ಬೆಂಗಳೂರು ಗ್ರಾಮಾಂತರ

ನಾಗರಾಜ್‌ಗೆ ಅಭಿನಂದನೆ

Published On :

ಹೊಸಕೋಟೆ: ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ಹೊಸಕೋಟೆ ತಾಲೂಕಿನಲ್ಲಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಸಚಿವರು ಭೇಟಿಯಾಗಿ ಕೈ ಕುಲುಕಿದರು. ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದ ಬಂಡಿದೇವರ ಕರಗ ಮಹೋತ್ಸವಕ್ಕೆ ಆಗಮಿಸಿ ಹಿಂದಿರುಗುತ್ತಿದ್ದ ಹಾಲಿ ಶಾಸಕ ಎಂಟಿಬಿ ನಾಗರಾಜ್‌ಗೆ  ಎದುರುಗಡೆಯಿಂದ ಮಾಜಿ ಸಚಿವ ಬಿ.ಎನ್.ಬಚ್ಚೆಗೌಡರು ಬಂದರು. ಎಂ.ಟಿ.ಬಿ. ನಾಗರಾಜ್ ಬಳಿ ಬಂದು ಕೈಕುಲುಕಿ ವಿನಯದಿಂದ ಮಾತನಾಡಿದ ಬಚ್ಚೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಚ್ಚೇಗೌಡರು ಮಾತನಾಡಿ, ನಾನೇ ಖುದ್ದಾಗಿ ನಿಮ್ಮನ್ನು ಭೇಟಿ ಮಾಡಿ ಅಭಿನಂದಿಸಬೇಕೆಂದಿದ್ದೆ. ಅದರೆ ಇಂದು ನೀವೇ ಸಿಕ್ಕಿದ್ದೀರಿ. ತುಂಬ ಸಂತೋಷವಾಯಿತು ಎಂದರು. ಇದಕ್ಕೆ ಶಾಸಕ ಎಂಟಿಬಿ ನಾಗರಾಜ್ ತಮಗೂ ಧನ್ಯವಾದ ಎಂದು ಬಚ್ಚೇಗೌಡರಿಗೆ ತಿಳಿಸಿದರು. ನಂತರ ಬಚ್ಚೇಗೌಡರು ಬಂಡಿದೇವರ ಕರಗ ಮಹೋತ್ಸವದಲ್ಲಿ ಭಾಗವಹಿಸಲು ತೆರಳಿದರು.

ದರೋಡೆಗೆ ಸಂಚು; ಮೂವರ ಸೆರೆ
ನೆಲಮಂಗಲ: ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಚೋಹಳ್ಳಿ ಗ್ರಾಮದಲ್ಲಿ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ಪೊಲೀಸರು, ಒಂದು ಬೈಕ್ ಮತ್ತು ಎರಡು ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮಾಗಡಿ ರಸ್ತೆಯ ಕಾಂತರಾಜು, ಮಂಜುನಾಥ್ ಮತ್ತು ರಾಜಣ್ಣ ಎಂದು ಗುರುತಿಸಲಾಗಿದೆ. ಈ ಮೂವರು ಸುಮಾರು ಮೂವತ್ತರಿಂದ ಮೂವತ್ತೈದು ವರ್ಷದವರಾಗಿದ್ದು ರಸ್ತೆ ಬದಿ ಅನುಮಾನಾಸ್ಪದವಾಗಿ  ಓಡಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸಾಕಷ್ಟು ಕಳವು ಪ್ರಕರಣಗಳ ಬಗ್ಗೆ ಮಾಹಿತಿ ದೊರೆತಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಾದನಾಯಕನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಆಶ್ರಮ ಶಾಲೆಗಳಿಗೆ ಅರ್ಜಿ ಆಹ್ವಾನ
ರಾಮನಗರ: ಕನಕಪುರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಆಶ್ರಮ ಶಾಲೆಗಳಿಗೆ 2013-14ನೇ ಸಾಲಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಕನಕಪುರ ಅಥವಾ ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 15ರೊಳಗೆ ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕನಕಪುರದ ತಾಲೂಕು ಸಮಾಜ ಕಲ್ಯಾಣಧಿಕಾರಿಯನ್ನು ಸಂಪರ್ಕಿಸಬಹುದು.

ಲೀಡ್ ಬ್ಯಾಂಕ್ ಕೃಷಿ ಮೇಳ
ಚನ್ನಪಟ್ಟಣ: ಕೃಷಿಗೆ ಬ್ಯಾಂಕ್‌ನಿಂದ ದೊರೆಯುವ ಹಣಕಾಸು ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ರೈತರು ಪರದಾಡುವಂತಾಗಿದ್ದು ಇದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಬ್ಯಾಂಕ್ ಕೃಷಿ ಮೇಳವನ್ನು ಹಮ್ಮಿಕೊಂಡಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಭಿನಂದನ್ ತಿಳಿಸಿದರು. ಪಟ್ಟಣದ ಕೊಲ್ಲಾಪುರದಮ್ಮನ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಸಾಲ ಮೆಳವನ್ನು ಉದ್ಘಾಟಿಸಿ ಮಾತನಾಡಿ,ಇತರ  ಸಾಲ ಯೋಜನೆಗಳಿಗೆ ಒಲಿಸಿದರೆ ಕೃಷಿ ಸಾಲಯೋಜನೆಗಳು ಕಡಿಮೆ ಪ್ರಮಾಣದಲ್ಲಿ ರೈತರಿಗೆ ದೊರೆಯುತ್ತಿದೆ ಎಂದು ವಿಷಾದಿಸಿದರು. ವಾಹನ ಸಾಲ, ಗೃಹ ಸಾಲ, ಉದ್ಯಮ ಸಾಲಗಳಷ್ಟೇ ಕೃಷಿ ಸಾಲವು ಅಗತ್ಯವೆನಿಸಿದ್ದು ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಸಾಲಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನೋಡಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು. ರೈತರಿಗೆ ಅಗತ್ಯವಿರುವ ಯಂತ್ರೋಪಕರಣಗಳು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಹಣಕಾಸನ್ನು ನಮ್ಮ  ಬ್ಯಾಂಕ್ ನೀಡಲಿದ್ದು ಸಾಲಪಡೆದ ರೈತರು ಸಕಾಲದಲ್ಲಿ ಹಣವನ್ನು ಮರುಪಾವತಿ ಮಾಡಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು. ಕಾರ್ಪೋರೇಶನ್ ಬ್ಯಾಂಕ್‌ನ ಶಾಖಾವ್ಯವಸ್ಥಾಪಕ ನಾರಾಯಣ, ಸಿಬ್ಬಂದಿಗಳಾದ ಕಿಶೋರ್, ನಿಶಾಂತ್ ಜೋಷಿ, ಕಿರಣ್, ಶ್ರೀನಿವಾಸ್, ಅರವಿಂದ, ಗ್ರಾಹಕ ಧರಣೀಶ್ ರಾಂಪುರ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಗೆ ಕಾಂಗ್ರೆಸ್ ಅನ್ಯಾಯ: ಆರೋಪ
ಚನ್ನಪಟ್ಟಣ: ರಾಮನಗರ ಜಿಲ್ಲೆಯ ಪ್ರಮುಖ ಒಕ್ಕಲಿಗ ಮುಖಂಡ  ಡಿ.ಕೆ.ಶಿವಕುಮಾರ್‌ಗೆ ಸಚಿವ ಸ್ಥಾನ ತಪ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷಜಿಲ್ಲೆಗೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಒಕ್ಕಲಿಗ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು ಇವರಿಗೆ ಸಚಿವ ಸ್ಥಾನ ನೀಡದಿರುವ ಕಾಂಗ್ರೆಸ್ ಪಕ್ಷದ ಕ್ರಮ ಸಾಧುವಲ್ಲ, ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಕ್ಕಲಿಗ ಮುಖಂಡರಿಗೆ ಅಧಿಕಾರ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಮೊಗೇನಹಳ್ಳಿ ರಮೇಶ್ ಕಿಡಿಕಾರಿದರು. ಮುಂದಿನ ಸಚಿವ ಸಚಿವ ಸಂಪುಟ ವಿಸ್ತರಣೆಯ ವೇಳೆ ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡದಿದ್ದರೆ ನಮ್ಮ ವೇದಿಕೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದೀತೆಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಎ.ಆನಂದ್, ಕಾಂಗ್ರೆಸ್ ಮುಖಂಡರಾದ ಎ.ಸಿ.ವೀರೇಗೌಡ, ಶಿವಮಾದು, ಜನತಾಶಕೀಲ್, ವಕೀಲ ಎಂ.ಕೆ.ನಿಂಗಪ್ಪ, ಜೆಡಿಎಸ್‌ನ ಬಿ.ನಾಗೇಶ್, ಗೋವಿಂದಹಳ್ಳಿ ನಾಗರಾಜು, ಉಮೇಶ್, ಡಿ.ಕೆ.ಕಾಂತರಾಜು, ವೇದಿಕೆಯ ಎನ್.ಎಸ್. ಸುರೇಶ್ ಗೌಡ ಮುಂತಾದವರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.