ಆ. 21ರಂದು ಉಪಚುನಾವಣೆ
ರಾಮನಗರ: ಎಚ್.ಡಿ. ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯು ಆ. 21ರಂದು ನಡೆಯಲಿದ್ದು, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗವು ಪ್ರಕಟಣೆ ಹೊರಡಿಸಿದೆ. ಜು. 27ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಚುನಾವಣೆ ನೀತಿ ಸಂಹಿತೆ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. ನಾಮಪತ್ರ ಸಲ್ಲಿಸಲು ಆ. 3 ಕೊನೆಯ ದಿನವಾಗಿದ್ದು, ಆ. 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಆ.7 ಕೊನೆಯ ದಿನವಾಗಿದೆ. ಚುನಾವಣೆಯು ಆ. 21ರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಆ. 24ರಂದು ಮತ ಎಣಿಕೆ ಕೈಗೊಳ್ಳಲಾಗುವುದು. ಆ. 27ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಮಾತುಕತೆಗೆ ವೇದಿಕೆ
ತೀರಾ ಅಲ್ಪಾವಧಿಗೆ ಎದುರಾಗಿರುವ ಉಭಯ ಲೋಕಸಭಾ ಕ್ಷೇತ್ರಗಳ ಮರು ಚುನಾವಣೆಯನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರ ತಳೆಯುವ ನಿಟ್ಟಿನಲ್ಲಿ ಪ್ರಮುಖ ಪಕ್ಷಗಳ ಸಭೆಗೆ ವೇದಿಕೆ ಸಜ್ಜುಗೊಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ.
ಚುನಾವಣೆ ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ರಾಜಕೀಯ ಪ್ರೇರಿತ ಅರ್ಜಿ ಸಲ್ಲಿಕೆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಭರವಸೆ ಉಳಿದಿಲ್ಲ. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹಣಾಹಣಿ. ರಾಜ್ಯದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಒಂದೊಮ್ಮೆ ಚುನಾವಣೆ ಬಹಿಷ್ಕರಿಸುವುದಕ್ಕೆ ಒಲವು ತೋರಿದ್ದೇ ಆದಲ್ಲಿ ಸಹಜವಾಗಿಯೇ ಅದಕ್ಕೆ ಜೆಡಿಎಸ್ ಕೂಡ ಒಪ್ಪಿಗೆ ಸೂಚಿಸುವ ಸಂಭವವಿದೆ. ಕಾಂಗ್ರೆಸ್ ಹಠಕ್ಕೆ ಬಿದ್ದರೆ, ಜೆಡಿಎಸ್ ಕೂಡ ಅನಿವಾರ್ಯವಾಗಿ ಸ್ಪರ್ಧೆಗೆ ಅಣಿಯಾಗಲಿದೆ.
ಸರ್ಕಾರವನ್ನು ಸಂಪರ್ಕಿಸಿಲ್ಲವೆ?
ಮರು ಚುನಾವಣೆ ಘೋಷಣೆಯ ತೀರ್ಮಾನಕ್ಕೂ ಮುನ್ನ ಈ ವಿಷಯವಾಗಿ ಚುನಾವಣಾ ಆಯೋಗವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದಂತೆ ಕಾಣುತ್ತಿಲ್ಲ. ಇದನ್ನು ಗಮನಿಸಿದರೆ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ನೀಡಿದ್ದೇ ತಪ್ಪಾಯ್ತೇ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ಸರ್ಕಾರವೇನಾದರೂ ಅವಧಿಗೆ ಮುನ್ನ ಸಾರ್ವತ್ರಿಕ ಚುನಾವಣೆಗೆ ಹೊರಡುವುದಾದರೆ ಈ ಮರು ಚುನಾವಣೆಯಲ್ಲಿ ಗೆದ್ದು ಹೋದವರು ಪ್ರಮಾಣ ವಚನ ಸ್ವೀಕರಿಸಿ, ಒಂದೇ ಒಂದು ಅಧಿವೇಶನದಲ್ಲಿ ಭಾಗವಹಿಸುವ ಖಾತ್ರಿಯೂ ಇಲ್ಲ. ಹೀಗಿರುವಾಗ ಸರ್ಕಾರಿ ಖಜಾನೆಯ ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಚುನಾವಣೆ ನಡೆಸುವುದರಿಂದ ಪ್ರಯೋಜನ ಇಲ್ಲದಂತಾಗುತ್ತದೆ. ಇತ್ತೀಚೆಗಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೈರಾಣಾಗಿವೆ. ಕೋಟಿಗಟ್ಟಲೆ ಹಣದ ಹೊಳೆಯೇ ಹರಿದಿದೆ. ಈಗ ಮರು ಚುನಾವಣೆಯಲ್ಲಿ ದುಡ್ಡಿಲ್ಲದೆ ಮತಗಳನ್ನು ಪಡೆಯುವುದು ಸುಲಭದ ಕೆಲಸವಲ್ಲ. ಹೀಗಾಗಿ ಸ್ಪರ್ಧೆಗೆ ಇಳಿದವರ ಜತೆಗೆ ಪಕ್ಷಗಳಿಗೂ ಹಣದ ಹೊರೆ ಬೀಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

