ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಸ್ಕೂಟರ್ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿ
ಮಾಗಡಿ : ಸ್ಕೂಟರ್ ಅನ್ನು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ಸಿಕ್ಕಿಬಿದ್ದಿರುವ ಘಟನೆ ಮಾಗಡಿ ಪಟ್ಟಣದ ರಾಮೇಶ್ವರ ಬಡಾವಣೆ ಎದುರಿಗೆ ಇರುವ ಸೀಮೆಂಟ್ ಅಂಗಡಿ ಬಳಿ ನಡೆದಿದೆ. ತಾನು  ಆಂಧ್ರ ಪ್ರದೇಶದ ಜೋತಿಪಾಳ್ಯಂ ವಾಸಿ ಎಂದು ಆರೋಪಿ  ಮಹೇಶ್ ಹೇಳಿಕೊಂಡಿದ್ದಾನೆ. ಇತ ಮೊದಲು ಸೈಕಲ್ ಕಳ್ಳತನ ಮಾಡಿಕೊಂಡು ಬಂದು ಇಲ್ಲಿನ ಸೀಮೆಂಟ್  ಅಂಗಡಿ ಬಳಿ ನಿಲ್ಲಿಸಿದ್ದಾನೆ. ನಂತರ ಇಲ್ಲಿನ ಸಿಮೆಂಟ್  ಅಂಗಡಿ ಬಳಿ ನಿಲ್ಲಿಸಿದ್ದ ಸ್ಕೂಟರ್ ಅನ್ನು  ನಕಲಿ ಕೀ ಬಳಸಿ, ತಳ್ಳಿಕೊಂಡು ಹೋಗುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಮಹೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಡಿ.2 ರಂದು ಶಿವಗಂಗಾ ಜಾತ್ರೆ
ಬೆಂಗಳೂರು: ದಕ್ಷಿಣ ಕಾಶಿ ಶಿವಗಂಗಾ ಶ್ರೀ ಕ್ಷೇತ್ರದ ಮುದ್ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಡಿ.2ರ ಸೋಮವಾರ ನಡೆಯಲಿದೆ. ಡಿ.1ರಂದು ಭಾನುವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. 2ರಂದು ಪ್ರಾತಃಕಾಲ ಪೂಜಾ ಕೈಂಕರ್ಯಗಳೊಂದಿಗೆ ಮುದ್ವೀರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಜಪ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ಸ್ವಾಮಿಯ ರಥೋತ್ಸವ ಶಿವಗಂಗೆಯ ಕಂಬಾಳುನಲ್ಲಿ ನಡೆಯಲಿದೆ. ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಏರ್ಪಡಿಸಲಾಗಿದೆ.
ಸಮಾಜಕ್ಕೆ ತುಂಬಲಾರದ ನಷ್ಟ
ಮಾಗಡಿ: ಆರ್ಯ  ವೈಶ್ಯ ಸಮಾಜದ ಕುಲ ಗುರುಗಳಾದ ವಾಸವಿ  ವಿಶ್ವ ಕುಲಪೀಠಾಧಿಪತಿಗಳಾದ ಚಂದ್ರಶೇಖರಾನಂದಗಿರಿ ಸ್ವಾಮೀಜಿ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಇಲ್ಲಿನ ಆರ್ಯ ವೈಶ್ಯ ಕುಲಬಾಂಧವರು ಶ್ರೀಗಳವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಎಸ್.ಎನ್. ನಟರಾಜು, ಕಾರ್ಯದರ್ಶಿ ಆರ್.ಸಿ. ಲಕ್ಷ್ಮೀನಾರಾಯಣ್, ಪುರಸಭಾ ಸದಸ್ಯ ಕೆ.ವಿ. ಬಾಲು, ವಾಸವಿ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ಎಸ್.ಜಿ. ರಮೇಶ್ ್ಗುಪ್ತಾ, ಮುಖಂಡರಾದ ಅರುಣ್‌ಕುಮಾರ್, ಬಿ.ಎನ್.ಸತೀಶ್, ಎಸ್.ಎನ್. ದೀಪು, ಎಸ್. ಸುನೀಲ್, ಎಸ್. ರವಿಕುಮಾರ್, ಕೆ.ವಿ. ವೆಂಕಟಾಚಲಪತಿ, ಎನ್. ಕೇಶವಮೂರ್ತಿ, ಆಂಜನೇಯಗುಪ್ತಾ, ಬಿ.ಎಲ್. ಶಂಕರ್, ರಂಗನಾಥ್ ಗುಪ್ತಾ, ಪ್ರಸಾದ್, ಎಸ್. ಶಂಕರ್, ಮೀನಾ ಸುಧೀರ್, ಲೇಖಕಿ ವಿಜಯಾ ನಾಗೇಶ್ ಇತರರು  ಇದ್ದರು.
ಎಂಇಎಸ್ ಶಾಸಕರ ಭೂತದಹನ ಇಂದು
ದೊಡ್ಡಬಳ್ಳಾಪುರ: ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಾ ಭಾಷಾ ವೈಷಮ್ಯ ಬಿತ್ತುವ ದುಸ್ಸಾಹಸ ಮಾಡುತ್ತಿರುವ ಎಂಇಎಸ್‌ನ ಶಾಸಕ ಸಂಭಾಜಿ ಪಾಟೀಲ್ ಭೂತದಹನ ಕಾರ್ಯಕ್ರಮ ಇಲ್ಲಿನ ಶ್ರೀಭುವನೇಶ್ವರಿ ಕನ್ನಡ ಸಂಘ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಮತ್ತು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನ.28ರ ಗುರುವಾರ ಸಂಜೆ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಲ್ಲಿ ನಡೆಯಲಿದೆ. ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಾಲಿಬಾಲ್ ಪಂದ್ಯಾವಳಿ
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಕಾಲೋನಿಯ ಜಿ.ಸತೀಶ್ ವಾಲಿಬಾಲ್ ಕ್ಲಬ್ ಮತ್ತು ವಿದ್ಯಾ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ.30 ಮತ್ತು ಡಿ.1ರಂದು ರಾಜ್ಯ ಮಟ್ಟದ ಮೊದಲ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರಥಮ ಬಹುಮಾನವಾಗಿ 25 ಸಾವಿರ, 2ನೇ ಬಹುಮಾನವಾಗಿ 15 ಸಾವಿರ ಮತ್ತು ಟ್ರೋಫಿಗಳನ್ನು ನೀಡಲಾಗುವುದು. ರಾಜ್ಯದ ಯಾವುದೇ ತಂಡ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪಂದ್ಯಾವಳಿ ಟಿಟಿ ಸೆಟ್ ಸ್ಕೋರ್‌ಗಳಿಂದ ಕೂಡಿದ್ದು, ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ವಿವರಗಳಿಗೆ 991662266, 9739500501 ಸಂಪರ್ಕಿಸಬಹುದು ಎಂದು  ಕೆ.ಎಸ್.ಗಿರೀಶ್ ತಿಳಿಸಿದ್ದಾರೆ.
ದಾಸರ ಕೀರ್ತನೆ ಎಲ್ಲರೂ ಅರ್ಥೈಸಿಕೊಳ್ಳಿ: ರುದ್ರೇಶ್‌ಮೂರ್ತಿ
ವಿಜಯಪುರ: ಕನಕದಾಸರು ಅಂದಿನ ಕಾಲದಲ್ಲಿ ರಚಿಸಿರುವ ಕೃತಿಗಳು ಇಂದಿಗೂ ಜಗಜ್ಜಾಹೀರವಾಗಿದ್ದು, ಕರ್ನಾಟಕ ಸಂಗೀತಕ್ಕೂ ಕನ್ನಡ ಸಾಹಿತ್ಯಕ್ಕೂ ಅಪಾರ ಕೊಡುಗೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ಗ್ರಾ. ಜಿಲ್ಲಾ ಉಪಾಧ್ಯಕ್ಷ ಪ್ರಾಧ್ಯಾಪಕ ರುದ್ರೇಶ್‌ಮೂರ್ತಿ ಹೇಳಿದರು. ಇವರು ಶಿಕ್ಷಕ ವೆಂಕಟಾಚಲಯ್ಯನವರ ಮನೆಯಂಗಳದಲ್ಲಿ ತಾ. ಕಸಾಪ ವತಿಯಿಂದ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾ. ಕಸಾಪ ಅಧ್ಯಕ್ಷ ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಬೆಂ.ಗ್ರಾ. ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 2ನೇ ವಾರ್ಡಿನ ಪುರಸಭಾ ಸದಸ್ಯ ಭಾಸ್ಕರ್, ಜಿಪಂ ಮಾಜಿ ಸದಸ್ಯ ಬಸವರಾಜು ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಕೆ. ಮುನಿರಾಜು, ಸಿಆರ್‌ಸಿ ಚಂದ್ರಶೇಖರ್, ಶಿಕ್ಷಕ ಸೋಮಶೇಖರ, ತಾ. ಕಾರ್ಯದರ್ಶಿಗಳಾದ ವಿ.ಎನ್. ರಮೇಶ್, ಚಂದ್ರಶೇಖರ್ ಹಡಪದ್, ಟೌನ್ ಅಧ್ಯಕ್ಷ ಮುನಿವೀರಣ್ಣ, ಶಿಕ್ಷಕ ಗೋವಿಂದಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.