ಬೆಂಗಳೂರು ಗ್ರಾಮಾಂತರ

ಉದ್ಯಮಿ ಕೃಷ್ಣಪ್ಪ ಹತ್ಯೆ

Published On :

ಬೆಂಗಳೂರು/ಚನ್ನಪಟ್ಟಣ: ನಾಗರಬಾವಿ ಎರಡನೇ ಹಂತ ಐಟಿಐ ಬಡಾವಣೆಯಿಂದ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಪ್ಪ(46) ಅವರನ್ನು ಹತ್ಯೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ವೃಷಭಾವತಿ ನಗರ ನಿವಾಸಿಯಾಗಿದ್ದ ಕೃಷ್ಣಪ್ಪ ಮಂಗಳವಾರ ಬೆಳಗ್ಗೆ ಬ್ಯಾಡ್ಮಿಟನ್ ಆಡಲು ಬಂದಾಗ ಮೂರಿಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಮ್ಮ ಕಾರಿನಲ್ಲಿ ಅಪಹರಣ ಮಾಡಿದ್ದರು.
ಚನ್ನಪಟ್ಟಣದ ಸಾತನೂರು ರಸ್ತೆಯ ಕಣ್ವ ಅರ್ಕಾವತಿ ಬಡಾವಣೆಯ ಮೋರಿಯಲ್ಲಿ ಬುಧವಾರ ಸಂಜೆ ಮೃತದೇಹ ಪತ್ತೆಯಾಗಿದೆ. ಕೃಷ್ಣಪ್ಪ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿ, ಮೋರಿಯಲ್ಲಿ ಮೃತದೇಹ ಎಸೆದುಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ದುಷ್ಕರ್ಮಿಗಳು ಅಪಹರಣಕ್ಕೆ ಬಳಸಿದ್ದ ಇನೋವಾ ಕಾರು(ಕೆಎ 06, ಎಂ 4529) ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು, ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.
ಆರೋಪಿಗಳು ಅಪಹರಿಸಿದ ಕಾರನ್ನು ಕೊಮ್ಮಘಟ್ಟದ ಬಳಿ ಬಿಟ್ಟು ನಂತರ ಕೃಷ್ಣಪ್ಪ ಅವರನ್ನು ಬೇರೊಂದು ವಾಹನದಲ್ಲಿ ಕರೆದೊಯ್ದಿದ್ದಾರೆ.       

ಕೃಷ್ಣಪ್ಪ ಅವರ ಎದೆ, ಹೊಟ್ಟೆ, ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಇರಿದಿದ್ದು, ಕಾರಿನ ಮಾಲೀಕರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಂಗಳವಾರವೇ ಅವರನ್ನು ಕೊಲೆ ಮಾಡಿದ ದುಷ್ಕರ್ಮಿಗಳು ರಾತ್ರಿ ಮೋರಿಯಲ್ಲಿ ಎಸೆದಿರಬಹುದು ಎಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.
ಸ್ಥಳೀಯರಿಂದ ಮಾಹಿತಿ: ಮೋರಿಯಲ್ಲಿ ಮೃತದೇಹ ಕಂಡ ಸ್ಥಳೀಯರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅನುಮಾನ ಬಂದು ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರನ್ನು ಸಂಪರ್ಕಿಸಿದರು.
ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆ ಪೊಲೀಸರಿಗೆ ಮೃತದೇಹ ಕೃಷ್ಣಪ್ಪ ಅವರದ್ದು ಎಂಬುದನ್ನು ಖಚಿತಪಡಿಸಿಕೊಂಡು, ಮೃತದೇಹ ವಶಕ್ಕೆ ತೆಗೆದುಕೊಂಡಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಕೃಷ್ಣಪ್ಪರ ಮೃತದೇಹ ಪತ್ತೆಯಾಗಿರುವ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ  ಮೃತರ ಹಿರಿಯ ಪತ್ನಿಯ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿರಿಯ ಪತ್ನಿಯ ಸಹವಾಸ ಮಾಡಿ ಕೃಷ್ಣಪ್ಪ ಕೊಲೆಯಾಗಿದ್ದಾರೆಂದು ಮೃತರ ಸ್ನೇಹಿತರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಿರಿಯ ಪತ್ನಿ ಕೈವಾಡದ ಶಂಕೆ:  ಎರಡು ವಿವಾಹವಾಗಿದ್ದ ಕೃಷ್ಣಪ್ಪ, ಇಬ್ಬರು ಪತ್ನಿಯರಿಂದಲೂ ದೂರವಿದ್ದರು. ಆಸ್ತಿಯೊಂದನ್ನು ತನ್ನ ಹೆಸರಿಗೆ ಬರೆಯಬೇಕೆಂದು ಎರಡನೇ ಪತ್ನಿ ವೃಂದಾ ಅವರು ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ಹಾಗಾಗಿ ವೃಂದಾ ಬಸವನಗುಡಿ ಮಹಿಳಾ ಠಾಣೆಯಲ್ಲಿ ಕೃಷ್ಣಪ್ಪನ ವಿರುದ್ಧ ದೂರು ನೀಡಿದ್ದರು.
ಈ ನಡುವೆ ಮೊದಲ ಪತ್ನಿ ಸುನಿತಾ ಮನೆಗೆ ಹೋಗಿ ಮಕ್ಕಳನ್ನು ಮಾತನಾಡಿಸಿಕೊಂಡು ಬರುತ್ತಿದ್ದರು. ಈ ವಿಷಯವಾಗಿ ಮತ್ತೆ ಪತಿ ಜತೆ ಜಗಳ ತೆಗೆದ ವೃಂದಾ, ಮಂಡ್ಯದಲ್ಲಿರುವ ಸಹೋದರರಿಗೆ ವಿಷಯ ತಿಳಿಸಿದ್ದರು. ವೃಂದಾರ ಸಹೋದರ ಹಲವು ಬಾರಿ ಕೃಷ್ಣಪ್ಪ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದರು. ಹಾಗಾಗಿ ಅವರ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.