ಕಂದಾಯ ಇಲಾಖೆಯಿಂದ ವಂಚನೆ
ಕ.ಪ್ರ.ವಾರ್ತೆ ರಾಮನಗರ ಜೂ.10
ಪಹಣಿಯಲ್ಲಿ ಬೆಳೆ ನಮೂದು ಮಾಡದ ಕಂದಾಯ ಇಲಾಖೆಯು ರೈತಾಪಿ ಸಮುದಾಯವನ್ನು ವಂಚಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಆರೋಪಿಸಿದ್ದಾರೆ.
ಪಹಣಿಯಲ್ಲಿ ಬೆಳೆ ನಮೂದು ಮಾಡದಿರುವ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಸರ್ಕಾರಿ ವ್ಯವಸ್ಥೆಯ ವಂಚನೆಯ ಉದ್ದೇಶ ಅಡಗಿದೆ. ತಕ್ಷಣ ಬೆಳೆ ನಮೂದಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕಂದಾಯ ಇಲಾಖೆಯಲ್ಲಿ ಈಗಲೂ ಓಬಿರಾಯನ ಕಾಲದ ವ್ಯವಸ್ಥೆಯೇ ಮುಂದುವರೆದಿದೆ. 2-3 ದಶಕಗಳೇ ಕಳೆದರೂ ಜಮೀನುಗಳಲ್ಲಿ ಬೆಳೆ ಇಲ್ಲ ಎಂದೇ ನಮೂದಾಗಿರುತ್ತದೆ. ಇದರಿಂದ ಬೆಳೆ ಸಾಲ, ನ್ಯಾಯಾಲಯಗಳ ವ್ಯಾಜ್ಯ ಮತ್ತು ಭೂ ಸ್ವಾಧೀನ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗುತ್ತಿದೆ ಎಂದರು.
ಪಹಣಿಗಳಲ್ಲಿ ಬೆಳೆ ನಮೂದು ಆಗದ ಪರಿಣಾಮ ಎಷ್ಟೋ ಭೂ ವ್ಯಾಜ್ಯಗಳಲ್ಲಿ ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಹತ್ತು ವರ್ಷ ನಿರಂತರವಾಗಿ ಬೆಳೆ ಇಲ್ಲವೆನ್ನುವ ಬಗ್ಗೆ ನಮೂದಾಗಿದ್ದರೆ ಸದರಿ ಭೂಮಿಯನ್ನು ಪಡಾ ಎಂದು ಪರಿಗಣಿಸಿ, ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ಅವರು ದೂರಿದರು.
ಎಪಿಎಂಸಿ ವಂಚನೆ: ರಾಮನಗರ ಸೇರಿದಂತೆ ಇತರೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳಲ್ಲಿ ರೈತರಿಗೆ ಆಗುತ್ತಿರುವ ವಂಚನೆಯನ್ನು ಕೊನೆಗಾಣಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಮು ಮತ್ತು ಮಲ್ಲಯ್ಯ ಆರೋಪಿಸಿದರು.
ರಾಮನಗರ ಎಪಿಎಂಸಿಯಲ್ಲಿ ಬಿಳಿ ಚೀಟಿ ವ್ಯವಸ್ಥೆ, ರೈತರಿಂದ ಶೇಕಡ 10ರಷ್ಟು ಸುಂಕ ವಸೂಲಿ ಸೇರಿದಂತೆ ವಿವಿಧ ಅಕ್ರಮಗಳ ತಡೆಗೆ ಒತ್ತಾಯಿಸಿ ತಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು. ಅದನ್ನೆಲ್ಲ 15 ದಿನದಲ್ಲಿ ಸರಿಪಡಿಸುವ ಬಗ್ಗೆ ವಾಗ್ದಾನ ಮಾಡಿದ್ದ ಜಿಲ್ಲಾಧಿಕಾರಿ ಈಗ ದಲ್ಲಾಳಿಗಳು, ವರ್ತಕರ ಲಾಬಿಗೆ ಒಳಗಾಗಿ ರೈತರಿಗೆ ದ್ರೋಹವೆಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಖರೀದಿ ಕೇಂದ್ರ ಸ್ಥಾಪಿಸಿ: ರಾಮನಗರ ಜಿಲ್ಲೆಯಲ್ಲಿ ತೆಂಗು ಬೆಳೆಯು ಪ್ರಮುಖ ತೋಟಗಾರಿಕೆ ಬೆಳೆಯಾಗಿದೆ. ತೆಂಗು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿರುವ ರಾಮನಗರದಲ್ಲಿ ತೆಂಗು ಮತ್ತು ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆ ಮಾಡದಿರುವ ಸರ್ಕಾರದ ಕ್ರಮಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭೀಕರ ಬರದಿಂದ ಜಿಲ್ಲಾದ್ಯಂತ ಲಕ್ಷಾಂತರ ತೆಂಗು, ಮಾವು ಸೇರಿದಂತೆ ತೋಟಗಾರಿಕೆ ಮರಗಳು ಒಣಗಿವೆ. ಈ ಬೆಳೆ ನಷ್ಟವನ್ನು ಅಂದಾಜಿಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಅವೈಜ್ಞಾನಿಕ ಮಾಪನ: ಈ ಜಿಲ್ಲೆಯಲ್ಲಿ ಮಳೆ ಮಾಪನ ಅಳವಡಿಕೆಯೇ ಅವೈಜ್ಞಾನಿಕ. ಕೃಷಿ ಇಲಾಖೆಯು ವೈಜ್ಞಾನಿಕವಾಗಿ ಮಾಪಕಗಳನ್ನು ಅಳವಡಿಸದ ಕಾರಣ ಆಗುತ್ತಿರುವ ಮಳೆ ಪ್ರಮಾಣ ನಿಖರವಾಗಿ ತಿಳಿಯದಂತಾಗಿದೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಮಾಪಕಗಳನ್ನು ಆಧರಿಸಿ ಅಧಿಕ ಮಳೆಯ ವರದಿ ನೀಡಲಾಗುತ್ತಿದೆ ಎಂದು ರಾಮು ಮತ್ತು ಮಲ್ಲಯ್ಯ ಟೀಕಿಸಿದರು.
ರೈತ ನಾಯಕನಿಗೆ ಸಂತಾಪ: ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಒಡನಾಡಿಯಾಗಿದ್ದ ರೈತ ನಾಯಕ ಅರಳಾಳುಸಂದ್ರದ ಜಿ.ಮಾದೇಗೌಡ ಅವರ ನಿಧನಕ್ಕೆ ಸಂಘಟನೆಯ ಪರವಾಗಿ ಅವರು ಸಂತಾಪ ಸೂಚಿಸಿದರು. ಗೋಷ್ಠಿಯಲ್ಲಿ ಜೋಗಯ್ಯ, ಚಿಕ್ಕಬೈರೇಗೌಡ, ವಾಸು, ರಾಜು, ರಾಮಕೃಷ್ಣಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

