ನಟ- ನಿರ್ಮಾಪಕಿ ನೇರ ಹಣಾಹಣಿ
ರಾಮನಗರ: ರಾಜ್ಯದ ವಿವಿಧೆಡೆ ತಾರೆಯರು ಸಹಿತ ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದವರು ಸ್ಪರ್ಧೆಗೆ ಇಳಿದಿದ್ದಾರೆ. ಆದರೆ, ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಬೊಂಬೆಯನಾಡು ಚನ್ನಪಟ್ಟಣದಲ್ಲಿ ನಟ ಮತ್ತು ನಿರ್ಮಾಪಕಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಹೀಗಾಗಿ ಕ್ಷೇತ್ರಕ್ಕೆ ಸಿನಿ ಟಚ್ ಸಿಕ್ಕಿದೆ.
ಶ್ರೀ ಚೆನ್ನಾಂಬಿಕಾ ಫಿಲಂಸ್ ಬ್ಯಾನರ್ನಡಿ ಸೂರ್ಯವಂಶ, ಚಂದ್ರ ಚಕೋರಿ ಸಹಿತ ನಿರ್ಮಾಣಗೊಂಡ ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ ಹಾಗೂ ಸೈನಿಕ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಸಹಿತ ಕೆಲವೇ ಚಿತ್ರಗಳ ನಾಯಕ ನಟ ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು.
ಉದ್ಯಮಿಗಳೂ ಹೌದು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಯೋಗೇಶ್ವರ್ ಈ ಬಾರಿ ಸಮಾಜವಾದಿ ಪಕ್ಷದ ಸೈಕಲ್ ಏರಿದ್ದಾರೆ. ಜಿದ್ದಾಜಿದ್ದಿನ ಸೆಣೆಸಾಟದಲ್ಲಿ ಗೆಲವಿಗಾಗಿ ಇಬ್ಬರೂ ತರಾವರಿ ಕಸರತ್ತು ನಡೆಸುತ್ತಿದ್ದಾರೆ.
ಚಿತ್ರರಂಗ ಮಾತ್ರವಲ್ಲದೆ ಕಿರುತೆರೆಯಲ್ಲೂ ಅನಿತಾ ಕುಮಾರಸ್ವಾಮಿ ಕೈಯಾಡಿಸುತ್ತಿದ್ದಾರೆ. ತಮ್ಮದೇ ಒಡೆತನದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯ ಚಿತ್ರಕಥೆ ಸ್ವತಃ ಅವರದ್ದೇ. ಸುದ್ದಿ ವಾಹಿನಿ ಮತ್ತು ಕೇಬಲ್ ನೆಚ್ ವರ್ಕ್ ಸಂಸ್ಥೆ ಮಾಲೀಕರೂ ಆಗಿದ್ದಾರೆ. ಯೋಗೇಶ್ವರ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು.
ಕ್ಷೇತ್ರ-ಪಕ್ಷ ಬದಲು: ಪ್ರತಿಸ್ಪರ್ಧಿಗಳ ಪೈಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ಬದಲಿಸಿದ್ದರೆ, ಯೋಗೇಶ್ವರ್ ಪಕ್ಷಗಳನ್ನು ಬದಲಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಹಾಲಿ ಮಧುಗಿರಿ ಜೆಡಿಎಸ್ ಶಾಸಕಿ. ಆಪರೇಷನ್ ಕಮಲದಿಂದ ಅಲ್ಲಿ ನಡೆದ ಮರು ಚುನಾವಣೆಯಲ್ಲಿ ಪಕ್ಷದ ಅಸ್ತಿತ್ವಕ್ಕಾಗಿ ಕುಟುಂಬದ ಸೂಚನೆಯಂತೆ ಸ್ಪರ್ಧೆಗೆ ಇಳಿದಿದ್ದರು. ಈಗ ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ.
ಮೊದಲಿಗೆ ಪಕ್ಷೇತರ, ಮತ್ತೆರಡು ಬಾರಿ ಕಾಂಗ್ರೆಸ್ ಹೀಗೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ಕಂಡಿದ್ದ ಯೋಗೇಶ್ವರ್ ಆಪರೇಷನ್ ಕಮಲದೊಂದಿಗೆ ಬಿಜೆಪಿ ಸೇರಿದ್ದರು. ಪೌರ ಸಂಸ್ಥೆ ಚುನಾವಣೆ ವೇಳೆ ಕಾಂಗ್ರೆಸ್ ಬಾವುಟ ಹಿಡಿದರು. ಈಗ ಟಿಕೆಟ್ ಕೈತಪ್ಪಿದ್ದಕ್ಕಾಗಿ ಸಮಾಜವಾದಿ ಪಕ್ಷದಿಂದ ಹುರಿಯಾಳು. 14 ವರ್ಷದಲ್ಲಿ 7ನೇ ಬಾರಿ ಸ್ಪರ್ಧೆಗೆ 4ನೇ ಚಿಹ್ನೆ ಪಡೆದಿದ್ದಾರೆ.
ರಾಮನಗರಕ್ಕೂ ಚಿತ್ರನಂಟು
ಚನ್ನಪಟ್ಟಣದಲ್ಲಿ ನಟ ಮತ್ತು ನಿರ್ಮಾಪಕಿ ನಡುವೆ ಕದನವೇರ್ಪಟ್ಟಿದ್ದರೆ, ರಾಮನಗರ ಕ್ಷೇತ್ರಕ್ಕೂ ಚಲನಚಿತ್ರದ ನಂಟಿದೆ. ಇಲ್ಲಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ವತಃ ಚಲನಚಿತ್ರ ವಿತರಕ. ಹೀಗಾಗಿ ರಾಮನಗರ ಕ್ಷೇತ್ರಕ್ಕೂ ಚಲನಚಿತ್ರ ರಂಗದ ಮೆರಗು ಮೂಡಿದಂತಾಗಿದೆ.
ಮಾಗಡಿಯಲ್ಲಿ ಜೇಡ್ರಳ್ಳಿ
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತವರು ಮಾಗಡಿ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಿರುವ ಎಚ್.ಎಂ.ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ) ಸ್ವತಃ ನಿರ್ಮಿಸಿದ ಜೇಡ್ರಳ್ಳಿ ಚಿತ್ರದ ನಾಯಕ ನಟ. ಚಿತ್ರಕಥೆ, ಸಂಭಾಷಣೆಯೂ ಸ್ವತಃ ಅವರದ್ದೇ. ಒಂದು ಹಾಡನ್ನೂ ಹಾಡಿದ್ದಾರೆ. ಇಲ್ಲಿನ ಜೆಡಿಎಸ್ ಹುರಿಯಾಳು ಎಚ್.ಸಿ. ಬಾಲಕೃಷ್ಣ ಅವರೂ ಶ್ರೀಕ್ಷೇತ್ರ ಆದಿಚುಂಚನಗಿರಿ ಚಲನಚಿತ್ರದಲ್ಲಿ ಪಾತ್ರಧಾರಿಯಾಗಿದ್ದವರು.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

