ಬೆಂಗಳೂರು ಗ್ರಾಮಾಂತರ

ಅರ್ಹರಿಂದ ಅರ್ಜಿ ಆಹ್ವಾನ

Published On :

ರಾಮನಗರ: ಬಸವನಪುರದ ಬಳಿ ಇರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2013-14ನೇ ಸಾಲಿನ ಐದು ವರ್ಷದ ಕಾನೂನು ಪದವಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗ ಮತ್ತು ಇತರರಿಗೆ ಕನಿಷ್ಟ ಶೇಕಡಾ 45 ಹಾಗೂ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಕನಿಷ್ಠ ಶೇಕಡ 40 ಅಂಕಗಳನ್ನು ಪಡೆದಿರಬೇಕು. ಗರಿಷ್ಠ ವಯೋವುತಿ 1ನೇ ಜೂನ್ 2013ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗಕ್ಕೆ 20 ವರ್ಷ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಕ್ಕೆ 22 ವರ್ಷಗಳು. ಕಾಲೇಜಿನ ವೇಳೆಯಲ್ಲಿ ಅರ್ಜಿ ಶುಲ್ಕ ರು.21 ಪಾವತಿಸಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರನ್ನು ಖುದ್ದಾಗಿ ಸಂಪರ್ಕಿಸಬಹುದು.

ವಸತಿ ಶಾಲೆ ಪ್ರವೇಶ ಪರೀಕ್ಷೆ ಫಲಿತಾಂಶ
ರಾಮನಗರ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಮಾ. 24ರಂದು ನಡೆದ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು (ರ್ಯಾಂಕ್ ಪಟ್ಟಿಯನ್ನು) ಪ್ರಕಟಿಸಲಾಗಿದೆ.  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಕಚೇರಿ, ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗಳಲ್ಲಿ ಮತ್ತು ಆಯಾ ವಸತಿ ಶಾಲೆಗಳಲ್ಲಿ  ಏ.26ರಂದು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಸದರಿ ಕಚೇರಿಯಲ್ಲಿ ವಿವರ ಪಡೆಯಬಹುದು.  ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಮೇ 21 ಮತ್ತು 22ರಂದು ಕೌನ್ಸೆಲಿಂಗ್ (ಸ್ಥಳದಲ್ಲಿಯೇ ಆಯ್ಕೆ ಮಾಡುವ ಪ್ರಕ್ರಿಯೆ) ಅನ್ನು ಕೆಂಪೇಗೌಡ ಸರ್ಕಲ್ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಲಿದೆ. ಕೌನ್ಸೆಲಿಂಗ್‌ಗೆ ಅರ್ಹರಾದ ವಿದ್ಯಾರ್ಥಿಗಳಿಗೆ ಈಗಾಗಲೇ ಸೂಚನಾ ಪತ್ರವನ್ನು ಆಯಾ ತಾಲೂಕಿನ, ತಾಲೂಕು ಪ್ರವೇಶ ಪರೀಕ್ಷಾ ಅರ್ಜಿ ಸ್ವೀಕೃತ ಕೇಂದ್ರದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ವಸತಿ ಶಾಲೆ ಇವರ ಮೂಲಕ ಕಳುಹಿಸಲಾಗಿದೆ. ಸೂಚನಾ ಪತ್ರ ತಲುಪಿರುವ ವಿದ್ಯಾರ್ಥಿಗಳು ಮಾತ್ರ ಪೋಷಕರೊಂದಿಗೆ ಸೂಕ್ತ ದಾಖಲೆಗಳ ಸಹಿತ ಸರಿಯಾದ ಸಮಯಕ್ಕೆ ಕೌನ್ಸೆಲಿಂಗ್‌ಗೆ ಹಾಜರಾಗತಕ್ಕದ್ದು. ಕೌನ್ಸೆಲಿಂಗ್‌ಗೆ ಹಾಜರಾಗಿ ನಿಮ್ಮ ಸರದಿಯ ಸಮಯದಲ್ಲಿ, ನಿಮ್ಮ ಜಾತಿ, ಪ್ರವರ್ಗದಲ್ಲಿ ವಿವಿಧ ವಸತಿ ಶಾಲೆಗಳಲ್ಲಿ ಲಭ್ಯವಿರುವ ಸ್ಥಳಗಳನ್ನು ಪರಿಶೀಲಿಸಿ, ನಿಮಗೆ ಅನುಕೂಲವಾಗುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯ ದೂ. 080-27273003 ಅಥವಾ ಖುದ್ದಾಗಿ ವಸತಿ ಶಾಲೆಗಳ ಪ್ರಾಂಶುಪಾಲರ ಕಚೇರಿಗಳನ್ನು ಸಂಪರ್ಕಿಸಬಹುದು.

ಅಮಾನತ್ ಬ್ಯಾಂಕ್ ಎದುರು ಪ್ರತಿಭಟನೆ
ಬೆಂಗಳೂರು: ಠೇವಣಿ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಇಲಿಯಾಸ್ ನಗರ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಎದುರು ನೂರಾರು ಗ್ರಾಹಕರು ಶುಕ್ರವಾರ ಪ್ರತಿಭಟನೆ ನಡೆಸಿದರು.ಕಳೆದ ಕೆಲ ದಿನಗಳಿಂದ ಠೇವಣಿದಾರರಿಗೆ ದಿನಕ್ಕೆ 1 ಸಾವಿರ ಡ್ರಾ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಶುಕ್ರವಾರ 1 ಸಾವಿರ ಕೂಡಾ ಡ್ರಾ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರು. ಇದರಿಂದ ರೊಚ್ಚಿಗೆದ್ದ ಗ್ರಾಹಕರು ಬೆಳಿಗ್ಗೆಯಿಂದಲೇ ಬ್ಯಾಂಕಿನ ಎದುರು ಪ್ರತಿಭಟನೆ ಆರಂಭಿಸಿದರು. ಸುದ್ದಿ ಕಾಳ್ಗಿಚ್ಚಿನಂತೆ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದ್ದಂತೆ ನೂರಾರು ಗ್ರಾಹಕರು ಬ್ಯಾಂಕ್ ಬಳಿ ಸೇರಿ ರಿಂಗ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಬಡಾವಣೆ ಪೊಲೀಸರು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಗ್ರಾಹಕರು ತಮ್ಮ ಪ್ರತಿಭಟನೆಯನ್ನು ಬ್ಯಾಂಕ್ ಎದುರು ಮುಂದುವರೆಸಿದರು. ಸಂಜೆ 4 ಗಂಟೆಯವರೆಗೂ ಪ್ರತಿಭಟನೆ ಮುಂದುವರೆದಿತ್ತು.ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕಿನ ಸಿಬ್ಬಂದಿ, ಗ್ರಾಹಕರಿಗೆ ನೀಡಲು ಬ್ಯಾಂಕಿನಲ್ಲಿ ಹಣವಿಲ್ಲ. ಹೀಗಾಗಿ ಒಬ್ಬರಿಗೆ 1 ಸಾವಿರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಬೇಕಾದಲ್ಲಿ ಬ್ಯಾಂಕ್‌ನ ಮುಖ್ಯ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ. ಸಿಬ್ಬಂದಿ ಉತ್ತರದಿಂದ ಸಮಾಧಾನಗೊಳ್ಳದ ಗ್ರಾಹಕರು ಬ್ಯಾಂಕ್‌ನ ನೀತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ದುಡಿದ ಹಣ ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೆವು. ಆದರೆ ಏಕಾಏಕಿ ಬ್ಯಾಂಕ್‌ನಿಂದ ಹಣ ತೆಗೆದುಕೊಳ್ಳಲು ನಿರ್ಬಂಧ ಹೇರಿರುವುದು ಧಿಕ್ಕು ತೋಚದಂತಾಗಿದೆ. ಏನೇ ಆದರೂ ನಾವು ಕಷ್ಟಪಟ್ಟು ದುಡಿದು ಠೇವಣಿ ಇಟ್ಟಿದ್ದ ಹಣ ನಮಗೆ ನೀಡಬೇಕು ಎಂದು ಒತ್ತಾಯಿಸಿದರು.ಬ್ಯಾಂಕ್‌ನ ಇಂದಿನ ದುಸ್ಥಿತಿಗೆ ಹಿಂದಿನ ಅಧ್ಯಕ್ಷ ಕೆ.ರೆಹಮಾನ್ ಖಾನ್ ಕಾರಣ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಅಲ್ಲದೇ ಶನಿವಾರ ಜಯನಗರದ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ನಿಯಉಲ್ಲಂಘಿಸಿ ಅವ್ಯವಹಾರ ನಡೆಸಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಮೇ 5 ರಂದು ಅಮಾನತ್ ಕೋ ಅಪರೇಟಿವ್ ಬ್ಯಾಂಕ್ ವ್ಯವಹಾರಗಳ ಮೇಲೆ ನಿಯಂತ್ರಣ ಹೇರಿ ನೋಟಿಸ್ ಜಾರಿ ಮಾಡಿತ್ತು. ಅಂದಿನಿಂದ ಗ್ರಾಹಕರು ಪ್ರತಿನಿತ್ಯ ರು. 1 ಸಾವಿರ ಮಾತ್ರ ಡ್ರಾ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಇಲಿಯಾಸ್ ನಗರ ಶಾಖೆಯಲ್ಲಿ ಅದಕ್ಕೂ ಅವಕಾಶವಿಲ್ಲದಿರುವುದು ಗ್ರಾಹಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.