಕ ಆರಂಭಿಸಿದರೆ, ನಮಗೆ ಸಾಕಷ್ಟು ಉಳಿತಾಯವಾಗುತ್ತದೆ ಎಂದವರು  ತಿಳಿಸಿದರು. ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಮಾತನಾಡಿದರು. ಬಮೂಲ್ ನಿರ್ದೇಶಕ ಮುನಿಸುಬ್ಬಣ್ಣ, ಶಿಬಿರದ ಉಪವ್ಯವಸ್ಥಾಪಕ ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಮಹದೇವೇಗೌಡ, ಅಮಿತಾಹೆಗಡೆ, ಶಿವಪ್ರಸನ್ನ, ಎಂಪಿಸಿಎಸ್ ಅಧ್ಯಕ್ಷ ಕರೀಗೌಡ, ಗ್ರಾಪಂ ಅಧ್ಯಕ್ಷ ರವಿ ಮುಂತಾದವರು ಉಪಸ್ಥಿತರಿದ್ದರು.

'7ರಿಂದ ಮರಳು ಲಾರಿ ಮುಷ್ಕರ'
ಬೆಂಗಳೂರು:
ಮರಳು ಸಾಗಿಸುವ ಲಾರಿಗಳಿಗೆ ಪರವಾನಗಿ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಲಾರಿ ಮಾಲಿಕರು ಹಾಗೂ ಏಜೆಂಟರ ಸಂಘಟನೆ ಜುಲೈ 7ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಸೂಕ್ತ ಮರಳು ನೀತಿಯಿಲ್ಲದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರ್ಷಕ್ಕೆ 300 ಕೋಟಿ ನಷ್ಟವಾಗುತ್ತಿದೆ. ಮರಳು ಲಾರಿಗಳಿಗೆ ಮಾಸಿಕ ಪರವಾನಗಿ ನೀಡಿ ಇಲ್ಲವೇ ಲಾರಿಗೆ ಹಳದಿ ಪಟ್ಟಿಯ ಗುರುತನ್ನು ಕಡ್ಡಾಯಗೊಳಿಸುವ ಮೂಲಕ ಅಕ್ರಮ ಮರಳು ಸಾಗಾಣಿಕೆಯನ್ನು ನಿಯಂತ್ರಿಸಬೇಕು ಎಂದು ಅವರು ಆಗ್ರಹಿಸಿದರು. ಲಾರಿಗಳಲ್ಲಿ ಮೂರು ಅಡಿ ಮರಳು ಸಾಗಾಣಿಕೆಗೆ ಅನುಮತಿ ಕಲ್ಪಿಸಿ, ಅದನ್ನು ಸಂಪೂರ್ಣವಾಗಿ ಮುಚ್ಚಿರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ನೆರೆ ರಾಜ್ಯಗಳಿಂದ ಯಥೇಚ್ಚವಾಗಿ ಬರುತ್ತಿರುವ ಮರಳಿಗೆ ಕಡಿವಾಣ ಹೇರಬೇಕು. ನಗರಕ್ಕೆ ಪ್ರತಿನಿತ್ಯ 3000 ಲೋಡ್ ಮರಳಿನ ಅಗತ್ಯವಿದೆ. ಆದರೆ, ಇತರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ನಗರಕ್ಕೆ ಮರಳು ಸಾಗಣೆ ನಿರ್ಬಂಧಿಸಿದ್ದಾರೆ. ಇದು ಬದಲಾಗಬೇಕು ಎಂದು ಅವರು ಆಗ್ರಹಿಸಿದರು. ಮರಳು ಲಾರಿಗಳನ್ನು ವಶಪಡಿಸಿಕೊಂಡು ಹೂಡಿದ ಮೊಕದ್ದಮೆಗಳಲ್ಲಿ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದರೂ, ಪೊಲೀಸರು ಅದನ್ನು ಪಾಲಿಸುತ್ತಿಲ್ಲ. ವಶಪಡಿಸಿಕೊಂಡ ಮರಳನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ದಾಖಲಾತಿ ದಿನಾಂಕ 10 ರವರೆಗೆ ವಿಸ್ತರಣೆ
ರಾಮನಗರ:
ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕವನ್ನು ಜು.10ರವರೆಗೆ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಲಿಂಗರಾಜು ತಿಳಿಸಿದ್ದಾರೆ.

ಅಕ್ರಮ ಮರಳು ಫಿಲ್ಟರ್: 4 ಬಂಧನ
ನೆಲಮಂಗಲ
: ತಾಲೂಕಿನ ವಜ್ರಗಟ್ಟೆಪಾಳ್ಯದಲ್ಲಿ ಅಕ್ರಮ ಮರಳು ಫಿಲ್ಟರ್ ಮಾಡುತ್ತಿದ್ದ 4 ಜನ ಆರೋಪಿಗಳನ್ನು ಬಂಧಿಸಿ 3 ಟ್ರ್ಯಾಕ್ಟರ್ ಹಾಗೂ 1 ಜೆಸಿಬಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಹ್ಯಾಡಾಳ್ ಲಿಂಗೇಗೌಡ, ವಜ್ರಗಟ್ಟೆ ರಾಮಯ್ಯ, ಚಾಲಕರಾದ ಲೋಕೇಶ್, ಈರಪ್ಪರನ್ನು ಸಬ್‌ಇನ್ಸ್‌ಪೆಕ್ಟರ್ ನವೀನ್‌ಕುಮಾರ್ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬದಲಿ ರಕ್ತ ಹಾಕಿದ್ದ 4 ಸಿಬ್ಬಂದಿ ಅಮಾನತು
ಬೆಂಗಳೂರು:
ರಕ್ತಹೀನತೆಯಿಂದ ಬಳಲುತ್ತಿದ್ದ ಯುವತಿ ರಾಜೇಶ್ವರಿಗೆ ಒ ಪಾಸಿಟಿವ್ ಬದಲು ಬಿ ಪಾಸಿಟಿವ್ ರಕ್ತ ಹಾಕಿ, ಆಕೆ ಸಾವಿಗೆ ಕಾರಣವಾಗಿದ್ದ ಕೆ.ಸಿ.ಜನರಲ್ ಆಸ್ಪತ್ರೆಯ ನಾಲ್ಕು ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ನಾಲ್ವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ವೈದ್ಯ ಸುರೇಶ್, ಲ್ಯಾಬ್ ಟೆಕ್ನೀಷಿಯನ್ ಭಾಗ್ಯಲಕ್ಷ್ಮಿ, ದಾದಿ ಲಲಿತಾ ಹಾಗೂ ರಕ್ತನಿಧಿ ಸಂಗ್ರಹ ವಿಭಾಗದ ಅಧಿಕಾರಿ ರೇಣುಕಾ ಅಮಾನತುಗೊಂಡವರು. ರಾಜೇಶ್ವರಿ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಒಂದು ಬಾಟೆಲ್ ರಕ್ತ ಹಾಕಿದ್ದರು. ಇದರಿಂದ ಆಕೆ ಮೃತಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.