ಬೆಂಗಳೂರು ಗ್ರಾಮಾಂತರ

ರಾಜಕೀಯಕ್ಕೆ ಸಿದ್ದಯ್ಯ

Published On :

ಕೆರೆ ಮಂಜುನಾಥ್
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ರಾಜಕಾರಣಕ್ಕೆ ಪ್ರವೇಶ. ಕೋಲಾರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ.
ಇಲ್ಲ ಇನ್ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲ. ಎಲ್ಲ ರೀತಿ ಊಹಾಪೋಹಗಳಿಗೂ ತೆರೆ ಬಿದ್ದಿದ್ದು, ಸಿದ್ದಯ್ಯ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವವನ್ನೂ ಭಾನುವಾರ ಪಡೆದುಕೊಂಡಿದ್ದಾರೆ.
ಮೂರು ಮುಖ್ಯಮಂತ್ರಿಗಳು ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಐಎಎಸ್ ಅಧಿಕಾರಿ ಸಿದ್ದಯ್ಯ ಸರ್ಕಾರಿ ಸೇವೆಯಲ್ಲಿ 37 ವಸಂತಗಳನ್ನು ಸವೆಸಿದ್ದಾರೆ. ನಿವೃತ್ತಿಯ ಕಡೆಯ ವರ್ಷದಲ್ಲಿ ಅವರು ರಾಜಕೀಯ ಪ್ರವೇಶ ಖಾತರಿ ಎಂಬ ವದಂತಿಗಳು ಸಾಕಷ್ಟಿದ್ದವು. ಮಗ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬುದಿತ್ತು. ಆದರೆ, ಅದನ್ನು ಅವರ ದಿಟ್ಟ ದಾಟಿಯಲ್ಲೇ ನಿರಾಕರಿಸಿದ್ದರು. ಇಷ್ಟಾದರೂ ಕಳೆದ ಮೂರು ವಾರದಲ್ಲಿ ಆದ ಬೆಳವಣಿಗೆ ಅವರನ್ನು ರಾಜಕೀಯಕ್ಕೆ ಎಳೆದುತಂದಿದೆ.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿದ್ದಾಗ ಸಿದ್ದಯ್ಯ ರಾಜಕೀಯದಲ್ಲಿನ ಬೆಳವಣಿಗೆಳನ್ನು ಸಮೀಪದಿಂದ ಕಂಡುಕೊಂಡಿದ್ದರು. ಕೆಲವು ರಾಜಕೀಯ ಸಲಹೆಯೂ ಇವರಿಂದಲೇ ಬರುತ್ತಿತ್ತು. ಆದರೆ, ಇವರು ಜನಾನುರಾಗಿಯಾಗಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದಾಗ. ಅತೀವ ಸಂಕಷ್ಟದಲ್ಲಿದ್ದ ಬಿಬಿಎಂಪಿಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕೆಂಬ ಮನೋಭಿಲಾಷೆ ಸಿದ್ದಯ್ಯ ಅವರನ್ನು ಜನಪ್ರಿಯಗೊಳಿಸಿತ್ತು. ಪ್ರತಿದಿನ ಅದೆಷ್ಟೇ ಕಾರ್ಯಒತ್ತಡ ಇದ್ದರೂ ನೂರಾರು ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದರು. ರಸ್ತೆ, ಕಸ, ನೀರು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜನರು ಆಯುಕ್ತರನ್ನು ನೇರವಾಗಿ ಸಂಪರ್ಕಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಸಿದ್ದಯ್ಯ. ಎರಡನೇ ಬಾರಿಗೆ ಆಯುಕ್ತರಾಗಿ ಬಂದಾಗಲೂ ಸೇವೆಯ ಅಂತಿಮ ತಿಂಗಳುಗಳಲ್ಲಿದ್ದರು. ಆಗಲೂ ಅವರು ಸಾರ್ವಜನಿಕರಿಗೆ ಹತ್ತಿರರಾದರು. ನೈಟ್ ಟೆಂಡರ್, ಅನಗತ್ಯ ಕಾಮಗಾರಿಗಳ ಸ್ಥಗಿತದಿಂದ ನೂರಾರು ಕೋಟಿ ಬಿಬಿಎಂಪಿಗೆ ಉಳಿಸಿದ್ದು ಸಿದ್ದಯ್ಯ ಸಾಧನೆ.
ಇಷ್ಟಾದರೂ ನಿವೃತ್ತಿಯ ಅಂಚಿಗೆ ಬಂದಾಗಲೂ ರಾಜಕೀಯ ಸೇರುತ್ತೀರಂತೆ ಎಂದಾಗ ಹೌಹಾರಿ ಬೀಳುತ್ತಿದ್ದರು. ನಿವೃತ್ತಿಯಾದ ಏಳು ತಿಂಗಳುಗಳ ನಂತರ ಅವರ ಮನವರಿವರ್ತನೆಯಾಗಿದೆ. ರಾಜಕೀಯ ಸೇರುವುದೇ ಬೇಡ ಎಂಬ ಅವರ ಭಾವ ಕಳೆದ ಮೂರು ವಾರದಲ್ಲಿ ಬದಲಾಗಿದೆ. ಸರ್ಕಾರಿ ಸೇವೆಯಂತೆ ರಾಜಕೀಯವೂ ಜನಸೇವೆ ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನದಟ್ಟು ಮಾಡಿಕೊಟ್ಟಿದ್ದಾರೆ. ಅದಕ್ಕೇ ರಾಜಕೀಯಕ್ಕೆ ಕಾಲಿರಿಸಿದ್ದಾರೆ. ರಾಜಕಾರಣಿಯಾಗಿರುವ ಸಿದ್ದಯ್ಯ ತಮ್ಮ ಪ್ರಪ್ರಥಮ ಅನಿಸಿಕೆಯನ್ನು 'ಕನ್ನಡಪ್ರಭ'ದೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ.
ಜೆಡಿಎಸ್ ಸೇರಿಕೊಂಡಿದ್ದೇನೆ, ಕೋಲಾರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದೇನೆ. ಇನ್ನಾವುದೇ ಅನುಮಾನಗಳು ಬೇಡ. ಜೆಡಿಎಸ್ನಿಂದ ಸಾಕಷ್ಟು ದಿನದಿಂದ ಒತ್ತಡ ಬರುತ್ತಿತ್ತು. ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ. ಏಳು ತಿಂಗಳಿನಿಂದ ಕೃಷಿಕನಾಗಿದ್ದೆ. ಆದರೆ, ಕಳೆದ ಮೂರು ವಾರಗಳಲ್ಲಿ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದ ಅನಿವಾರ್ಯತೆ ಮನದಟ್ಟು ಮಾಡಿಕೊಟ್ಟರು. ಅವರ ಪ್ರೇರಣೆಯೇ ರಾಜಕೀಯಕ್ಕೆ ಬರಲು ಕಾರಣ. ರಾಜಕಾರಣ ಸೇರುವ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಚಿಂತಿಸಿದ್ದೇನೆ.
ಸಾಕಷ್ಟು ಐಎಎಸ್-ಐಪಿಎಸ್ ಅಧಿಕಾರಿಗಳು ರಾಜಕಾರಣಕ್ಕೆ ಬಂದಿದ್ದಾರೆ. ನಿವೃತ್ತಿಯಾದ ಮೇಲೆ 7 ತಿಂಗಳಲ್ಲಿ ಅವರ ಎಲ್ಲ ಅನುಭವಗಳನ್ನು ವಿಮರ್ಶೆ ಮಾಡಿದ್ದೇನೆ. ಅಧಿಕಾರದಲ್ಲಿ ಅನುಭವಿಸಿದ ಹುದ್ದೆಯ ದರ್ಪದ ಮೈಂಡ್ಸೆಟ್ ಅಥವಾ ಆ ಭ್ರಮೆಯನ್ನು ರಾಜಕಾರಣಕ್ಕೆ ಬಂದಮೇಲೆ ಬಿಟ್ಟುಬಿಡಬೇಕು ಎಂದು ನಿರ್ಧರಿಸಿದ್ದೇನೆ. ವೈಯಕ್ತಿಕವಾಗಿ ಯಾವುದೆ ಬೈಂಡಿಂಗ್ಸ್ ಇಲ್ಲ. ನಾನು ಪ್ರಾಮಾಣಿಕವಾಗಿ ನಿಷ್ಪಕ್ಷವಾಗಿ ನಡೆದುಕೊಳ್ಳುವ ವ್ಯಕ್ತಿ. ನೇರ ನಡೆ-ನುಡಿಯ ವ್ಯಕ್ತಿತ್ವ ರಾಜಕಾರಣದಲ್ಲೂ ಮುಂದುವರಿಯುತ್ತದೆ.
ಜೆಡಿಎಸ್ ಏಕೆ ಎಂಬ ಪ್ರಶ್ನೆಗೆ ಉತ್ತರ ಇದೆ. ನಾನು ಜಾತ್ಯತೀತದಲ್ಲಿ ನಂಬಿಕೆ ಇಟ್ಟುಕೊಂಡವನು. ಜೆಡಿಎಸ್ ಜಾತ್ಯತೀತ ಪಕ್ಷ. ನನ್ನ ಅಧಿಕಾರ ಅವಧಿಯಲ್ಲಿನ ಟ್ರ್ಯಾಕ್ ರೆಕಾರ್ಡ್ ನೋಡಿ ಪಕ್ಷದ ವರಿಷ್ಠರು ಗುರುತಿಸಿದರು. ರೈತರ ಪರವಾಗಿ ಕೆಲಸ ಮಾಡುವ ಪಕ್ಷದಲ್ಲಿ ಕೃಷಿಕನಾಗಿರುವ ನಾನು ಅವರ ಹೋರಾಟಕ್ಕೆ
ಬೆಂಬಲವಾಗಬೇಕು ಎಂದುಕೊಂಡಿದ್ದೇನೆ. ಮೂವರು ಮುಖ್ಯಮಂತ್ರಿ-ಇಬ್ಬರು ಉಪಮುಖ್ಯಮಂತ್ರಿಯೊಂದಿಗೆ 8 ವರ್ಷ ಕೆಲಸ ಮಾಡಿದಾಗ ರಾಜಕೀಯ ಹಲವು ವಿಷಯಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ರಾಜಕೀಯ ಸಲಹೆಯನ್ನೂ ನೀಡಿದ್ದೇನೆ. ರಾಜಕಾರಣಿಗಳ ನಡೆ-ನುಡಿಯ ಅನುಭವವೂ ಇದೆ.



ಕೋಲಾರವೇ ಏಕೆ?
ನಾನು ಕೋಲಾರದವನಲ್ಲ. ಆದರೆ, ಕೋಲಾರದ ಎಲ್ಲ ವಿಷಯಗಳೂ ನನಗೆ ಗೊತ್ತು. ಕೋಲಾರದ ಜನತೆ ಅನುಭವಿಸಿತ್ತಿರುವ ಮೂಲ ನೀರಿನ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕೊಡಿಸುವುದೇ ನನ್ನ ಮೂಲೋದ್ದೇಶ. ಕೋಲಾರ ಕೃಷಿ ಹಾಗೂ ತೋಟಗಾರಿಕೆಗೆ ಹೆಸರುವಾಸಿ. ಮೂಲತಃ ಕೃಷಿಕನಾಗಿರುವುದರಿಂದ ರೈತರ ಸಮಸ್ಯೆಯ ಅರಿವಿದೆ. ನನ್ನಿಂದ ಯಾರಿಗೂ ತೊಂದರೆ-ತಲೆನೋವು ಆಗುವುದಿಲ್ಲ. ಆದರೆ, ಜನ ನೆಮ್ಮದಿಯ ಜೀವನ ನಡೆಸಲು ನಾನು ಪ್ರಯತ್ನಿಸುತ್ತೇನೆ. ಕೋಲಾರದಲ್ಲಿ ನನಗೆ ಸಾವಿರಾರು ಸ್ನೇಹಿತರಿದ್ದಾರೆ. ನೂರಾರು ಸಂಬಂಧಿಕರಿದ್ದಾರೆ. ಕೋಲಾರದ ಎಲ್ಲ ನಾಯಕರೊಂದಿಗೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳುತ್ತೇನೆ. ಕೋಲಾರದಲ್ಲೇ ತಾವು ಸ್ಪರ್ಧಿಸಬೇಕು ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಿ ಈ ಜವಾಬ್ದಾರಿಯನ್ನು ಮನೆಯ ಮಗನಾಗಿ ಕಾರ್ಯನಿರ್ವಹಿಸುತ್ತೇನೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.