ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ರಾಷ್ಟ್ರಕವಿ ಕುವೆಂಪು ಸಮಾನತೆಯ ಹರಿಕಾರ: ಜಿಗಣಿ ಶಂಕರ್
ಕ.ಪ್ರ. ವಾರ್ತೆ, ಆನೇಕಲ್ಲು, ಜ.1
ರಾಷ್ಟ್ರಕವಿ ಕುವೆಂಪು ಅವರು ಸರ್ವರಿಗೂ ಸಮಬಾಳು-ಸಮಪಾಲು ತತ್ವದಲ್ಲಿ ನಂಬಿಕೆಯಿಟ್ಟಿದ್ದರು. ಅವರ ಆದರ್ಶ, ಕಾವ್ಯ, ಸಾಹಿತ್ಯ ಇಂದಿಗೂ ಜೀವಂತವಾಗಿದೆ ಎಂದು ಪ್ರಕಾಶಕ ಹಾಗೂ ಸಾಹಿತಿ ಜಿಗಣಿ ಶಂಕರ್ ತಿಳಿಸಿದ್ದಾರೆ.
 ಅವರು ಬೆಂಗಳೂರು ದಕ್ಷಿಣ ಜಿಗಣಿ ಎಪಿಸಿ ವೃತ್ತ ಕಾವೇರಪ್ಪ ಸಭಾಂಗಣದಲ್ಲಿ  ಪ್ರಜ್ವಲ್ ಪ್ರಕಾಶನ ಹಾಗೂ ಜೇನುಗೂಡು ಸಾಹಿತ್ಯ ವೇದಿಕೆ ಏರ್ಪಡಿಸಿದ್ದ  ಕುವೆಂಪು  ಅವರ 109ನೆಯ ಜನ್ಮ ದಿನಾಚರಣೆ ಹಾಗೂ ಛತ್ರಪತಿ ಸಾಹು ಮಹರಾಜ್ ಅವರು ಕನ್ನಡ ಅನುವಾದಿತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ  ಕುವೆಂಪು ಅವರು ಪ್ರಕೃತಿಯ ಆರಾಧಕರಾಗಿದ್ದು
ಅವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
 ಸ್ವಾಂತಂತ್ರ್ಯ ಪೂರ್ವದಲ್ಲಿ ಸಮಾಜದ ಕೆಳ ಸ್ಥರದ ಜನರ ಜೀವನ ಶೈಲಿಯನ್ನು ಚಿತ್ರಿಸುವ ಮೂಲಕ ಸಮಾನತೆ ಮೂಡಿಸಿ ಪರಿವರ್ತನೆ ಕಾಣಲು ಸುಧಾರಣಾ ಕ್ರಮಗಳನ್ನು ತಿಳಿಸಿದ್ದಾರೆ ಎಂದರು.
 ವಿಮರ್ಶಕ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ ವಿಶ್ವ ಮಾನವತೆ ಪ್ರತಿಪಾದಕ ಕುವೆಂಪು ಅವರು ಸಮಾಜದ ಸಾಕ್ಷಿ ಪ್ರಜ್ಞೆಯ ಪ್ರತಿ ರೂಪಕ ಬಿಂಬಿಸುವ ಆಯಸ್ಕಾಂತವಾಗಿದ್ದರು.
 ಅವರ ಕೃತಿಗಳಲ್ಲಿ ವೈಚಾರಿಕತೆಯ ಜೊತೆಗೆ ವೈಜ್ಞಾನಿಕ ವಿಶ್ಲೇಷಣೆಗಳೂ ಜರಿಯಂತೆ ಹರಿಯುತ್ತವೆ. ಹಳಗನ್ನಡದ ಶ್ರೀ ರಾಮಾಯಣ ದರ್ಶನಂ ಕೃತಿಗಳ ಸಾಲಿನಲ್ಲಿ ಧ್ರುವತಾರೆಯಂತೆ ನಿಂತು ಪ್ರೌಢಿಮೆಯ ಗೌರಿಶಂಕರವಾಗಿದೆ. ಕಥೆ, ಕವನ, ನಾಟಕ ಹಾಗೂ ಕಾದಂಬರಿಗಳ ರಚನೆ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಸ್ಥಾವರವಾಗಿದ್ದಾರೆ ಎಂದರು.
 ವಿಮರ್ಶಕ ಕೆ.ಎಸ್. ಭಗವಾನ್ ಮಾತನಾಡಿ ಸಾಹು ಮಹರಾಜ್ ದಲಿತರು ಹಾಗೂ ಹಿಂದುಳಿದವರ ಪರವಾಗಿ ಮೃದು ಧೋರಣ ತಳೆದು ತಳ ಸಮುದಾಯದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಏಕೈಕ ಮಹಾರಾಜರಾಗಿದ್ದರು. ಅಂಬೇಡ್ಕರ್ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಶೋಷಿತರ ಬಾಳಿಗೆ ಬೆಳಕನ್ನು ನೀಡಿದ ಮಹಾನ್ ತ್ಯಾಗಿ ಎಂದು ಬಣ್ಣಿಸಿದರು.
 ಹುಲಿಕೆರೆ ಮಹದೇವ್ ಮಾತನಾಡಿ ಜನರು ದೂರದರ್ಶನ ವೀಕ್ಷಣೆಯಿಂದ ದೂರ ಉಳಿದು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕೋರಿದರು.
 ಪ್ರಾಧ್ಯಾಪಕ ಮಾಯಿಗೌಡ, ಜೇನುಗೂಡು ಸಾಹಿತ್ಯ ವೇದಿಕೆಯ ತಾ.ಸಿ. ತಿಮ್ಮಯ್ಯ, ಕವಿಯಿತ್ರಿ ಶ್ರೀಲತಾ, ರಂಗ ವಿಮಶಂಕ ಎಆರ್‌ಜಿ ಸ್ವಾಮಿ, ಮಧುಸೂದನ್, ಹೊಸಬೆಳಕು ಟ್ರಸ್ಟ್ ಜಿಗಣಿ ರಾಮಕೃಷ್ಣ, ಮಹೇಶ್ ಊಗಿನಹಳ್ಳಿ ವೇದಿಕೆಯಲ್ಲಿದ್ದರು.ಗೀತಗಾಯನ, ಕುವೆಂಪು ಕಾವ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೇಷ್ಮೆ ಬೆಳೆಗಾರರ, ಅಧಿಕಾರಿಗಳ ಸಭೆ
ದೇವನಹಳ್ಳಿ: ರೇಷ್ಮೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಸಹಾಯಧನ ಬಿಡುಗಡೆ ಮಾಡುವಲ್ಲಿ ಇಲಾಖಾ ಅಧಿಕಾರಿಗಳು ಅವೈಜ್ಞಾನಿಕವಾಗಿ ದಾಖಲೆ ಪತ್ರಗಳನ್ನು ಕೇಳುತ್ತಿದ್ದು ರೈತರು ದಾಖಲೆಗಳನ್ನು ನೀಡಲಾಗದೆ ಇರುವುದರಿಂದ ಸಹಾಯಧನ ಬಿಡುಗಡೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ.
 ಈ ಹಿನ್ನಲೆಯಲ್ಲಿ ಜ.3 ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ಇಲಾಖೆಯ ಉಪನಿರ್ದೇಶಕರು ಹಾಗೂ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ರೇಷ್ಮೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಲ್ಯಾಣ ಕುಮಾರ್ ತಿಳಿಸಿದ್ದಾರೆ.
ಪ್ರಕಾಶ್ ಅವರನ್ನು
ಬೆಂಬಲಿಸಲು ಮನವಿ
ದೇವನಹಳ್ಳಿ: ಜ.5 ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ದೇವನಹಳ್ಳಿ ತಾಲೂಕು ಕೋಡಗುರ್ಕಿಯ ರೈತ ಮುಖಂಡರು ಹಾಗೂ ಸಫಲ್ ಕಾರ್ಯದರ್ಶಿ ಎಚ್.ಪ್ರಕಾಶ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಒಕ್ಕಲಿಗ ಮತದಾರರು ಮತ ನೀಡಿ ಬೆಂಬಲಿಸಬೇಕೆಂದು ದೇವನಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷ ಗಾರೆ ರವಿಕುಮಾರ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.