ಬೆಂಗಳೂರು ಗ್ರಾಮಾಂತರ

ಕೃಷಿ ಮಾರುಕಟ್ಟೆ ಸಪ್ತಾಹ ಕಾಟಾಚಾರದ ಕಾರ್ಯಕ್ರಮ

Published On :

ಕ.ಪ್ರ. ವಾರ್ತೆ ರಾಮನಗರ ನ.22
ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆದ ಮಾರುಕಟ್ಟೆ ಸಪ್ತಾಹವು ಕಾಟಾಚಾರದ ಕಾರ್ಯಕ್ರಮವಾಗಿತ್ತು. ಬೆರಳೆಣಿಕೆ ಮಂದಿಯ ಹಾಜರಿ, ಬಹುತೇಕ ಖಾಲಿ ಇದ್ದ ಕುರ್ಚಿಗಳ ಎದುರು ಭಾಷಣಕ್ಕೆ ಬರವಿರಲಿಲ್ಲ.
ಸರ್ಕಾರಿ ಕಾರ್ಯಕ್ರಮಗಳೆಂದರೆ ಕಾಟಾಚಾರದವೆಂದು ಮೂಗು ಮುರಿಯುವವರೇ ಹೆಚ್ಚು. ಅದಕ್ಕೆ ಸಾಕ್ಷಿ ಎನ್ನುವಂತೆ ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮವಿತ್ತು. ಅದರತ್ತ ಸಹಕಾರಿಗಳು, ರೈತರು ಸುಳಿಯಲೇ ಇಲ್ಲ. ಇದ್ದವರು ಇಲಾಖೆ ಮತ್ತು ಸಮಿತಿ ಸಿಬ್ಬಂದಿ, ಆರೇಳು ಪತ್ರಕರ್ತರಷ್ಟೇ.
ಸಹಕಾರ ಇಲಾಖೆಯು ಪ್ರತಿ ವರ್ಷ ಸಹಕಾರಿ ಸಪ್ತಾಹವನ್ನು ನಡೆಸುತ್ತಿದೆ. ಅಂತೆಯೇ ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನವೆಂಬರ್ ಮಾಹೆಯಲ್ಲಿ ಮಾರುಕಟ್ಟೆ ಸಪ್ತಾಹ ನಡೆಸಿಕೊಂಡು ಬರಲಾಗಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯು ಸಹಕಾರಿಗಳು ಮತ್ತು ರೈತಾಪಿ ವರ್ಗಕ್ಕೆ ತಲುಪುವುದೇ ಇಲ್ಲ. ಲೆಕ್ಕ ತೋರಿಸಲೆಂದು ಒಂದಿಷ್ಟು ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ, ಕಾರ್ಯಕ್ರಮ ನಡೆಸಿದ್ದಕ್ಕೆ ನಾಲ್ಕಾರು ಫೋಟೋಗಳನ್ನು ಕಡತಕ್ಕೇರಿಸಿ ಖರ್ಚು-ವೆಚ್ಚ ಸಂದಾಯ ಮಾಡಿಕೊಳ್ಳುವ ಕೆಲಸ ಇಲ್ಲಾಗಿದೆ.
ನಡೆದಿದ್ದು ಸಮಾರೋಪವಷ್ಟೇ: ಯಾವುದೇ ಒಂದು ಕಾರ್ಯಕ್ರಮಕ್ಕೆ ಉದ್ಘಾಟನೆ ಆದ ನಂತರ ಸಮಾರೋಪ ನಡೆಯುವುದು ವಾಡಿಕೆ. ಆದರೆ, ಈ ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿಯೇ ಇಲ್ಲ. ಆದರೆ, ಸಮಾರೋಪ ಕಾರ್ಯಕ್ರಮ ಶುಕ್ರವಾರ ಜರುಗಿದೆ.  
ಎಪಿಎಂಸಿ ವರ್ತಕರಿಂದ ದೇಣಿಗೆ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ನಿಭಾಯಿಸುವಷ್ಟು ಸಾಮರ್ಥ್ಯ ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಮಾರುಕಟ್ಟೆ ಸಮಿತಿಯಿಂದ ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ರೈತರಿಗೆ ಮಾರುಕಟ್ಟೆಯಲ್ಲಿರುವ ಸೌಲಭ್ಯಗಳು, ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ನವೆಂಬರ್ ಮಾಹೆಯಲ್ಲಿ ನಡೆಸಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ, ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸುವ ಕೆಲಸವಾಗಿಲ್ಲ.
ಅಲ್ಲಿದ್ದವರು ಸಿಬ್ಬಂದಿ ಮಾತ್ರ: ಮಾರುಕಟ್ಟೆ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಇದ್ದವರು ಮಾರುಕಟ್ಟೆ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿಬ್ಬಂದಿ, ಪತ್ರಕರ್ತರಷ್ಟೇ. ಖಾಲಿ ಕುರ್ಚಿಗಳು ಕಣ್ಣಿಗೆ ರಾಚುತ್ತಿದ್ದರೂ ಅಧಿಕಾರಿಗಳು ಭಾಷಣ ಮೊಟಕುಗೊಳಿಸಲಿಲ್ಲ.
ಅಧಿಕಾರಿಗಳೂ ತಮ್ಮ ಭಾಷಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವರ್ತಕರೇ ಆಧಾರ ಸ್ಥಂಬ. ಅವರೊಂದಿಗೆ ರೈತರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿದೆ ಎಂದು ಉಪದೇಶ ನೀಡುವ ಮೂಲಕ ವರ್ತಕರನ್ನು ಸಂಪ್ರೀತರನ್ನಾಗಿಸಿದರು.
ರೈತರ ಹಿತ ಗಮನದಲ್ಲಿಟ್ಟುಕೊಂಡು ನಡೆಸಲಾದ ಈ ಕಾರ್ಯಕ್ರಮದಲ್ಲಿ ವರ್ತಕರ ಪರವಾದ ಮಾತುಗಳೇ ಮೊಳಗಿದವು. ರೈತರಿಗೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಅನನುಕೂಲದ ಬಗ್ಗೆ ಎಳ್ಳಷ್ಟೂ ಪ್ರಸ್ತಾಪವಿರಲಿಲ್ಲ.
ರೈತನ ಅಸಮಾಧಾನ: ಇಂಥದ್ದೊಂದು ಮಹತ್ವದ ಕಾರ್ಯಕ್ರಮ ಆಯೋಜಿಸುವ ವಿಷಯವಾಗಿ ವರ್ತಕರು, ರೈತರು, ಸಹಕಾರಿಗಳ ಸಭೆ ಕರೆದು ಪೂರ್ವಭಾವಿ ಸಭೆ ನಡೆಸಬೇಕಿತ್ತು. ಪ್ರಮುಖವಾಗಿ ರೈತರನ್ನು ಕಡೆಗಣಿಸಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ರೈತ ಸುಜೀವನ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಎಪಿಎಂಸಿಯಲ್ಲಿ ರೈತರನ್ನು ನಾಯಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಕನಿಷ್ಠ ಸ್ಪಂದನೆ ಇಲ್ಲ. ಕಮೀಷನ್ ವಸೂಲಿ, ಬಿಳಿ ಚೀಟಿ ದಂಧೆ, ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಹರಾಜು ಸಹಿತ ನಾನಾ ಅಕ್ರಮಗಳಿಗೆ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಕಿಡಿ ಕಾರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತಾಧಿಕಾರಿ ಟಿ.ಪಿ. ಗಾಯತ್ರಿ, ರಾಜ್ಯ ಕೃಷಿ ಮಾರಾಟ ಮಂಡಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಸ್ವಾಮಿ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಮಹಮದ್ ಸತ್ತಾರ್, ಕಾರ್ಯದರ್ಶಿ ರಾಜಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.