ಶರಣರ ಹಿತವಚನ ಎಂದೆಂದೂ ಅಮರ: ಚಂದ್ರಶೇಖರ ಶ್ರೀ
ತುಮಕೂರು: ಸಾಂಸಾರಿಕ ಜೀವಿಗಳಾದ ಶರಣರು ಎಂದಿಗೂ ಕುಟುಂಬ ಜೀವನವನ್ನು ವಿರೋಧಿಸದೆ ಸತಿಪತಿ ಭಾವದಿಂದ ಜೀವನ ನಡೆಸಿದರು. ಅವರ ಆಚಾರ ವಿಚಾರಗಳ ಸಮನ್ವಯವೇ ವೀರಶೈವ ಧರ್ಮದ ತಳಹದಿ ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಸಿದ್ಧಗಂಗಾ ಮಹಿಳಾ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮುದ್ದೇನಹಳ್ಳಿ ನಂಜಯ್ಯನವರ ಅನುಭಾವ ಸಂಗಮ ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ಪ್ರಜ್ಞಾವಂತಿಕೆ ಮೂಡಿಸಬೇಕಾದ ಧಾರ್ಮಿಕ ಕೇಂದ್ರಗಳು ಮೂಢನಂಬಿಕೆಯ ಕೇಂದ್ರಗಳಾಗುತ್ತಿದ್ದು, ಆಚರಣೆಗಿಂತ ವೈಭವವೇ ಭಕ್ತಿಗಿಂತ ಆಡಂಭರವೇ ನಡೆಯುತ್ತಿದೆ. ಯುವ ಜನಾಂಗ ಧರ್ಮದಿಂದ ವಿಮುಖರಾಗುತ್ತಿದ್ದು ಅವರನ್ನು ಧರ್ಮದ ನೈತಿಕ ನೆಲೆಗಟ್ಟಿನಲ್ಲಿ ಕೊಂಡೊಯ್ಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಡಿ.ಎನ್. ಯೋಗೀಶ್ ಧರ್ಮದ ಹೆಸರಿನಲ್ಲಿ ಇಂದು ಅವೈಚಾರಿಕ ಆಚರಣೆಗಳು ನಡೆಯುತ್ತಿದ್ದರೆ. ನವನಾಗರಿಕತೆಯ ನೆಪದಲ್ಲಿ ಸಂಸ್ಕೃತಿ ಮಲೀನವಾಗುತ್ತಿದೆ. ಧಾರ್ಮಿಕ ಕೇಂದ್ರಗಳು ಮೂಢನಂಬಿಕೆಗೆ ಕಡಿವಾಣಹಾಕಿ ಸಹಜತೆಯ ದರ್ಶನ ಮಾಡಿಸಬೇಕೆಂದರು.
ಪುಸ್ತಕ ಕುರಿತು ಮಾತನಾಡಿದ ಶಂಕರಗೌಡ, ಮ.ಬಿರಾದಾರ ಅವರು ಬಸವ ತತ್ವ ಪ್ರಜಾಪ್ರಭುತ್ವಕ್ಕೆ ಮೂಲ ತಳಹದಿಯಾಗಿದೆ. ಬಸವಾದಿ ಶರಣರು ರಚಿಸಿದ ವಚನಗಳು ಕನ್ನಡ ನಾಡಿನ ವಿಚಾರಧಾರೆಗಳಾಗಿವೆ. ಈ ಅನುಭಾವ ಸಂಗಮ ಕೃತಿ ರಚಕರಾದ ಮುದ್ದೇನಹಳ್ಳಿ ನಂಜಯ್ಯನವರು ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು, ಮೈಗೂಡಿಸಿಕೊಂಡಿರುವುದರೊಂದಿಗೆ ತತ್ವಾಚಾರಬದ್ಧರೂ, ವಿನಯಶೀಲರೂ, ಸಹನಶೀಲರೂ, ಸಹೃದಯಿಗಳೂ, ಸತ್ವಯುತ ಸಾಹಿತಿಗಳೂ ಆಗಿರುವರು ಎಂದರು.
ಇವರು ರಚಿಸಿರುವ ಅನುಭಾವ ಸಂಗಮ ಗ್ರಂಥವು ವೈವಿಧ್ಯಮಯ ವಿಷಯಗಳನ್ನು, ಶರಣರ ಪರತತ್ತ್ವ ಸಾಧನೆಯ ಮಹೋನ್ನತೆಯನ್ನೊಳಗೊಂಡಿದ್ದು, ಪರವಸ್ತುವನ್ನು ದರ್ಶಿಸುವ ಪ್ರಾಧಾನ್ಯತೆ ಹೊಂದಿದೆ. ಈ ಗ್ರಂಥವು ಲೇಖಕರಿಗೆ, ಉಪನ್ಯಾಸಕರಿಗೆ ಹಾಗೂ ಪ್ರವಚನಕಾರರಿಗೆ ಕೈಪಿಡಿಯಾಗುವಂತಹದಾಗಿದೆ. ಮುದ್ದೇನಹಳ್ಳಿ ನಂಜಯ್ಯನವರ ಬಗೆಗೆ ಹೆಮ್ಮೆ ಮತ್ತು ಗೌರವ ಮೂಡಿಸುವ ಕೃತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶರಣ ತತ್ವಚಿಂತಕ ಎಂ.ಚಂದ್ರಪ್ಪನವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಚಂದ್ರಪ್ಪ, ಸಂಶೋಧಕ ಡಾ. ಬಿ.ನಂಜುಂಡಸ್ವಾಮಿ ಕೃತಿಯ ಲೇಖಕ ಮುದ್ದೇನಹಳ್ಳಿ ನಂಜಯ್ಯ ಉಪಸ್ಥಿತರಿದ್ದರು. ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಕುಂ.ಸಿ. ಸದಾಶಿವಯ್ಯ ವಂದಿಸಿದರು. ಚಿಕ್ಕಬೆಳ್ಳಾವಿ ಶಿವಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

