ಬೆಂಗಳೂರು ಗ್ರಾಮಾಂತರ

ಬೆಂ. ಗ್ರಾಮಾಂತರದಲ್ಲಿ ಇಂದಿನಿಂದ ಚುನಾವಣೆ ಜ್ವರ

Published On :

-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು. 26
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಜು.27ರಂದು ಅಧಿಸೂಚನೆ ಹೊರ ಬೀಳಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಪ್ರಾರಂಭಗೊಳ್ಳಲಿದೆ.  
ನಾಲ್ಕು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಆ.21ರಂದು ಮರು ಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರೇ ಈಗ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು.
ನಾಮಪತ್ರ ಸಲ್ಲಿಕೆಗೆ ಆ.3 ಕಡೆಯ ದಿನವಾಗಿದೆ. ಆ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.7 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿರುತ್ತದೆ. ಈ ಕ್ಷೇತ್ರದಲ್ಲಿ 19.48 ಲಕ್ಷ ಮತದಾರರು ಇದ್ದಾರೆ.
ಆ.24ಕ್ಕೆ ಮತಗಳ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು, ಇಡೀ ಚುನಾವಣಾ ಪ್ರಕ್ರಿಯೆ ಆ.27ಕ್ಕೆ ಅಂತ್ಯಗೊಳ್ಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಈ ಚುನಾವಣೆಯಲ್ಲಿ 2385 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಚುನಾವಣಾಧಿಕಾರಿಗಳಾಗಿದ್ದ ಅಧಿಕಾರಿಗಳೇ ಈಗ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು.
ರಾಮನಗರವೇ ಕೇಂದ್ರ ಸ್ಥಾನ: ಕನಕಪುರ ಲೋಕಸಭಾ ಕ್ಷೇತ್ರವು ಸ್ವಲ್ಪಮಟ್ಟಿನ ಬದಲಾವಣೆಯೊಂದಿಗೆ ಬೆಂಗಳೂರು ಗ್ರಾಮಾಂತರ ಹೆಸರಿನಲ್ಲಿ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಚೊಚ್ಚಲ ಸಂಸದ ಕುಮಾರಸ್ವಾಮಿಯೇ ಆಗಿದ್ದರು.
ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ರಾಮನಗರವೇ ಕೇಂದ್ರ ಸ್ಥಾನವಾಗಿದೆ. ಕಳೆದ ಬಾರಿ ಬೆಂಗಳೂರೇ ಕೇಂದ್ರ ಸ್ಥಾನವಾಗಿತ್ತು. ನಾಮಪತ್ರಗಳ ಸಲ್ಲಿಕೆ, ಮತಗಳ ಎಣಿಕೆ ಸಹಿತ ಇಡೀ ಪ್ರಕ್ರಿಯೆ ಇದೇ ಜಿಲ್ಲಾ ಕೇಂದ್ರದಲ್ಲಿ ಜರುಗುತ್ತಿರುವುದು ಮತ್ತೊಂದು ವಿಶೇಷ.
ಲೋಕಸಭಾ ಕ್ಷೇತ್ರ ವ್ಯಾಪ್ತಿ: ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ, ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಈ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ.

ಸಮಬಲದ ಸೆಣಸು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಟ್ಟಾ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 3 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿವೆ. ತಲಾ 1 ಕಡೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಶಾಸಕರಿದ್ದಾರೆ.
ರಾಮನಗರ, ಕುಣಿಗಲ್, ಮಾಗಡಿ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದರೆ, ಕನಕಪುರ, ಆನೇಕಲ್, ರಾಜರಾಜೇಶ್ವರಿ ಕ್ಷೇತ್ರಗಳು ಕಾಂಗ್ರೆಸ್ ಕೈ ವಶವಾಗಿವೆ. ಚನ್ನಪಟ್ಟಣದಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಸವಾರಿ ನಡೆದರೆ, ಬೆಂಗಳೂರು ದಕ್ಷಿಣದಲ್ಲಷ್ಟೇ ಬಿಜೆಪಿಯ ಕಮಲ ಅರಳಿದೆ.

ಟಿಕೆಟ್ ರೇಸ್‌ನಲ್ಲಿರುವವರು..
ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಅಥವಾ ಪ್ರಭಾಕರರೆಡ್ಡಿ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿ ಸಿ.ಎಂ. ಲಿಂಗಪ್ಪ, ಡಿ.ಕೆ. ಸುರೇಶ್, ತೇಜಸ್ವಿನಿಗೌಡ ರೇಸ್‌ನಲ್ಲಿದ್ದಾರೆ. ಬಿಜೆಪಿಯಿಂದ ಉದ್ಯಮಿ ತುಳಸಿ ಮುನಿರಾಜು ಕಣಕ್ಕೆ ಇಳಿಯಲಿದ್ದಾರೆ.
ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸಂಘಟಿಸಲು ಹೊರಟಿರುವ ಶಾಸಕ ಯೋಗೇಶ್ವರ್ ಸ್ವತಃ ಕಣಕ್ಕಿಳಿಯುವರೋ ಅಥವಾ ಬೇರೆ ಯಾರನ್ನಾದರೂ ಅಭ್ಯರ್ಥಿಯನ್ನಾಗಿಸುವರೋ ಖಚಿತವಾಗಿಲ್ಲ. ಇಲ್ಲಿ ನೆಲೆ ಕಂಡುಕೊಳ್ಳದ ಕೆಜೆಪಿ, ಬಿಎಸ್ಸಾರ್‌ಗಳು ಇನ್ನೂ ಅಭ್ಯರ್ಥಿ ಹುಡುಕಾಟದಲ್ಲಿವೆ.

ಮತದಾರರ ವಿವರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 19,47,834 ಮತದಾರರಿದ್ದಾರೆ. ಈ ಪೈಕಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಬೆಂಗಳೂರು ದಕ್ಷಿಣ. ಇಲ್ಲಿ 4,48,056 ಮತದಾರರಿದ್ದಾರೆ. 1,65,491 ಮತದಾರರನ್ನು ಹೊಂದಿದ ಕುಣಿಗಲ್ ಅತಿ ಕಡಿಮೆ ಮತದಾರರಿರುವ ಕ್ಷೇತ್ರ. ರಾಮನಗರದಲ್ಲಿ 1,81,001 ಮತದಾರರಿದ್ದಾರೆ. ಮಾಗಡಿ- 1,95,389, ಚನ್ನಪಟ್ಟಣ- 1,88,595, ಕನಕಪುರ- 2,09,500, ಆನೇಕಲ್ - 2,59,340, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3,00,482 ಮತದಾರರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.