ಅರಳಿದ ಮಾವು; ಭರ್ಜರಿ ಹೂವು
ಮತ್ತೀಕೆರೆ ಜಯರಾಮ್
ರಾಮನಗರ: ಸತತ ಮೂರು ವರ್ಷ ಕಾಡಿದ ಭೀಕರ ಬರದ ನಡುವೆಯೂ ಮಾವಿನ ಮರಗಳು ಸಮೃದ್ಧ ಹೂ ಕಚ್ಚಿ ಕಂಗೊಳಿಸುತ್ತಿವೆ. ಜಿಗಿ ಹುಳು ಮತ್ತು ಬೂದಿ ರೋಗ ಅದೃಷ್ಟವಶಾತ್ ನಿಯಂತ್ರಣಕ್ಕೆ ಬಂದಿದೆ. ರೈತರು ಈ ಬಾರಿ ಬಂಪರ್ ಇಳುವರಿಯೊಂದಿಗೆ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಮಾವು ಉತ್ಪಾದನೆಯಲ್ಲಿ ರಾಮನಗರ ಜಿಲ್ಲೆ 2ನೇ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟವಿದ್ದು, ವಾರ್ಷಿಕ 22 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತಿದೆ. ಈಚಿನ ವರ್ಷಗಳಲ್ಲಿ ಮಾವು ಲಾಭದಾಯಕ ಬೆಳೆಯಾಗಿ ರೈತನ ಕೈ ಹಿಡಿದಿದೆ. ಮಾವು ಉತ್ಪಾದನೆಯಲ್ಲಿ ಒಂದು ವರ್ಷ ಏರು ಹಂಗಾಮವಾದರೆ, ಮರು ವರ್ಷ ಇಳಿ ಹಂಗಾಮ. ಆದರೆ, ಈ ಜಿಲ್ಲೆ ರೈತರ ಪಾಲಿಗೆ ಕಳೆದೆರಡು ವರ್ಷಗಳೂ ಇಳಿ ಹಂಗಾಮವೇ. ಉತ್ಪಾದನೆ ಕುಸಿತದಿಂದ ಕಂಗೆಟ್ಟಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಬೀರಿದೆ.
ಬಚಾವಾದ ಬೆಳೆ: ನವೆಂಬರ್ ಅಂತ್ಯದಲ್ಲೇ ಮಾವು ಹೂ ಕಚ್ಚುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ಡಿಸೆಂಬರ್, ಜನವರಿ ನಡುವೆ ಹೂ ಕಚ್ಚಿವೆ. ಸ್ವಲ್ಪ ತಡವಾದರೂ ಇಡೀ ಮರಗಳು ಹೂ ಕಚ್ಚಿ, ನಳ ನಳಿಸುತ್ತಿವೆ. ಹವಾಮಾನ ವೈಪರೀತ್ಯ ಎದುರಾಗದಿದ್ದರೆ ಖಂಡಿತ ಅಧಿಕ ಇಳುವರಿ ಲಭಿಸಲಿದೆ. ಹೂ ಕಚ್ಚುವ ಹಂತದಲ್ಲೇ ಮಾವಿಗೆ ಜಿಗಿ ಹುಳು ಮತ್ತು ಬೂದಿ ರೋಗ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಅದು ವ್ಯಾಪಕವಾಗಿ ಹರಡಿ ರೈತರ ಭವಿಷ್ಯವನ್ನೇ ಮಸುಕಾಗಿಸುವ ಆತಂಕ ಮೂಡಿತ್ತು. ಔಷಧ ಸಿಂಪಡಣೆ ಜತೆಗೆ ಅದೃಷ್ಟವಶಾತ್ ರೋಗ ನಿಯಂತ್ರಣಕ್ಕೆ ಬಂದಿದ್ದು, ಬೆಳೆ ಬಚಾವಾಗಿದೆ.
ತೇವಾಂಶ ಅಗತ್ಯ: ಸತತವಾಗಿ ಕಾಡುತ್ತಿರುವ ಮಳೆ ಕೊರತೆ ಮತ್ತು ಭೀಕರ ಬರದಿಂದ ಜಿಲ್ಲೆಯಲ್ಲಿ ತೆಂಗು ಬೆಳೆ ನಷ್ಟಕ್ಕೀಡಾಗಿದೆ. ಶೇ.15 ರಿಂದ 20ರಷ್ಟು ಮಾವಿನ ಮರಗಳೂ ಒಣಗಿವೆ. ಉಳಿದ ಮರಗಳು ತೇವಾಂಶದ ಕೊರತೆ ಇದ್ದಾಗ್ಯೂ ಉತ್ತಮ ಹೂ ಕಚ್ಚಿರುವುದು ಅದೃಷ್ಟವೇ ಸರಿ.
ಹೂ ಕಚ್ಚಿರುವ ಹಂತದಲ್ಲೇ ಮಾವಿನ ಮರಗಳ ಬುಡಕ್ಕೆ ಅಲ್ಪ ಪ್ರಮಾಣದಲ್ಲಿ ನೀರೊದಗಿಸಿ ತೇವಾಂಶ ಮೂಡಿಸಿ, ಕಾಯಿ ಕಚ್ಚುವ ಹಂತದಲ್ಲಿ ನಿಯಮಿತವಾಗಿ ನೀರೊದಗಿಸಿದ್ದೇ ಆದರೆ ಬಹುತೇಕ ಫಸಲು ಕೈಗೆ ಸಿಗುವ ಸಾಧ್ಯತೆ ಇದೆ. ಅಗತ್ಯ ಔಷಧೋಪಚಾರವನ್ನೂ ಮುಂದುವರೆಸುವುದು ಸೂಕ್ತ.
ಹವಾಮಾನವೂ ಮುಖ್ಯ: ಮಾವಿನ ಮರಗಳಲ್ಲಿ ಕಚ್ಚಿದ ಹೂ ಎಲ್ಲವೂ ಕಾಯಿ ಆಗುವುದಿಲ್ಲ. ಈ ಬೇಸಾಯದಲ್ಲಿ ಹವಾಮಾನವೂ ಪ್ರಮುಖ ಪಾತ್ರ ವಹಿಸುತ್ತದೆ. ಹೂ ಇರುವ ಹಂತದಲ್ಲಿ ಮೋಡ ಕವಿದ ವಾತಾವರಣ, ಅಕಾಲಿಕ ಮಳೆ ಎದುರಾದರೆ ಮಾವು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಕಳೆದ ವಾರ ಇದ್ದ ಮೋಡ ಕವಿದ ವಾತಾವರಣದಿಂದ ಅಲ್ಪ ಪ್ರಮಾಣದ ಹೂ ಉದುರಿದ್ದು, ರೈತರು ಮತ್ತೊಮ್ಮೆ ಔಷಧ ಸಿಂಪಡಿಸುವ ಅಗತ್ಯವಿದೆ. ಇನ್ನು ಮುಂದೆ ಹವಾಮಾನ ವೈಪರೀತ್ಯ ಎದುರಾಗದಿದ್ದರಷ್ಟೇ ರೈತರಿಗೆ ಕೈ ತುಂಬಾ ಲಾಭ ಸಿಗಲಿದೆ.
ಬಾರದ ವ್ಯಾಪಾರಿಗಳು: ಈ ಭಾಗದಲ್ಲಿ ಶೇ.75ರಷ್ಟು ರೈತರು ತೋಟಗಳನ್ನು ವರ್ಷದ ಲೆಕ್ಕದಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಿರುತ್ತಾರೆ. ಇನ್ನುಳಿದ ರೈತರಷ್ಟೇ ಸ್ವತಃ ಔಷಧೋಪಚಾರ ನಡೆಸಿ, ಮಾವು ಉತ್ಪಾದನೆ ಮಾಡಿ ನೇರ ಮಾರುಕಟ್ಟೆಗೆ ಒದಗಿಸುತ್ತಾ ಬಂದಿದ್ದಾರೆ. ಕಳೆದೆರಡು ವರ್ಷ ಮಾವು ಉತ್ಪಾದನೆ ಇಳಿಮುಖ ಆಗಿದ್ದರಿಂದ ಮುಂಗಡ ಪಾವತಿಸಿದ್ದ ಸಾಕಷ್ಟು ವ್ಯಾಪಾರಿಗಳು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಕೆಲವೇ ವ್ಯಾಪಾರಿಗಳು ತೋಟ ಖರೀದಿಸಿದ್ದಾರೆ. ಈ ಕಾರಣಕ್ಕೆ ಮಾವಿನ ಫಸಲಿಗೆ ಬೇಡಿಕೆಯೊಟ್ಟಿಗೆ ಬೆಲೆಯೂ ಕಡಿಮೆ ಆಗಿದೆ.
ರಾಮ್ಗೋಲ್ಡ್ ಮುಂದುವರಿಕೆ
ಈ ಹಿಂದೆ ತೋಟಗಾರಿಕೆ ಉಪ ನಿರ್ದೇಶಕರಾಗಿದ್ದ ಡಾ. ಕೃಷ್ಣ ಬೆಳ್ಳೂರು ಅವರು ರಾಮನಗರ ಜಿಲ್ಲೆಯಲ್ಲಿ ಉತ್ಪಾದಿಸುವ ಮಾವಿಗೆ ರಾಮ್ಗೋಲ್ಡ್ ಹೆಸರು ನೀಡಿ, ಪ್ರತಿ ವರ್ಷ ಇಲಾಖೆಯಿಂದಲೇ ಪರಿಷೆ ಆಯೋಜಿಸಿ ಉತ್ಪಾದಕರಿಂದ ಗ್ರಾಹಕರಿಗೆ ನೇರ ಮಾರಾಟ ಸೌಲಭ್ಯ ಕಲ್ಪಿಸುವ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದರು. ಪ್ರಸ್ತುತ ಡಾ. ಕೃಷ್ಣ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಹಾಲಿ ಉಪ ನಿರ್ದೇಶಕಿ ಹೇಮಾ ಕೂಡ ರಾಮ್ಗೋಲ್ಡ್ ಮಾವು ಪರಿಶೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇಲಾಖೆಯಿಂದ ರೈತರಿಗೆ ಸೂಕ್ತ ಮಾಹಿತಿ ಒದಗಿಸಿ ರೋಗ ನಿಯಂತ್ರಣದಲ್ಲೂ ಅವರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ನಿರ್ವಹಣೆ ಅತಿ ಮುಖ್ಯ
ರಾಮನಗರ ಜಿಲ್ಲೆಯಲ್ಲಿ ಮಾವಿನ ಮರಗಳು ಹೇರಳವಾಗಿ ಹೂ ಕಚ್ಚಿವೆ. ಕಾಯಿ ಹಂತಕ್ಕೆ ತಲುಪಿದ ನಂತರವೇ ನಿರೀಕ್ಷಿತ ಮಾವು ಉತ್ಪಾದನೆ ಪ್ರಮಾಣ ಅಂದಾಜಿಸಲು ಸಾಧ್ಯ. ಜಿಗಿ ಹುಳು ಮತ್ತು ಬೂದಿ ರೋಗ ನಿಯಂತ್ರಣಕ್ಕೆ ಬಂದಿದೆ. ರೈತರು ತೋಟಗಳನ್ನು ನಿರ್ವಹಣೆ ಮಾಡುವ ಆಧಾರದ ಮೇಲೆ ಉತ್ಪಾದನೆ ಅವಲಂಬಿಸಿರುತ್ತದೆ.
-ಹೇಮಾ,
ಉಪ ನಿರ್ದೇಶಕಿ,
ತೋಟಗಾರಿಕೆ ಇಲಾಖೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

