ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತ ಬೇಡ
ರಾಮನಗರ : ಶಿಕ್ಷಣ ಎಂಬುದು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ತುಂಬಿ, ಬದುಕಿನ ಪಾಠವನ್ನು ತಿಳಿಸಿಕೊಡುವ ಶಿಕ್ಷಣವನ್ನು ಪೋಷಕರು ತಮ್ಮ ಮಕ್ಕಳಿಗೆ ಕೊಡಿಸಬೇಕು ಎಂದು ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ತಿಳಿಸಿದರು.
ನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ವೀರಶೈವ ಲಿಂಗಾಯಿತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಆತ್ಮಸ್ಥೈರ್ಯ ಕಳೆದುಕೊಂಡ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಮಕ್ಕಳ ಅಭಿರುಚಿಯನ್ನು ಅರ್ಥೈಸಿಕೊಂಡು, ಅವರಿಗೆ ಇಷ್ಟವಾದ ವಿಷಯಗಳನ್ನೇ ಅಭ್ಯಸಿಸುವಂತೆ ಪ್ರೋತ್ಸಾಹ ನೀಡಬೇಕು. ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಶಿಕ್ಷಣದ ಜತೆಗೆ ಸಂಸ್ಕೃತಿ, ಧರ್ಮ, ಪ್ರೀತಿ, ದಯೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಅವರು ಸಲಹೆ ನೀಡಿದರು.
ನಿಷ್ಪ್ರಯೋಜಕ: ಮಾನವೀಯ ಮೌಲ್ಯಗಳಿಗೆ ಸ್ಪಂದಿಸದ ಯಾವುದೇ ವಿದ್ಯೆ, ಪದವಿ, ಅಧಿಕಾರ ನಿಷ್ಪ್ರಯೋಜಕ. ಅಧಿಕಾರ ಶಾಶ್ವತವಲ್ಲ. ನಾವು ನಂಬಿರುವ ಮೌಲ್ಯ, ತತ್ವ, ಸಿದ್ಧಾಂತಗಳ ಮೇಲಿನ ಬದ್ಧತೆಯಿಂದ ಸಮಾಜದಲ್ಲಿ ಉತ್ತಮ ನೆಲೆ ಕಂಡುಕೊಳ್ಳಬಹುದು ಎಂದು ಸೋಮಶೇಖರ್ ಹೇಳಿದರು. ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ನಡೆಸುವ ಹೋರಾಟಗಳಿಂದ ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಅಂತಹ ಕಾರ್ಯವನ್ನು ಮಾಡಿದ ಬಸವಣ್ಣನವರು ನಮ್ಮೆಲ್ಲರ ನಡುವೆ ಇಂದಿಗೂ ಶಾಶ್ವತವಾಗಿ ಉಳಿದಿದೆ. ಅವರ ಜೀವನ ಸಂದೇಶಗಳು ಶರಣ ಸಾಹಿತ್ಯದಲ್ಲಿ ಪ್ರಸ್ತುತವಿದ್ದು, ಶರಣ ಸಾಹಿತ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂದರು.
ಭವಿಷ್ಯ ಹಾಳು: ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುವ ಮೂಲಕ ಭವಿಷ್ಯದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಉನ್ನತ ಹುದ್ದೆ ಅಲಂಕರಿಸಿ ಹೆಚ್ಚು ಹಣಗಳಿಸಬೇಕು ಎನ್ನುವ ಮಹದಾಸೆ ಹೊಂದಿರುತ್ತಾರೆಯೇ ವಿನಃ ವಿಚಾರವಂತರೂ, ಸುಸಂಸ್ಕೃತರಾಗಬೇಕೆಂದು ಬಯಸುವುದಿಲ್ಲ ಎಂದು ವಿಷಾದಿಸಿದರು.
ಅನ್ನದಾನಕ್ಕಿಂತಲೂ ಶ್ರೇಷ್ಠದಾನವಾದುದು ವಿದ್ಯಾದಾನ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತಹ ಪ್ರತಿಭಾ ಪುರಸ್ಕಾರ, ಬಡವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ಸಮಾಜದಲ್ಲಿ ನಿರಂತವಾಗಿ ನಡೆಯುತ್ತಿರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ 65 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳ್ಳಾರಿ ಭಟ್ಟಮ್ಮ ಅವರ ಕುಸುಮಾಂಜಲಿ ಕೃತಿಯನ್ನು ಹೊನ್ನಮ್ಮ ಗವಿಮಠದ ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು. ರಾಷ್ಟ್ರೀಯ ಬಸವದಳದ ಬಿ.ಪಿ.ರೇಣುಕಪ್ಪ ಮತ್ತು ತಂಡದವರು ವಚನಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ವಿದ್ವಾನ್ ರೇಣುಕಾರಾದ್ಯ ಗುರೂಜಿ, ಎಂಸಿಎ ಮಾಜಿ ಅಧ್ಯಕ್ಷ ಮರಿಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಶಿವರುದ್ರಯ್ಯ, ವೀರಶೈವ ಮುಖಂಡರಾದ ಬಸವಲಿಂಗಯ್ಯ,
ಜಿ.ಚಿಕ್ಕಹೊನ್ನಯ್ಯ, ಜಿ.ಬಿ. ಬಸವರಾಜು, ಜಿ.ಎಸ್. ಶಿವರುದ್ರಯ್ಯ, ರುದ್ರೇಶ್, ರಾಜಶೇಖರ್, ಎಸ್.ಆರ್.ನಾಗರಾಜು, ಎ.ಜೆ.ಸುರೇಶ್, ಎಂ.ಆರ್. ಉಮಾಪತಿ, ಪಿ. ಶಿವಾನಂದ ಮತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

