ಸಂಭ್ರಮದ ಶಿವರಾತ್ರಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದೆಲ್ಲೆಡೆ ಗುರುವಾರ ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಇಲ್ಲಿನ ಶಿವದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ವಿಶೇಷಾಲಂಕಾರ ಏರ್ಪಡಿಸಿದ್ದದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಗಳಿಗೆ ಭೇಟಿ ನೀಡಿ ಭಕ್ತಿಭಾವ ಮೆರೆದರು.
ನಗರೇಶ್ವರ ದೇಗುಲ: ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದಲೂ ಭಕ್ತರು ತಂಡೋಪತಂಡವಾಗಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀಸ್ವಾಮಿಯ ದರ್ಶನ ಪಡೆದರು. ಹಬ್ಬದ ಅಂಗವಾಗಿ ದೇವಾಲಯದ ಮೂಲದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿರುವ ಶ್ರೀನಗರೇಶ್ವರ ಲಿಂಗಕ್ಕೆ ಕೈಲಾಸ ಪರ್ವತ ಮತ್ತು ವಜ್ರಾಂಗಿ ಅಲಂಕಾರ, ಪಾರ್ವತಿ ಮಾತೆಗೆ ಮುತ್ತಿನ ಅಲಂಕಾರ ಮತ್ತು ಗಣಪತಿಗೆ ವಿಶೇಷಾಲಂಕಾರ ಏರ್ಪಡಿಸಲಾಗಿತ್ತು.
ಸ್ವಯಂಭುವೇಶ್ವರ ದೇಗುಲ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಸ್ವಯಂಭುವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸುಮಾರು 10 ಶತಮಾನಗಳಷ್ಟು ಹಳೆಯದಾದ ಈ ದೇಗುಲದಲ್ಲಿರುವ ಉದ್ಭವ ಲಿಂಗಕ್ಕೆ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಪ್ರತಿವರ್ಷದಂತೆ ಬೆಳಗ್ಗಿನಿಂದ ಸಂಜೆಯವರೆಗೂ ಶಿವರಾತ್ರಿ ವಿಶೇಷ ಪೂಜಾದಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಸಾವಿರಾರು ಭಕ್ತರು ಉದ್ಭವ ಲಿಂಗದ ದರ್ಶನ ಪಡೆದರು.
ಚಂದ್ರಮೌಳೇಶ್ವರ ದೇಗುಲ: ಇಲ್ಲಿನ ತೇರಿನಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿಯೂ ಮಹಾಶಿವರಾತ್ರಿ ಅಂಗವಾಗಿ ಅನೇಕ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿರುವ ಶಿವಲಿಂಗ, ಪಾರ್ವತಿದೇವಿ, ಗಣಪತಿ ಮತ್ತು ಸೂರ್ಯನಾರಾಯಣಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
ಕಾಶಿ ವಿಶ್ವೇಶ್ವರ ದೇಗುಲ: ಇಲ್ಲಿನ ಡಿಕ್ರಾಸ್ ರಸ್ತೆಯಲ್ಲಿರುವ ಕಾಶಿವಿಶ್ವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಹೋಮ, ಪೂರ್ಣಾಹುತಿ ಕಾರ್ಯಕ್ರಮಗಳು ನಡೆದವು. ಮಹಿಳೆಯರು ವಿಶೇಷ ಹರಕೆ ತೀರಿಸಲು ನಿಂಬೆಹಣ್ಣಿನ ದೀಪ ಹಚ್ಚಿ ಆರತಿ ಬೆಳಗಿದರು. ಅದೇ ರೀತಿ ದೊಡ್ಡಬಳ್ಳಾಪುರ ನಗರದಲ್ಲಿರುವ ಬಸವಣ್ಣ ದೇವಾಲಯ, ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯ, ಬಯಲು ಬಸವಣ್ಣ ದೇವಾಲಯ, ವಿನಾಯಕ ದೇವಾಲಯ, ಅಭಯಚೌಡೇಶ್ವರಿ ದೇಗುಲ, ಕಾಳಿಕಾ ಕಮಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಾಟಾಗಿದ್ದವು. ಸಂಜೆಯ ನಂತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಮಹಿಳೆಯರು ವಿಶೇಷವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿದ್ದವು.
ಶಿವರಾಧನೆ: ಇಲ್ಲಿನ ಕೆ.ವಿ.ನಾರಾಯಣ್ ಟೌನ್‌ಷಿಪ್‌ನಲ್ಲಿರುವ ಸುಮಾರು 45 ಅಡಿ ಎತ್ತರದ ಬೃಹತ್ ಹಿಮಾದ್ರಿ ತಪಸ್ವಿ ಶಿವನ ಮೂರ್ತಿಗೆ ಮಹಾಶಿವರಾತ್ರಿ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆದವು. ನೂರಾರು ಜನ ಶಿವನ ಬೃಹತ್ ಮೂರ್ತಿಗೆ ಪೂಜೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

