ಬೆಂಗಳೂರು ಗ್ರಾಮಾಂತರ

ರಾಮನಗರ ರೈತರಿಗೆ ವರುಣನ ವರ

Published On :

 ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ, ರಾಮನಗರ, ಮೇ 12
ಭೀಕರ ಬರದ ಜತೆಗೆ ಬಿರು ಬೇಸಿಗೆಯಿಂದ ತತ್ತರಗೊಂಡಿದ್ದ ರಾಮನಗರ ಜಿಲ್ಲೆಗೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆ ತಂಪನ್ನೆರೆದಿದೆ. ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿರುವ ರೈತರ ಮುಖದಲ್ಲಿ ವರುಣ ಹರ್ಷ ಮೂಡಿಸಿದ್ದಾನೆ.
ಸಾಮಾನ್ಯವಾಗಿ ಯುಗಾದಿ ಆಸುಪಾಸಿನಲ್ಲಿ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ನಿರಾಸೆಯ ಕಾರ್ಮೋಡ ಕವಿದಿತ್ತು. ಏಪ್ರಿಲ್ ಅಂತ್ಯದಲ್ಲಿ ಆರಂಭವಾದ ಭರಣಿ ಮಳೆಯು ಜಿಲ್ಲಾದ್ಯಂತ ವ್ಯಾಪಕವಾಗಿ ಸುರಿದು, ಭೂಮಿ ಹದಗೊಳಿಸಿತ್ತು.
20 ಮಿ.ಮೀ.: ಇದೀಗ ಹುಟ್ಟಿರುವ ಕೃತಿಕ ಮಳೆಯು ಶನಿವಾರವಷ್ಟೇ ಅಬ್ಬರಿಸಿದೆ. ಭಾರಿ ಪ್ರಮಾಣದಲ್ಲಿ ಅಂದರೆ ಸುಮಾರು 20 ಮಿ.ಮೀ.ನಷ್ಟು ಸುರಿದಿದೆ. ದಟ್ಟ ಮೋಡ ಮುಂದುವರೆದಿರುವ ಪರಿಣಾಮ ಮತ್ತೂ ಮಳೆಯ ನಿರೀಕ್ಷೆ ಹೊಂದಲಾಗಿದೆ.
ಈ ಬಾರಿಯೂ ಮಳೆ ಪ್ರಮಾಣ ಕುಸಿತವೆನ್ನುವ ಕೇಂದ್ರ ಹವಾಮಾನ ತಜ್ಞರ ಮುನ್ಸೂಚನೆಯಿಂದ ರೈತರು ಚಿಂತಾಕ್ರಾಂತರಾಗಿದ್ದರು. ಮುಂಗಾರು ಆರಂಭದಲ್ಲೇ ಮಳೆ ಅಬ್ಬರಿಸುತ್ತಿದ್ದು, ಸತತ ಎರಡು ವರ್ಷದ ಬಳಿಕವಾದರೂ ಉತ್ತಮ ಬೆಳೆ ಪಡೆಯುವ ಆಶಾಭಾವ ಮಣ್ಣಿನ ಮಕ್ಕಳಿಗೆ ಮೂಡಿದೆ.
ಬಿತ್ತನೆ ಆರಂಭ: ಅವಧಿ ಪೂರ್ವ ಮುಂ ಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮೇವಿನ ಬೆಳೆ ಒಡ್ಡುವಲ್ಲಿ ರೈತರು ನಿರತರಾಗಿದ್ದಾರೆ. ಇದಕ್ಕಾಗಿ ಬರ ಪರಿಹಾರ ಯೋಜನೆಯಡಿ ಪಶು ಸಂಗೋಪನಾ ಇಲಾಖೆ ಸಬ್ಸಿಡಿಯಡಿ ಬಿತ್ತನೆ ಬೀಜ ಒದಗಿಸುತ್ತಿದೆ.
ಕನಕಪುರದ ಸುಮಾರು 759 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು, ರಾಮನಗರ ಹಾಗೂ  ಮಾಗಡಿ ತಾಲೂಕುಗಳ ಸುಮಾರು 1 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದ ಜಮೀನು ಹದಗೊಳಿಸಿ, ಅಲಸಂದೆ ಬೆಳೆಯನ್ನು ರೈತರು ಒಡ್ಡಿದ್ದಾರೆ.
ಇನ್ನೂ ಸಾಕಷ್ಟು ಪ್ರದೇಶದಲ್ಲಿ ಅವಧಿ ಪೂರ್ವ ಮುಂಗಾರಿನ ಪರಿಣಾಮ ಮೇವು, ದ್ವಿದಳ ಧಾನ್ಯದ ಬೆಳೆಯನ್ನು ಹಾಕುವ ನಿಟ್ಟಿನಲ್ಲಿ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೃಷಿ ಇಲಾಖೆಯು ಈಗಾಗಲೇ 50 ಕ್ವಿಂಟಾಲ್ ರಾಗಿ, 40 ಕ್ವಿಂಟಾಲ್ ತೊಗರಿ, 25 ಕ್ವಿಂಟಾಲ್ ಅಲಸಂದೆ ಬಿತ್ತನೆ ಬೀಜ ದಾಸ್ತಾನಿಟ್ಟುಕೊಂಡಿದೆ.
ಜೀವ ಜಲವಾಯ್ತು: ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಅತ್ಯಧಿಕವಾಗಿರುವ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗಿನ ಮರಗಳು ಸುಳಿ ಒಣಗಿ ಸಾಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಸುರಿದ ಮಳೆಯು ಆ ತೋಟಗಾರಿಕೆ ಬೆಳೆಗಳಿಗೆ ಜೀವಜಲವಾಗಿದೆ.
ಮಳೆ ಅಭಾವದಿಂದಾಗಿ ಈ ಬಾರಿ ಮಾವು ಉತ್ಪಾದನೆ ಶೇಕಡ 70ರಷ್ಟು ಕುಸಿತ ಕಂಡಿದೆ. ಒಂದೊಮ್ಮೆ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾದಲ್ಲಿ ಮುಂದಿನ ವರ್ಷವಾದರೂ ಉತ್ತಮ ಇಳುವರಿ ನಿರೀಕ್ಷೆ ಹೊಂದಬಹುದಾಗಿದೆ.
ಮಳೆ ಕೊರತೆಯಿಂದಾಗಿಯೇ ಕಲ್ಪವೃಕ್ಷಗಳ ಸುಳಿ ಮುರಿದು ಬೀಳುತ್ತಿದ್ದವು. ತೆಂಗಿನ ಇಳುವರಿ ಕುಸಿದು, ಇದೀಗ ತೆಂಗಿನ ಕಾಯಿ ಧಾರಣೆಯೂ ಹೆಚ್ಚಿತ್ತು. ದಶಕಗಳಿಂದ ಬೆಳೆದ ಮಳೆ ಒಣಗಿ ಬೋಳಾಗುತ್ತಿದ್ದನ್ನು ಕಂಡು ರೈತರಲ್ಲಿ ಕಣ್ಣೀರು ಸುರಿದಿತ್ತು. ಈಗ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.


ಕೃಷಿ ಚಟುವಟಿಕೆ...
ರಾಮನಗರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಅಲ್ಲಲ್ಲಿ ಎಳ್ಳು ಮತ್ತು ಅಲಸಂದೆ ಬಿತ್ತನೆ ನಡೆದಿದೆ. ಕೃಷಿ ಇಲಾಖೆಯು ಮುಂಗಾರು ಕೃಷಿಗೆ ಅಗತ್ಯದಷ್ಟು ಬಿತ್ತನೆ ಬೀಜ ದಾಸ್ತಾನಿಗೆ ಒತ್ತು ನೀಡಿದೆ. ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇರುವುದು ಆಶಾದಾಯಕ ಬೆಳವಣಿಗೆ.
ಟಿ ಗೋಪಾಲಗೌಡ, ಸ್ಥಾನಿಕ ಅಧಿಕಾರಿ, ಕೃಷಿ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.