ಹಗಲೇ 10 ಲಕ್ಷ ದರೋಡೆ
ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಜು.17
ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ವರ್ತಕರೊಬ್ಬರಿಂದ 10 ಲಕ್ಷ ರು. ಅಪಹರಿಸಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಎಪಿಎಂಸಿ ಮಂಡಿ ವರ್ತಕ ಮಂಜುನಾಥ್ ಎಂಬುವವರಿಂದ ಹಣ ಅಪಹರಿಸಿರುವ ದುಷ್ಕರ್ಮಿಗಳ ಬಗ್ಗೆ ಈವರೆಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ.
ಘಟನೆ ವಿವರ: ಮಂಜುನಾಥ್ ಅವರು ಬುಧವಾರ ಮಧ್ಯಾಹ್ನ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಅವರ ಖಾತೆಯಿಂದ 15 ಲಕ್ಷ ರು. ಪಡೆದುಕೊಂಡು ದ್ವಿಚಕ್ರವಾಹನದಲ್ಲಿ ಮನೆಗೆ ಬಂದಿದ್ದಾರೆ. ಹಣ ಡ್ರಾ ಮಾಡಿಕೊಂಡ ಕೂಡಲೇ 3.5 ಲಕ್ಷ ರು.ಗಳನ್ನು ತಮ್ಮ ಸ್ನೇಹಿತರೊಬ್ಬರಿಗೆ ನೀಡಿದ್ದಾರೆ. ಜೊತೆಗೆ 50 ಸಾವಿರ ರುಗಳನ್ನು ಮನೆ ಲೋನ್ ಬಾಕಿಗೆ ಬ್ಯಾಂಕಿನಲ್ಲೇ ಪಾವತಿ ಮಾಡಿದ್ದಾರೆ.1 ಲಕ್ಷ ರು.ಗಳನ್ನು ತಮ್ಮ ಜೇಬಿನಲ್ಲಿ ಉಳಿಸಿಕೊಂಡಿದ್ದಾರೆ. ಉಳಿದ 10 ಲಕ್ಷ ರು.ಗಳನ್ನು ಸ್ನೇಹಿತರೊಬ್ಬರ ಬಳಿ ಪಡೆದಿದ್ದ ಸಾಲ ಮರುಪಾವತಿಗಾಗಿ ಮೀಸಲಿಟ್ಟಿದ್ದರು ಎನ್ನಲಾಗಿದೆ. ಬ್ಯಾಂಕಿನಿಂದ ಹಣವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟು ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ನಂತರ ಇಲ್ಲಿನ ಜಯಚಾಮರಾಜೇಂದ್ರ ವೃತ್ತ (ಸರ್ಕಾರಿ ಆಸ್ಪತ್ರೆ ವೃತ್ತ)ದಲ್ಲಿರುವ ಮನೆಗೆ ಬಂದು ಮನೆಯ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ ಒಳ ಹೋಗಿ 1 ಲಕ್ಷ ರು.ಗಳನ್ನು ಮತ್ತು ಬ್ಯಾಂಕ್ ಖಾತೆ ಪುಸ್ತಕ ಇತ್ಯಾದಿಗಳನ್ನು ಇಟ್ಟು 5 ನಿಮಿಷದಲ್ಲೇ ಹೊರಬಂದಿದ್ದಾರೆ.
ಆದರೆ ಅವರು ಒಳ ಹೋಗಿ ಹೊರಬರುವ ವೇಳೆಗೆ ಅವರ ದ್ವಿಚಕ್ರವಾಹನದಲ್ಲಿ ಇಟ್ಟಿದ್ದ 10 ಲಕ್ಷ ರು.ಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಆರೋಪಿಗಳು ಡಿಕ್ಕಿಯನ್ನು ಒಡೆದು ಹಣದ ಚೀಲವನ್ನು ಕದ್ದೊಯ್ದಿದ್ದಾರೆ. ಕೂಡಲೇ ಮಂಜುನಾಥ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾಗಿರುವ ದೊಡ್ಡಬಳ್ಳಾಪುರ ನಗರ ಠಾಣೆ ಅಪರಾಧ ವಿಭಾಗದ ಪೊಲೀಸರು ಬ್ಯಾಂಕಿನಿಂದ ಸಿಸಿ ಕ್ಯಾಮರಾ ವಿಡಿಯೋ ಪಡೆದು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಅತ್ಯಂತ ಜನನಿಬಿಡ ಪ್ರದೇಶದಲ್ಲೇ ಈ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ನಡೆದಿರುವ ಸ್ಥಳಕ್ಕೆ ಸಿಪಿಐ ಶಿವಾರೆಡ್ಡಿ, ಎಸೈ ಕೃಷ್ಣಕುಮಾರ್, ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದರೂ ಇಲ್ಲಿನ ಪೊಲೀಸ್ ಇಲಾಖೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಸಾರ್ವಜನಿಕರ ಆರೋಪ ಈ ಮತ್ತೆ ಪ್ರತಿಧ್ವನಿಸಿದೆ. ದರೋಡೆ, ಕಳ್ಳತನ, ಲೂಟಿ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಎಲ್ಲ ವಲಯಗಳಿಂದ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

