ಬೆಂಗಳೂರು ಗ್ರಾಮಾಂತರ

ಸ್ವಾವಲಂಬಿ ಮಹಿಳಾ ಚಿಂತನೆ ಗಟ್ಟಿಗೊಳ್ಳಬೇಕು

Published On :
ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳೆಯರ ಶೈಕ್ಷಣಿಕ, ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸಿದ ಕಮಲಾದೇವಿ ಚಟ್ಟೋಪಾಧ್ಯಾಯ ಇಂದಿನ ಸಮಾಜಕ್ಕೆ ಮಾದರಿ ಎಂದು ಲೇಖಕಿ ಡಾ.ಗೀತಾ ಶೆಣೈ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ಅನಿಬೆಸೆಂಟ್ ಮತ್ತಿತರರೊಡಗೂಡಿ ವುಮನ್ ಇಂಡಿಯಾ ಅಸೋಸಿಯೇಷನ್ ಸಂಸ್ಥೆ ಆರಂಭಿಸಿ, ಮಹಿಳಾ ಶೋಷಣೆಯ ವಿರುದ್ಧ ದನಿಯೆತ್ತಿದರು. ನಿರಾಶ್ರಿತ ಮಹಿಳೆಯರು ಸಹಕಾರಿ ಸಂಘಟನೆಗಳ ಮೂಲಕ ಸಹಕಾರ ತತ್ವದಡಿಯಲ್ಲಿ ಉದ್ಯಮ ನಡೆಸಲು ಮಾರ್ಗದರ್ಶಕರಾದರು. ಪಾರಂಪರಿಕ ಕಲೆ, ಕಸುಬುಗಳ ಮೂಲಕ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವ ಅಖಿಲ ಭಾರತ ಕರಕುಶಲ ಮಂಡಲಿ ಅಸ್ತಿತ್ವಕ್ಕೆ ತಂದರು ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ಕೆ.ಎಂ.ವಿಜಯಲಕ್ಷ್ಮಿ, ಮಹಿಳೆಯರಿಗೆ ಬೇಕು ಹೊಸ ಚಿಂತನ ಕ್ರಮ ಕುರಿತು ಮಾತನಾಡಿ, ಮನೆಯ ಹಂತದಲ್ಲೇ ಸಮಾನ ಕೆಲಸ, ಸಮಾನ ದೃಷ್ಟಿಕೋನ ಬೆಳೆಸಿಕೊಳ್ಳುವ ಧೋರಣೆ ಬೆಳೆಯಬೇಕು. ಅವಶ್ಯಕತೆಗಳಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮಹಿಳಾ ಸಮಾನತೆಗೆ ಹೆಚ್ಚಿನ ಒತ್ತು ನೀಡಬೇಕು. ತಂತ್ರಜ್ಞಾನ ಮಹಿಳಾ ಸ್ನೇಹಿಯಾಗಿರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸಂಚಾಲಕಿ ಕೆ.ಎಸ್.ಪ್ರಭಾ, ಸ್ಥಳೀಯ ಹಂತದಿಂದ ಹಿಡಿದು ಉನ್ನತ ಹಂತದವರೆಗೆ ಚಿಂತನೆಗಳು ಗಟ್ಟಿಗೊಳ್ಳಬೇಕು. ಬದುಕಿನ ಆಲೋಚನಾ ಕ್ರಮಗಳು ಬದಲಾಗಬೇಕು. ಕುಟುಂಬ, ಸಮಾಜ, ಆರೋಗ್ಯ, ಆಡಳಿತ ಸೇರಿದಂತೆ ಎಲ್ಲ ಹಂತಗಳಲ್ಲಿ ಇರುವ ಲಿಂಗ ಅಸಮಾನತೆ ತೊಡೆದುಹಾಕುವ ಮಹತ್ವದ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಸ ಸ್ಫೂರ್ತಿ ತುಂಬುವ ಕೆಲಸ ಆಗಬೇಕು ಎಂದರು.
ಮಹಿಳಾ ಸಮಾಜದ ಅಧ್ಯಕ್ಷೆ ಎಲ್.ಸಿ.ದೇವಕಿ, ಕಾರ್ಯದರ್ಶಿ ವತ್ಸಲಾ, ಗ್ರಾಮೀಣ ಅಭ್ಯುದಯ ಸಂಸ್ಥೆ ಕಾರ್ಯದರ್ಶಿ ಅಮಲಿನಾಯಕ್, ಸುಭದ್ರ, ಗೌರಮ್ಮ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಎನ್.ಸಿ.ಲಕ್ಷ್ಮೀ ಸೇರಿದಂತೆ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.