ಬೆಂಗಳೂರು ಗ್ರಾಮಾಂತರ

ನಿಜವಾದ ಕನ್ನಡ ಇರುವುದೇ ಹಳ್ಳಿಗಾಡಿನಲ್ಲಿ

Published On :

ರಾಮನಗರ: ಬೆಂಗಳೂರಿನಲ್ಲಿರುವುದು ಬೆರಕೆ ಕನ್ನಡ. ಬೆಂಗಳೂರಿಗರು ಬಳಸುವ 5 ಪದದಲ್ಲಿ ಒಂದಷ್ಟೇ ಕನ್ನಡವಾಗಿರುತ್ತದೆ. ನಿಜವಾದ ಕನ್ನಡ ಇರುವುದೇ ಹಳ್ಳಿಗಾಡಿನಲ್ಲಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.  
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕನ್ನಡ  ರಾಜ್ಯೋತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾಷೆಯನ್ನು ಬಳಸುವ ಉದ್ದೇಶ ಅದರ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಮನೆ ಬಳಕೆ, ನಿತ್ಯ ಜೀವನ, ಒಕ್ಕಲುತನದಲ್ಲಿ ಕನ್ನಡ ಹಾಸುಹೊಕ್ಕಾಗಿದೆ. ಹೀಗಾಗಿ ಕನ್ನಡಕ್ಕೆ ಹಳ್ಳಿಗರಿಂದ ಕುತ್ತು ಬಂದಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ನಿಜವಾಗಿ ಆಪತ್ತು ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಂಪ್ಯೂಟರ್ ಬಳಕೆ ಮತ್ತು ಜಗತ್ತಿನ ವಿಚಾರ ತಿಳಿಯುವುದಕ್ಕೆ ಕನ್ನಡ ಬಳಕೆಯಾಗುತ್ತಿಲ್ಲ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಿಲ್ಲ. ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿಲ್ಲ. ಈ ಎಲ್ಲ ಕಾರಣಕ್ಕೆ ಕನ್ನಡ ಭಾಷೆಯ ಉಳಿವಿಗೆ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಉಳಿವಿಗೆ ಸೂಕ್ತ ಮಾರ್ಗ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಚನೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆ, ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳ ಆಚರಣೆಯಿಂದಷ್ಟೇ ಕನ್ನಡ ಉಳಿವು ಸಾಧ್ಯವೆನ್ನುವುದು ಅರ್ಥವಿಲ್ಲದ ಮಾತು ಎಂದು ಡಾ.ಕಂಬಾರ ಹೇಳಿದರು.  ಪ್ರಪಂಚದ ಮಾಹಿತಿಯನ್ನು ಕನ್ನಡದಲ್ಲೇ ತಿಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಕಂಪ್ಯೂಟರ್ ಹಾಗೂ  ಮೊಬೈಲ್‌ಗಳಲ್ಲಿ ಕನ್ನಡ ತಂತ್ರಾಂಶ ಅಳವಡಿಸಬೇಕು. ತಂತ್ರಾಂಶದಲ್ಲಿ ಇಂಗ್ಲಿಷ್ ಪಾರಮ್ಯಕ್ಕೆ ಅಂತ್ಯವಾಡಿದರಷ್ಟೇ ಕನ್ನಡಕ್ಕೆ ಉಜ್ವಲ ಭವಿಷ್ಯ ಸಾಧ್ಯ ಎಂದರು.  ಭಾಷಾಭಿವೃದ್ಧಿ ವಿಷಯದಲ್ಲಿ ತಮಿಳುನಾಡು ಸರ್ಕಾರ ಮತ್ತು ತಮಿಳರಿಗೆ ಇರುವ ಕಾಳಜಿ ನಮ್ಮಲ್ಲಿ ಇಲ್ಲವಾಗಿದೆ. ಸಾಹಿತಿಗಳ ಕೂಗಿಗೆ ಕರ್ನಾಟಕ ಸರ್ಕಾರ ಕಿವಿಗೊಡುತ್ತಿಲ್ಲ. ಭಾಷೆ ವಿಷಯವಾಗಿ ಆಳುವ ವರ್ಗಕ್ಕೆ ಅಸಡ್‌ಡೆ ಸಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ಮಾತೃಭಾಷೆ ಶಿಕ್ಷಣ ಕಡ್ಡಾಯ: ನಮ್ಮಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯವಾಗಿಲ್ಲದ ಕಾರಣ ಆಂಗ್ಲ ಮಾಧ್ಯಮ ವ್ಯಾಮೋಹ ಹೆಚ್ಚಾಗಿದೆ. ನಮ್ಮ ಅದೆಷ್ಟೋ ಮಕ್ಕಳಿಗೆ ನಮ್ಮ ನಾಡಿನ ನದಿ, ಪ್ರಾಣಿ ಮತ್ತು ಪಕ್ಷಿಗಳ ಹೆಸರು ಕನ್ನಡದಲ್ಲಿ ಗೊತ್ತಿಲ್ಲದಂತಾಗಿದೆ ಎಂದು ಕಂಬಾರ ವಿಷಾದಿಸಿದರು.
ಮಾತೃಭಾಷೆ ಬಗ್ಗೆ ನಮ್ಮಲ್ಲಿ ಕೀಳರಿಮೆ ಇರುವುದೇ ಇದಕ್ಕೆಲ್ಲ ಕಾರಣ. ಇಂಗ್ಲಿಷ್ ಭಾಷೆಯಲ್ಲಿ ಕಲಿತರಷ್ಟೇ ನಾವು ವಿದ್ವಾಂಸರಾಗುತ್ತೇವೆ ಎನ್ನುವ ಭ್ರಮೆಯಲ್ಲಿ ನಮ್ಮ ಜನರಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸುವುದು ಪ್ರತಿಷ್ಠೆ ವಿಷಯವೆಂದು ನಮ್ಮವರು ಭಾವಿಸಿದ್ದಾರೆ ಎಂದರು.
ಔಷಧ ಕಂಡು ಹಿಡಿದಿಲ್ಲ: ನಮ್ಮಲ್ಲಿ ನೂರಕ್ಕೂ ಹೆಚ್ಚು ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಸಹಸ್ರಾರು ಕೃಷಿ ವಿಜ್ಞಾನಿಗಳಿದ್ದಾರೆ. ಇಷ್ಟಾಗಿಯೂ ನಮ್ಮಲ್ಲಿ ತೆಂಗಿಗೆ ತಲೆದೋರಿದ ನುಸಿಪೀಡೆ ನಿವಾರಣೆಗೆ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಕಂಬಾರ ವಿಷಾದಿಸಿದರು.  ಹೀಗಾಗಲು ನಮ್ಮ ಕೃಷಿ ವಿವಿಗಳಲ್ಲಿ ಇರುವುದೆಲ್ಲ ಪಾಶ್ಚಾತ್ಯರು ಬಿಟ್ಟು ಹೋದ ಪಠ್ಯ ಕ್ರಮವಾಗಿದೆ. ಹೊಸ ಆವಿಷ್ಕಾರ, ಸಂಶೋಧನೆ, ಹೊಸ ಪಠ್ಯ ಕ್ರಮಗಳ ಅಳವಡಿಕೆ ನಿಟ್ಟಿನಲ್ಲಿ ಪ್ರಯತ್ನವೇ ನಡೆದಿಲ್ಲ. ಇದೆಲ್ಲದರ ಪರಿಣಾಮ ನಮ್ಮಲ್ಲಿ ರೋಗ ಹತೋಟಿ ಕ್ರಮಗಳು ಫಲಿಸುತ್ತಿಲ್ಲ ಎಂದು ಟೀಕಿಸಿದರು.
ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಪ್ರಾಧ್ಯಾಪಕ ಡಾ.ಮಧುಸೂದನ ಆಚಾರ್ಯ ಜೋಶಿ ಅಭಿನಂದನಾ ಭಾಷಣ ಮಾಡಿದರು. ಮಾಜಿ ಶಾಸಕ ಕೆ.ರಾಜು, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಕುಮಾರಸ್ವಾಮಿ, ಎಲ್.ಚಂದ್ರಶೇಖರ್, ಸಿ.ರಾಜು ಶಿವಮಾದು, ರಾಜಶೇಖರ್, ಹೊಸೂರು ಬಿ.ಶ್ರೀಧರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.